Robo Shankar: ಶೂಟಿಂಗ್ ಸೆಟ್‌ನಲ್ಲಿ ಕುಸಿದು ಬಿದ್ದಿದ್ದ ಖ್ಯಾತ ನಟ ರೋಬೋ ಶಂಕರ್ ನಿಧನ
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ರೋಬೋ ಶಂಕರ್ ನಿಧನರಾಗಿದ್ದಾರೆ. ಇತ್ತೀಚೆಗೆ ಅವರು ಸಿನಿಮಾ ಚಿತ್ರೀಕರಣದ ವೇಳೆ ಮೂರ್ಛೆ ಹೋಗಿದ್ದರು. ಬಳಿಕ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ತಮಿಳು ಚಿತ್ರರಂಗದಲ್ಲಿ ನಟ ಮತ್ತು ಹಾಸ್ಯನಟರಾಗಿ ಶಂಕರ್ ಜನಪ್ರಿಯತೆ ಪಡೆದಿದ್ದರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ರೋಬೋ ಶಂಕರ್ ಅವರ ಪತ್ನಿ, ನಟಿ ಪ್ರಿಯಾಂಕಾ ಶಂಕರ್ ಮತ್ತು ಅವರ ಪುತ್ರಿ ಇಂದ್ರಜಾ ಶಂಕರ್ ಅವರನ್ನು ಅಗಲಿದ್ದಾರೆ.
ಶಂಕರ್ ಅವರು ಬುಧವಾರ ಚಿತ್ರೀಕರಣದ ಸಮಯದಲ್ಲಿ ಸೆಟ್‌ನಲ್ಲಿ ಪ್ರಜ್ಞೆ ತಪ್ಪಿದ್ದರು. ಬಳಿಕ ಅಲ್ಲಿದ್ದವರು ನಟನನ್ನು ಚೆನ್ನೈನ ಆಸ್ಪತ್ರೆಗೆ ಕರೆದೊಯ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಯಿತು. ಬಳಿಕವೂ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ತೀವ್ರ ಜಠರ ಕರುಳಿನ ರಕ್ತಸ್ರಾವ ಮತ್ತು ಹೊಟ್ಟೆ ಸಮಸ್ಯೆ ಸೇರಿದಂತೆ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಅವರ ಆರೋಗ್ಯ ಸರಿಯಾಗಲಿಲ್ಲ. ಗುರುವಾರ ತಡರಾತ್ರಿ ಅವರು ಚಿಕಿತ್ಸೆ ಫಲಿಸದೆ ಚೆನ್ನೈನ ಜೆಇಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಧುರೈ ಮೂಲದವರಾದ ಶಂಕರ್ ತಮ್ಮ ರೋಬೋಟ್ ಶೈಲಿಯ ನೃತ್ಯ ಚಲನೆಗಳಿಗಾಗಿ "ರೋಬೋ" ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು. 2000ರ ದಶಕದಲ್ಲಿ ಹಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು ನಂತರ ಜನಪ್ರಿಯ ರಿಯಾಲಿಟಿ ಶೋ ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮದ ಮೂಲಕ ಫೇಮಸ್ ಆಗಿದ್ದರು. ಶಂಕರ್ ಅವರು ಕೆಲವು ವರ್ಷಗಳ ಹಿಂದೆ ಕಾಮಾಲೆ ರೋಗಕ್ಕೆ ದೀರ್ಘಕಾಲದ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಕಾರಣಕ್ಕೆ ಅವರು ಕೆಲಕಾಲ ಬ್ರೇಕ್ ಪಡೆದಿದ್ದರು. ಆಗ ದಿಢೀರ್ ತೂಕ ಇಳಿಕೆಯಿಂದ ಅಭಿಮಾನಿಗಳು ಆತಂಕಗೊಂಡಿದ್ದರು. ಬಳಿಕ ಶಂಕರ್ ಚೇತರಿಸಿಕೊಂಡಿದ್ದರು.
ಗಣ್ಯರಿಂದ ಸಂತಾಪ
ಶಂಕರ್ ಅವರ ನಿಧನದ ಸುದ್ದಿ ತಿಳಿದ ಕೂಡಲೇ ಕಾಲಿವುಡ್ ನಟರಾದ ಕಮಲ್ ಹಾಸನ್, ಕಾರ್ತಿ ಮತ್ತು ರಾಧಿಕಾ ಶರತ್‌ಕುಮಾರ್, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಗಣ್ಯರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಂತಾಪ ಸೂಚಿಸಿದ್ದಾರೆ. ನಟರಾದ ಧನುಷ್, ಶಿವಕಾರ್ತಿಕೇಯನ್ ಮತ್ತು ಮನೋ ಸೇರಿದಂತೆ ಇತರರು ಶಂಕರ್ ಅವರ ಕುಟುಂಬವನ್ನು ಭೇಟಿ ಮಾಡಿ ಅಂತಿಮ ನಮನ ಸಲ್ಲಿಸಿದ್ದಾರೆ. ನಟ ಧನುಷ್ ರೋಬೋ ಶಂಕರ್ ಅವರೊಂದಿಗೆ ಕೆಲಸ ಮಾಡಿದ್ದರು. ನಿನ್ನೆ ನಿಧನದ ಸುದ್ದಿ ತಿಳಿದು ಮಧ್ಯರಾತ್ರಿಯೇ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ನಟ ಧನುಷ್ ಅಭಿನಯದ ಮಾರಿ, ವಿಶಾಲ್ ಅವರ 'ಇರುಂಬು ತಿರೈ,' ವಿಷ್ಣು ವಿಶಾಲ್ ಅವರ 'ವೆಲ್ಲೈನು ವಂದುತ್ತ ವೆಲೈಕಾರನ್' ಚಿತ್ರಗಳಲ್ಲಿ ಶಂಕರ್ ತಮ್ಮ ಅಭಿನಯದಿಂದಾಗಿ ಹೆಸರುವಾಸಿಯಾಗಿದ್ದರು. ಅವರ ಹಾಸ್ಯದ ಸಮಯ ಮತ್ತು ವಿಶಿಷ್ಟವಾದ ದೇಹಭಾಷೆಯಿಂದ ಗಮನ ಸೆಳೆದಿದ್ದರು. ಶಂಕರ್ ಅವರ ನಿಧನಕ್ಕೆ ಇಡೀ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.












Click it and Unblock the Notifications