Murali Mohan Death: ಉಪೇಂದ್ರ, ಶಿವರಾಜ್‌ಕುಮಾರ್ ಚಿತ್ರಗಳ ನಿರ್ದೇಶಕ ಎಸ್ ಮುರಳಿ ಮೋಹನ್ ನಿಧನ
ಬೆಂಗಳೂರು, ಆಗಸ್ಟ್ 13: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ಕನ್ನಡದ ಹಿರಿಯ ನಿರ್ದೇಶಕ ಮುರುಳಿ ಮೋಹನ್ ಅವರು ಇಂದು (13 ಆಗಸ್ಟ್ 2025) ನಿಧನರಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಸಂತ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ, ರಿಯಲ್ ಸ್ಟಾರ್ ಉಪೇಂದ್ರ ನಟನೆಯ ನಾಗರಹಾವು ಸಿನಿಮಾಗಳು ಸಿನಿಪ್ರಿಯರಿಗೆ ಗೊತ್ತು. ಹೀಗೆ ಹಲವು ಸಿನಿಮಾಗಳನ್ನು ಕನ್ನಡ ಚಿತ್ರರಂಗ ಹಾಗೂ ಚಿತ್ರರಸಿಕರಿಗೆ ಕೊಟ್ಟಿರುವವರು ನಿರ್ದೇಶಕರಾದ ಎಸ್ ಮುರಳಿ ಮೋಹನ್ ಅವರು ಇಂದು ನಿಧನರಾಗಿದ್ದಾರೆ.
ಕನ್ನಡದ ಹಿರಿಯ ನಿರ್ದೇಶಕ ಎಸ್ ಮುರಳಿ ಮೋಹನ್ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೇ ಇಂದು ಚಿಕಿತ್ಸೆ ಫಲಿಸದೇ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮುರಳಿ ಮೋಹನ್ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.ಅಂದಹಾಗೇ ನಿರ್ದೇಶಕ ಮುರಳಿ ಮೋಹನ್ ಅವರು ಐದಾರು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೇ ತಮ್ಮ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಎಂಬುದಾಗಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಸತತ 36 ವರ್ಷಗಳು ಚಿತ್ರರಂಗದಲ್ಲಿ ಎಸ್ ಮುರಳಿ ಮೋಹನ್ ಸೇವೆ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಖ್ಯಾತಿ ಪಡೆದಿರುವವರು ಮುರಳಿ ಮೋಹನ್. ಹ್ಯಾಟ್ರಿಕ್ ಹೀರೋ ಶಿವರಾಜ್, ರಿಯಲ್ ಸ್ಟಾರ್ ಉಪೇಂದ್ರ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಕೆಲಸ ಮಾಡಿದ್ದು, ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ಮುರಳಿ ಮೋಹನ್ ಅವರು ತಮ್ಮ ನಿರ್ದೇಶನ, ನಟನೆ ಹಾಗೂ ಸಂಭಾಷಣೆ ಬರೆಯುವ ವೃತ್ತಿಯಿಂದ ಸಾಕಷ್ಟು ದೂರವೇ ಉಳಿದಿದ್ದರು. ಕಾರಣ, ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು. ಕಿಡ್ನಿ ಸಮಸ್ಯೆಯಿಂದ ಅವರು ಹಲವು ತಿಂಗಳಿಗಳಿಂದ ಬಳಲುತ್ತಿದ್ದರು. ಅಲ್ಲದೇ ಹಣದ ಸಮಸ್ಯೆಯ ಬಗ್ಗೆಯೂ ಮುರಳಿ ಮೋಹನ್ ಅವರು ಹೇಳಿಕೊಂಡಿದ್ದರು.
ಎಸ್ ಮುರಳಿ ಮೋಹನ್ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ, ಸಂಭಾಷಣೆ ಬರೆದು, ಸಿನಿಮಾವನ್ನೇ ಉಸಿರಾಗಿಸಿಕೊಂಡವರು. ಅದರೆ, ಈಗ ಇತ್ತೀಚೆಗೆ ಅದನ್ನು ಮಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಮುರಳಿ ಮೋಹನ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ನಿರ್ದೇಶನ ನಿಲ್ಲಿಸಿದ್ದರು. ಕೋವಿಡ್ ಸಮಯದಿಂದಲೇ ಅವರಿಗೆ ಕಿಡ್ನಿ ಸಮಸ್ಯೆ ಇತ್ತು, ಡಯಾಲಿಸಿಸ್‌ನಲ್ಲಿ ಇದ್ದರು, ಆದರೆ ಈಗ ಅದು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ಗೆ ಬಂದಿತ್ತು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುರಳಿ ಮೋಹನ್ ಅವರು ಮರಣ ಹೊಂದಿದ್ದಾರೆ.












Click it and Unblock the Notifications