Year Ender 2024: ವಿಚ್ಛೇದನ ವಿಚಾರಕ್ಕೆ ಈ ವರ್ಷ ಸುದ್ದಿಯಾದ ಕನ್ನಡದ ಸ್ಟಾರ್ ಜೋಡಿಗಳು ಇವರೇ
ಇನ್ನೇನು 2024 ಮುಗಿಯುತ್ತಾ ಬಂದಿದ್ದು, 2025ರ ಸ್ವಾಗತಕ್ಕೆ ಜನ ಸಜ್ಜಾಗಿದ್ದಾರೆ. ಹೊಸ ಸಂತೋಷ, ಹೊಸ ಹುರುಪು, ಹೊಸ ಭರವಸೆ, ಹೊಸ ಕನಸು, ಹೊಸ ಚೈತನ್ಯದಿಂದ ಹೊಸ ವರ್ಷವನ್ನು ಸ್ವಾಗತಿಸೋಣ. 2025 ಎಲ್ಲರ ಜೀವನದಲ್ಲಿ ಹೊಸತನ ತರಲಿ ಎನ್ನುವ ಆಶಯದೊಂದಿಗೆ 2024ರ ವರ್ಷದ ಕೊನೆಯಲ್ಲಿ ಈ ವರ್ಷ ನೆನಪಿನಲ್ಲಿಡಬಹುದಾದ ಕೆಲವು ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ.
2024ರಲ್ಲಿ ವಿಚ್ಛೇದನ ಪಡೆದು ಹೊಸ ಜೀವನ ಆರಂಭಿಸಿರುವ ಜನಪ್ರಿಯ ಜೋಡಿಗಳ ವಿವರ ಇಲ್ಲಿದೆ. 2024ರಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಅನೇಕ ಅನೇಕ ಜನಪ್ರಿಯ ಜೋಡಿಗಳು ವಿಚ್ಛೇದನ ಪಡೆದಿವೆ. ಈ ಬಗ್ಗೆ ವಿವರ ಇಲ್ಲಿದೆ.

ಚಂದನ್ ಶೆಟ್ಟಿ-ನಿವೇದಿತಾ ಗೌಡ
ಕನ್ನಡ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಈ ವರ್ಷ ಅಂತ್ಯ ಹಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಈ ಜೋಡಿ ವಿಚ್ಛೇದನ ಪಡೆದಿದ್ದಾರೆ. ಕನ್ನಡ ಮನೋರಂಜನಾ ಲೋಕದ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ಈ ಜೋಡಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಪರಸ್ಪರ ಬೇರಾಗಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನ ಪಡೆದುಕೊಂಡರು.

ಯುವ ರಾಜ್‌ಕುಮಾರ್- ಶ್ರೀದೇವಿ ಭೈರಪ್ಪ
'ಯುವ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದೊಡ್ಮನೆ ಕುಡಿ ನಟ ಯುವ ರಾಜಕುಮಾರ್ ದಾಂಪತ್ಯದಲ್ಲಿ ಈ ವರ್ಷ ಬಿರುಕು ಮೂಡಿರುವುದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ. ಪ್ರೀತಿಸಿ ಮದುವೆಯಾದ ಯುವ ರಾಜಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಐದು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ವಿಚ್ಛೇದನಕ್ಕೆ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಕೆಲವೊಂದು ವಿಚಾರಗಳಿಂದ ಈ ಜೋಡಿಗೆ ಈವರೆಗೂ ವಿಚ್ಛೇದನ ಸಿಕ್ಕಿಲ್ಲ. ಸದ್ಯ ಪ್ರಕರಣ ಕೋರ್ಟ್ ಅಂಗಳದಲ್ಲಿದೆ. ಯಾವುದೇ ಕೌನ್ಸಲಿಂಗ್, ರಾಜಿಗೆ ಒಪ್ಪದ ಈ ಜೋಡಿ ಡಿವೋರ್ಸ್ ಬೇಕೇ ಬೇಕು ಎನ್ನುವ ನಿರ್ಧಾರದಲ್ಲಿದೆ.

ಕಿರಿಕ್ ಕೀರ್ತಿ-ಅರ್ಪಿತಾ
ಮಾಜಿ ಬಿಗ್ ಬಾಸ್ ಸ್ಪರ್ಧಿ, ಪತ್ರಕರ್ತ, ನಿರೂಪಕ, ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಈ ವರ್ಷ ವಿಚ್ಛೇದನ ಪಡೆದಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ಈ ಜೋಡಿ, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಪಡೆದರು. ಇನ್ಮೇಲೆ ಕರಿಮಣಿ ಮಾಲೀಕ ನಾನಲ್ಲ ಎಂದು ಹೇಳುವ ಮೂಲಕ ಈ ವಿಚಾರವನ್ನು ಕಿರಿಕ್ ಕೀರ್ತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ದುನಿಯಾ ವಿಜಯ್ ವಿಚ್ಛೇದನ ಅರ್ಜಿ ವಜಾ
ಹಲವು ವರ್ಷಗಳಿಂದ ಜಂಜಾಟದಲ್ಲಿದ್ದ ನಟ ದುನಿಯಾ ವಿಜಯ್ ವಿಚ್ಛೇದನಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಈ ವರ್ಷ ನಡೆದಿದ್ದು, ಅರ್ಜಿ ವಜಾ ಆಗಿದೆ. 2018ರಲ್ಲಿಯೇ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಬೇಕು ಎಂದು ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಶಾಂತಿನಗರದ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಈ ಬಗ್ಗೆ ದುನಿಯಾ ವಿಜಯ್ ಪತ್ನಿ ನಾಗರತ್ನ ಸಂತೋಷ ವ್ಯಕ್ತಪಡಿಸಿದ್ದರು.












Click it and Unblock the Notifications