Yash: ಆ ಮಾತು ಕೇಳಿ ಫುಲ್ ಟ್ರಿಗರ್ ಆಯ್ತು: ನಟ ಯಶ್ ಹೇಳಿದ್ದು ಯಾರ ಬಗ್ಗೆ?
ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿರುವ ಅವರ ಮೇಲೆ ಕ್ರೇಜ್ ಕಡಿಮೆಯೇನಿಲ್ಲ. ದೊಡ್ಡ ನಟರಾಗಿ ಬೆಳೆದ ಮೇಲೆ ಧಿಮಾಕು ತೋರುತ್ತಾರೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಆದರೆ, ನಟ ಯಶ್ ಅವರು ತಮ್ಮ ಮೊದಲ ಸಿನಿಮಾದಲ್ಲಿ ಅವಕಾಶ ಕೊಟ್ಟ ಎಲ್ಲರನ್ನೂ ವೇದಿಕೆ ಮೇಲೆ ನೆನೆಯುವ ಮೂಲಕ ಗೌರವ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಒಂದು ವಿಚಾರಕ್ಕೆ ಟ್ರಿಗರ್ ಆಗಿದ್ದ ಘಟನೆಯನ್ನು ಕೂಡ ಬಿಚ್ಚಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಅವರ ವಿಡಿಯೋಗಳು ವೈರಲ್ ಆಗಿವೆ.
"ಮನದ ಕಡಲು" ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ತಮ್ಮ ಮೊದಲ ಸಿನಿಮಾದ ಜರ್ನಿಯನ್ನು ಎಲ್ಲರ ಮುಂದೆ ಹೇಳಿಕೊಂಡರು. ಯಾವುದೋ ಒಂದು ಸಿನಿಮಾದಲ್ಲಿ ನನಗೆ ಅವಕಾಶ ಬಂದಿತ್ತು. ಮ್ಯಾನೇಜರ್‌ವೊಬ್ಬರು ನನಗೆ ಬರುವಂತೆ ಹೇಳಿ ಕಳಿಸಿದ್ರು. ಆದರೆ ನಾನು ಸೀರಿಯಲ್ ಶೂಟಿಂಗ್‌ನಲ್ಲಿ ಬಿಡುವಿಲ್ಲದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಕೊನೆಗೆ ಒಂದು ದಿನ ಹೋದೆ. ಅಲ್ಲಿ ಕೆಳಗೆ ಪ್ರೊಡಕ್ಷನ್ ಮ್ಯಾನೇಜರ್ ಸಿಕ್ಕಿ, ಎಲ್ಲಿ ಸರ್ ನೀವು ಕೈಗೇ ಸಿಗಲ್ಲ, ನಿಮ್ಮ ನಂಬರ್ ಕೂಡ ಇಲ್ಲ. ನಮ್ಮ ನಿರ್ಮಾಪಕರು, ನಿರ್ದೇಶಕರು ನಿಮ್ಮನ್ನ ಮೀಟ್ ಆಗಬೇಕು ಎಂದು ಕಾಯುತ್ತಿದ್ದಾರೆ ಎಂದರು.

ಆಗ ಹೌದಾ, ಎಂದು ನಾನು ಹೋಟೆಲ್ ರೂಂಗೆ ಹೋದೆ. ಆದರೆ ಅಲ್ಲಿದ್ದವರು ನಾನು ಗೊತ್ತೇ ಇಲ್ಲದಂತೆ ನಡೆದುಕೊಂಡರು. ಯಾರು? ಏನಾಗಬೇಕಿತ್ತು? ಅಂದ್ರು. ಆದರೆ ಮ್ಯಾನೇಜರ್ ನೋಡಿದ್ರೆ ನನಗೋಸ್ಕರವೇ ಕಾಯುತ್ತಿದ್ದಾರೆ ಅಂದ್ರು, ಇಲ್ಲಿ ನೋಡಿದ್ರೆ ಹೀಗೆ ಮಾತನಾಡಿಸಿದ್ರು ಎಂದು ಯಶ್ ಬೇಸರದ ಸಂಗತಿ ಹಂಚಿಕೊಂಡರು.
ನನಗೆ ಮೊದಲಿಗೆ ಇವರು ಯಾಕೋ ಡವ್ ಮಾಡ್ತಿದ್ದಾರೆ ಅನಿಸಿತ್ತು. ಆದರೂ ಅಂತಹ ವಿಚಾರಗಳಿಗೆ ಬಂದಾಗ ನಾನು ಟ್ರಿಗರ್ ಆಗೋದು ಜಾಸ್ತಿ. ಆದರೂ ಸುಮ್ಮನಾಗಿ, ನಾನು ಏನ್ ಸರ್ ಬರೋಕೆ ಹೇಳಿದ್ರಂತೆ? ಅಂದೆ. ಅದಕ್ಕೆ ಅವರು ಫೋಟೋ ಇದ್ಯಾ ನಿಂದು? ಅಂದ್ರು, ನಾನು ಇಲ್ಲ ಅಂದೆ. ನಟ ಆಗಬೇಕು ಅನ್ಕೊಂಡಿದ್ದೀರಿ ಯಾಕೆ ಫೋಟೋ ತೆಗೆಸಲ್ವಾ? ಅಂದ್ರು. ನಾನು ಫೋಟೋ ತಗೊಂಡು ಯಾರ ಹತ್ರಾನೂ ಹೋಗಿಲ್ಲ. ಯಾರು ನನಗೆ ಕೆಲಸ ಕೊಡ್ತಾರೋ ಭಕ್ತಿಯಿಂದ ಮಾಡ್ತೀನಿ ಅಂದೆ. ಆ ಮೇಲೆ ಅವರ ಬಳಿ ನಾನು ಕಥೆ ಏನೆಂದು ಕೇಳಿದ್ರೂ ಹೇಳಿಲ್ಲ. ಕೊನೆಗೆ ಅಲ್ಲಿಂದ ಹೊರಟು ಹೋದೆ ಎಂದು ಯಶ್ ಆ ಘಟನೆ ಹೇಳಿದರು.
ಅದಾದ ಕೆಲವು ದಿನಗಳ ನಂತರ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಅವಕಾಶ ಸಿಕ್ತು. ಆ ಸಿನಿಮಾದಲ್ಲಿ ಆಗ ನನ್ನ ಸ್ನೇಹಿತೆಯಾಗಿದ್ದ ರಾಧಿಕಾ ಅವರು ನಟಿಸುತ್ತಿರುವುದು ಗೊತ್ತಿತ್ತು. ವಿಶ್ ಕೂಡ ಮಾಡಿದ್ದೆ. ಶೂಟಿಂಗ್ ಕೊನೇ ಶೆಡ್ಯೂಲ್‌ನಲ್ಲಿತ್ತು. ಆದರೆ ನನಗೆ ಅಲ್ಲಿಂದ ಕರೆ ಬಂತು. ನಾನು ಮೊದಲಿಗೆ ನಂಬಲಿಲ್ಲ. ಎರಡನೇ ಸಲ ಫೋನ್ ಬಂತು. ಶೂಟಿಂಗ್ ಮುಗಿದ ಮೇಲೆ ನನ್ನ ಯಾಕೆ ಕರೀತಿದಾರೆ ಎಂದು ರಾಧಿಕಾಗೆ ಕೇಳಿದೆ.

ಆಗ ಆ ಸಿನಿಮಾದಲ್ಲಿ ನಟಿಸುತ್ತಿದ್ದವರ ಕಾಲಿಗೆ ಏಟಾದ ಕಾರಣ, ಅವಕಾಶ ನನಗೆ ಸಿಕ್ತು. ಆಗ ಅಲ್ಲಿಗೆ ಹೋದೆ, ಸಿನಿಮಾ ಕಥೆ ಕೂಡ ಹೇಳಿದ್ರು. ಒಳಗಿದ್ದವರು ನನ್ನ ನೋಡಿದ ಕೂಡಲೇ ನನ್ನನ್ನು ಗುರುತಿಸಿದ್ರು. ನಾನಿನ್ನೂ ಸಿನಿಮಾ ಮಾಡಿರಲಿಲ್ಲ. ಆ ನಿರ್ಮಾಪಕರು ಆಗಲೇ ಮುಂಗಾರು ಮಳೆ ಸಿನಿಮಾ ಮಾಡಿದ್ದರು. ಆದರೂ ನನ್ನನ್ನ ಗುರುತಿಸಿ ಬೆನ್ನು ತಟ್ಟಿದರು. ಅಂದು ಅವರು ಅವಕಾಶ ಕೊಟ್ಟಿದ್ದರಿಂದಲೇ ಇಂದು ಇದೆಲ್ಲ ಆಗಿದೆ. ನಾನು ನಿಮಗೆಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂದು ವೇದಿಕೆ ಮೇಲೆ ನೆನೆದರು.












Click it and Unblock the Notifications