ಅನಂತ್ ನಾಗ್ ಭೇಟಿಯಾದ ಸುಧಾರಾಣಿ: ವಿಶೇಷ ಅನುಭವ ಹಂಚಿಕೊಂಡ ನಟಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಇತ್ತೀಚಿಗೆ ಪದ್ಮಭೂಷಣ ಪ್ರಶಸ್ತಿ ಪಡೆದ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮ ಕಲಾ ಸೇವೆಗೆ ರಾಷ್ಟ್ರಮಟ್ಟದ ಗೌರವ ಪಡೆದಿರುವ ಅನಂತ್ ನಾಗ್ ಅವರನ್ನು ಅಭಿನಂದಿಸಿರುವ ನಟಿ ಸುಧಾರಾಣಿ ಅವರೊಂದಿಗೆ ನಟಿಸಿದ್ದ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಸುಧಾರಾಣಿ ವಿಡಿಯೋ ಜೊತೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
1981ರಲ್ಲಿ, ಅನುಪಮಾ ಸಿನಿಮಾದಲ್ಲಿ ಅನಂತ್ ನಾಗ್ ಸರ್ ಜೊತೆ ಬಾಲ ನಟಿಯಾಗಿ ತೆರೆ ಹಂಚಿಕೊಂಡಾಗಿನಿಂದ ಇಲ್ಲಿಯವರೆಗೂ ಅವರೊಡನೆ ಒಳ್ಳೆಯ ಒಡನಾಟ ಇದೆ. ಅವರನ್ನು ಭೇಟಿ ಮಾಡೋಕೆ ಕಾರಣವೇ ಬೇಕಿಲ್ಲ, ಪ್ರತಿ ಸಾರಿ ಭೇಟಿ ಮಾಡಿ ಮಾತನಾಡಿದಾಗ ಅದೊಂದು ಹೊಸ ರೀತಿಯ ವಿಭಿನ್ನ ಅನುಭವ. ಕಲಿಯೋದು ಬಹಳ ಇರತ್ತದೆ, ಸದಾ ನೆನಪಲ್ಲಿ ಉಳಿಯುವಂಥಹ ಕ್ಷಣಗಳಾಗಿರುತ್ತದೆ.

ಇತ್ತೀಚೆಗೆ ಅನಂತ್ ನಾಗ್ ಸರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರುವ ವಿಚಾರ ಕೇಳಿ ತುಂಬಾ ಖುಷಿಯಾಯ್ತು. ಅವರು ಪ್ರಶಸ್ತಿ ಸ್ವೀಕರಿಸೋದನ್ನು ಪ್ರತ್ಯಕ್ಷವಾಗಿ ನೋಡೋಕಾಗಲ್ಲ, ಆದರೆ ಅಂತಹ ಮೇರು ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯ ಜೊತೆ ಸಮಯ ಕಳೆಯುವ ಅವಕಾಶ ಅವರ ಸ್ವಗೃಹದಲ್ಲೇ ಸಿಗತ್ತೆ ಅಂದ್ರೆ ಬಿಡೋಕಾಗತ್ತಾ? ನಾನು ಮತ್ತು ಮಾಳವಿಕಾ ಅವಿನಾಶ್ ಇಬ್ಬರೂ ಅನಂತ್ ನಾಗ್ ಸರ್ ಅವರನ್ನು ಭೇಟಿ ಮಾಡಿ 2 ಗಂಟೆಗಳ ಕಾಲ ಅವರ ಜೊತೆ ಸಮಯ ಕಳೆದೆವು.
ಯಾವಾಗಲೂ ಮಾತಾಡೋ ಹಾಗೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದರು, ತಿಳ್ಕೊಳ್ಳೋ ವಿಚಾರಗಳು ಬೇಕಾದಷ್ಟಿತ್ತು. ಅವರ ಜೊತೆ ಕೂತು ಅವರ ಮಾತುಗಳನ್ನು ಕೇಳುತ್ತಿದ್ದರೆ ಅವರ ಎನರ್ಜಿ ನೋಡಿ ನಮಗೆ ಎನರ್ಜಿ ಮತ್ತು ಪಾಸಿಟಿವಿಟಿ ಬರತ್ತದೆ. ಜೊತೆಗೆ ಅವರ ಸುಂದರವಾದ ಕುಟುಂಬ, ಗಾಯತ್ರಿ ಅವರು ಹಾಗೂ ಅವರ ಮಗಳು ಅದಿತಿ. ನನ್ನ ಮಗಳು ನಿಧಿಗೆ, ಅದಿತಿ ಸ್ಪೂರ್ತಿ ಆಗಿರಬೇಕು ಅಂತಾ ನಾನು ಯಾವಾಗಲೂ ಹೇಳುತ್ತಿದೆ. ಅದಿತಿ ಮದುವೆಗೆ ಹೋಗಿದ್ದ ನೆನಪುಗಳಿರಬಹುದು ಅಥವಾ ಅವರ ಮನೆಗೆ ಗಣಪತಿ ಹಬ್ಬಕ್ಕೆ ಹೋಗಿದ್ದ ನೆನಪುಗಳು ಇದೆಲ್ಲವನ್ನು ಅವರ ಕುಟುಂಬದ ಜೊತೆ ಕೂತು ಮೆಲುಕು ಹಾಕೋ ಅವಕಾಶ ಸಿಕ್ಕಿತು.

ಅನಂತ್ ನಾಗ್ ಸರ್ ಜೊತೆ ಏಳೆಂಟು ಸಿನಿಮಾಗಳಲ್ಲಿ ನಟಿಸಿ, ಅವರೊಡನೆ ಸಮಯ ಕಳೆದಂಥ ಅನುಭವ, ಅವರಿಂದ ಕಲಿತದ್ದು ಸಾಕಷ್ಟಿದೆ. ಅದೆಲ್ಲವನ್ನು ಮುಂದೆ ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತೇನೆ. ಮತ್ತೊಮ್ಮೆ ಅಭಿನಂದನೆಗಳು ಅನಂತ್ ನಾಗ್ ಸರ್. ಇನ್ನಷ್ಟು ಉನ್ನತ ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ನಿಮ್ಮನ್ನು ಅರಸಿ ಬರಲಿ. ಕನ್ನಡ ಚಿತ್ರರಂಗಕ್ಕೆ ನೀವು ಸಲ್ಲಿಸಿರುವ ಸೇವೆ ಭಾರತಾದ್ಯಂತ ಪಸರಿಸಲಿ ಎಂದು ಸುಧಾರಾಣಿ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications