Rishab Shetty: ಕಾಂತಾರ ಸಿನಿಮಾದಲ್ಲಿ ಅಪ್ಪು ಬದಲು ರಿಷಬ್ ನಟಿಸಿದ್ಯಾಕೆ? 'ಡಿವೈನ್ ಸ್ಟಾರ್' ಯಶಸ್ಸಿನ ಹಿಂದಿರುವುದು ಇವರೇ!
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು 70ನೇ ರಾಷ್ಟ್ರೀಯ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದು ಚಂದನವನಕ್ಕೆ ನಾಲ್ಕು ರಾಷ್ಟ್ರಪ್ರಶಸ್ತಿ ಗರಿ ಸಿಕ್ಕಿದೆ. ದೇಶವನ್ನೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕಾಂತಾರ ಮತ್ತು ಕೆಜಿಎಫ್ 2 ಸಿನಿಮಾಗಳು ತಲಾ ಎರಡು ಪ್ರಶಸ್ತಿ ಪಡೆದುಕೊಂಡಿವೆ. ಆಕ್ಷನ್ ಕೊರಿಯೋಗ್ರಫಿ, ಫೀಚರ್ ಫಿಲ್ಮ್ ವಿಭಾಗದಲ್ಲಿ ಕೆಜಿಎಫ್ ಪ್ರಶಸ್ತಿ ಗೆದ್ದಿದ್ದರೆ. ಕಾಂತಾರ ಸಿನಿಮಾದನ ನಟನೆಗಾಗಿ ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಮನರಂಜನೆಯ ಅತ್ಯುತ್ತಮ ಜನಪ್ರಿಯ ಪ್ರಶಸ್ತಿ ಕೂಡ ಕಾಂತಾರ ಸಿನಿಮಾ ಪಾಲಾಗಿದೆ.
ಕಾಂತಾರ ರಿಷಬ್ ಶೆಟ್ಟಿಗೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಸಿನಿಮಾ. ನಿರ್ದೇಶಕರಾಗಿ ರಿಷಬ್ ಶೆಟ್ಟಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸ.ಹಿ.ಪ್ರಾ. ಶಾಲೆ, ಕಾಸರಗೋಡು ಸಿನಿಮಾ ನಿರ್ದೇಶನಕ್ಕೆ ಅವರಿಗೆ ಹಲವು ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಅವರಲ್ಲಿನ ನಟನನ್ನು ಅನಾವರಣ ಮಾಡಿದೆ. ಅದಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದಕ್ಕಿದೆ.

ಮೊದಲಿಗೆ ಕಾಂತಾರ ಮಾಡಬೇಕು ಎಂದುಕೊಂಡಿದ್ದಾಗ ರಿಷಬ್ ಶೆಟ್ಟಿ ಮೊದಲು ಸಂಪರ್ಕಿಸಿದ್ದು ಪುನೀತ್ ರಾಜ್‌ಕುಮಾರ್ ಅವರನ್ನು, ಅಪ್ಪು ಕಾಂತಾರ ಸಿನಿಮಾದ ಕತೆ ಕೂಡ ಕೇಳಿದ್ದರು. ಆದರೆ ಅದಾಗಲೇ ಬೇರೊಂದು ಸಿನಿಮಾಗೆ ಡೇಟ್ ಕೊಟ್ಟಿದ್ದ ಕಾರಣ ಕಾಂತಾರ ಸಿನಿಮಾವನ್ನು ಪುನೀತ್ ಒಪ್ಪಿಕೊಳ್ಳಲಿಲ್ಲ. ಬಳಿಕ ರಿಷಬ್ ಶೆಟ್ಟಿ ಅವರಿಗೆ ನೀವೇ ಮಾಡಿ ಎನ್ನುವ ಸಲಹೆ ಕೂಡ ಕೊಟ್ಟಿದ್ದರು.
ಇದನ್ನು ಕಾಂತಾರ ಸಿನಿಮಾಗೆ ಬಂಡವಾಳ ಹಾಕಿರುವ ಹೊಂಬಾಳೆ ಫಿಲಂಸ್‌ನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದ ಕಾರ್ತಿಕ್ ಗೌಡ ಅವರು ಹೇಳಿಕೊಂಡಿದ್ದಾರೆ.
ಧೈರ್ಯ ತುಂಬಿದ ಪತ್ನಿ ಪ್ರಗತಿ ಶೆಟ್ಟಿ
ರಿಷಬ್ ಶೆಟ್ಟಿಗೆ ಕಾಂತಾರ ಶಿವನ ಪಾತ್ರದಲ್ಲಿ ನಟಿಸುವಂತೆ ಧೈರ್ಯ ತುಂಬಿದ್ದು ಪತ್ನಿ ಪ್ರಗತಿ ಶೆಟ್ಟಿ, ಸಿನಿಮಾದ ಕತೆ ಮೇಲೆ ನಂಬಿಕೆ ಇದ್ದ ಕಾರಣ, ಮುಖ್ಯವಾಗಿ ರಿಷಬ್ ಶೆಟ್ಟಿ ಅವರಿಗೆ ಕರಾವಳಿ ಸಂಸ್ಕೃತಿ, ಭಾಷೆ ಪರಿಚಯ ಇದ್ದ ಕಾರಣ ಅವರು ನಟಿಸಿದರೆ, ನೋಡುಗರಿಗೂ ಹತ್ತಿರವಾಗುತ್ತದೆ ಎನ್ನುವ ಆಲೋಚನೆ ಪ್ರಗತಿ ಶೆಟ್ಟಿಯವರದ್ದಾಗಿತ್ತು. ಬಳಿಕ ಕನ್ನಡದಲ್ಲಿ ಮಾತ್ರ ನಿರ್ಮಾಣವಾದ ಸಿನಿಮಾ ಬಳಿಕ ಇತಿಹಾಸವನ್ನೇ ಸೃಷ್ಟಿಸಿತು.
ಕಾಂತಾರ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಅದರ ಪ್ರೀಕ್ವೆಲ್ ಕಾಂತಾರ- ಚಾಪ್ಟರ್ 1 ಸಿನಿಮಾದಲ್ಲಿ ರಿಷಬ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, 2025ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಹೊಸ ದಾಖಲೆ ಬರೆದಂತೆ, ಈ ಸಿನಿಮಾ ಕೂಡ ದಾಖಲೆ ಬರೆಯುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications