ನಟ ವಿಷ್ಣುವರ್ಧನ್ ಸ್ಮಾರಕವಿದ್ದ ಭೂಮಿ ಸರ್ಕಾರದಿಂದ ಸ್ವಾಧೀನ? ಸಚಿವೆ ಶೋಭಾ ಕರಂದ್ಲಾಜೆ ಪತ್ರ
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ (Vishnuvardhan) ಅಂತ್ಯಕ್ರಿಯೆ ನೆರವೇರಿದ್ದ ಸ್ಮಾರಕದ ಜಾಗವನ್ನು ತೆರವು ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನೆಲಸಮ ಮಾಡಿರುವ ಜಾಗದಲ್ಲೇ ಮತ್ತೆ ಅವರ ಸ್ಮಾರಕ ಕಟ್ಟಬೇಕು ಎಂಬ ಬೇಡಿಕೆ ಇಟ್ಟು ವಿಷ್ಣುದಾದಾ ಅಭಿಮಾನಿಗಳು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ನಟ ಕಿಚ್ಚ ಸುದೀಪ್, ಧ್ರುವ ಸರ್ಜಾ ಸೇರಿ ಹಲವರು ಬೆಂಬಲ ನೀಡಿದ್ದಾರೆ. ಇದೀಗ ಬಿಜೆಪಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡ ಈ ಹೋರಾಟಕ್ಕೆ ಸಾಥ್ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಆ ಭೂಮಿಯನ್ನು ತಕ್ಷಣವೇ ಭೂಸ್ವಾಧೀನಪಡಿಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ಕನ್ನಡ ಚಲನಚಿತ್ರ ರಂಗಕ್ಕೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಕೊಡುಗೆ ಅಪಾರ. ಇಡೀ ಕರ್ನಾಟಕಕ್ಕೆ ಅವರ ಬಗ್ಗೆ ಹೆಮ್ಮೆ ಇದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಸ್ಮಾರಕ, ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸದರಿ ಭೂಮಿಯನ್ನು ತಕ್ಷಣವೇ ಸ್ವಾಧೀನಪಡಿಸಿಕೊಳ್ಳಬೇಕು. ಆ ಭೂ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರು ನಿಧನರಾದಾಗ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇದೇ ಅವರ ಮೂಲ ಸಮಾಧಿ ಜಾಗ, ಸ್ಮಾರಕ ಎಂದು ಅಭಿಮಾನಿಗಳು ಆರಾಧಿಸುತ್ತಿದ್ದರು. ಆದರೆ ಈ ಸ್ಟುಡಿಯೋ ಜಾಗದ ಭೂವಿವಾದದಲ್ಲಿ ಸಿಲುಕಿದ್ದರಿಂದ ಇಲ್ಲಿ ಅಧಿಕೃತವಾಗಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲು ಸಾಧ್ಯವಾಗಲಿಲ್ಲ. ಹಲವು ವರ್ಷಗಳ ಹೋರಾಟಕ್ಕೆ ಜಯ ಸಿಗಲಿಲ್ಲ. ಕೊನೆಗೆ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲಾಗಿತಾದರೂ, ಅಭಿಮಾನಿಗಳು ಮಾತ್ರ ಅಭಿಮಾನ್ ಸ್ಟುಡಿಯೋದ ಮೂಲ ಜಾಗವನ್ನೇ ಸ್ಮಾರಕ ಎಂದು ಭಾವಿಸಿದ್ದರು. ಆದರೆ ಅಲ್ಲಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಯಿತು, ಇತ್ತೀಚೆಗೆ ಸ್ಮಾರಕವನ್ನು ನೆಲಸಮ ಮಾಡಲಾಗಿದೆ. ಇದರಿಂದ ವಿಷ್ಣು ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ.
ಸ್ಮಾರಕ ನೆಲಸಮ ಮಾಡಿರುವುದನ್ನು ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಕೂಡ ಖಾರವಾಗಿ ಖಂಡಿಸಿದ್ದಾರೆ. ಆ ಜಾಗದಲ್ಲಿ ಸ್ಮಾರಕ ನಿರ್ಮಿಸಲು ನಾನು ನಿಲ್ಲುತ್ತೇನೆ. ಎಲ್ಲಿಗೇ ಬೇಕಾದರೂ ಹೋಗ್ತೀನಿ ಎಂದು ಅಭಿಮಾನಿಗಳೊಂದಿಗೆ ಧ್ವನಿ ಎತ್ತಿದ್ದಾರೆ. ಸರ್ಕಾರ ಈ ಸ್ಮಾರಕದ ಜಾಗ ಉಳಿಸಿಕೊಡಬೇಕು. ಇದಕ್ಕೆ ಬೇಕಾಗುವ ಎಲ್ಲ ಹಣಕಾಸು ನೆರವನ್ನು ನಾನೇ ಭರಿಸುತ್ತೇನೆ. ಅದೇ ಜಾಗದಲ್ಲಿ ಸ್ಮಾರಕ ನಿರ್ಮಿಸಲು ಏನೆಲ್ಲ ಸಾಧ್ಯವೋ ಅದಕ್ಕೆ ನಾನು ಸಿದ್ಧ ಎಂದು ಕರೆ ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ ಏನಂದ್ರು?
ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವ ಬಗ್ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಡಾ.ವಿಷ್ಣುವರ್ಧನ್ ಸರ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವುದು ಖಂಡನೀಯ. ಅವರನ್ನು ಹೃದಯಪೂರ್ವಕವಾಗಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಗೂ ಇದು ಅತೀವ ನೋವುಂಟುಮಾಡಿದೆ. ನಾಡಿನ ಮೇರು ನಟರೊಬ್ಬರ ವಿಚಾರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಕಲಾಸೇವೆಗೆ ಅಗೌರವ ತಂದಂತೆ ಎಂದು ಬೇಸರ ಹೊರಹಾಕಿದ್ದಾರೆ.












Click it and Unblock the Notifications