'ನನ್ನ ಅಪ್ಪ-ಅಮ್ಮ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂದ': ನಮ್ರತಾ ಗೌಡ ಮಾನಸಿಕವಾಗಿ ಕುಗ್ಗಿದ್ಯಾಕೆ?
ಕನ್ನಡದ ಪುಟ್ಟ ಗೌರಿ ಮದುವೆ, ನಾಗಿಣಿ ಧಾರಾವಾಹಿ ಹಾಗೂ ಬಿಗ್ ಬಾಸ್ ಕನ್ನಡ ಖ್ಯಾತಿಯ ನಮ್ರತಾ ಗೌಡ ಬಾಲಿ ಪ್ರವಾಸಕ್ಕೆ ಹೋದ ಸಮಯದಲ್ಲಿ ಬಿಕಿನಿ ಧರಿಸಿ ಜಲಪಾತವೊಂದರ ಬಳಿ ಫೋಟೋಶೂಟ್ ಹಾಗೂ ವಿಡಿಯೋ ಮಾಡಿದ್ದರು. ಈ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಕೂಡ. ನಮ್ರತಾ ಗೌಡ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ನಮ್ರತಾ ಗೌಡ ಮುಕ್ತವಾಗಿ ಮಾತನಾಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಾನು ನೋಡಿರುವ ಅಥವಾ ಗೊತ್ತಿರುವ ಹುಡುಗಿಯರಿಗೆ ಒಂದು ಗುರಿ ಇರುತ್ತದೆ, ಅಂದರೆ ಬಿಕಿನಿ ಹಾಕುವ ಮಟ್ಟಕ್ಕೆ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು ಎನ್ನುವುದು. ಲವ್ ಬ್ರೇಕಪ್ ಆಗಿ ಒಂದು ಆರರಿಂದ ಏಳು ತಿಂಗಳು ಆಗಿತ್ತು. ನಾಗಿಣಿ ಧಾರಾವಾಹಿ ಕೂಡ ಜೊತೆಯಲ್ಲಿ ನಡೆಯುತ್ತಿತ್ತು. ನನಗೆ ಆ ಬ್ರೇಕಪ್ ಆದ ಸಂಬಂಧದಿಂದ ಹೊರಬರಬೇಕು, ಜೀವನದಲ್ಲಿ ಏನಾದರೂ ಮಾಡಬೇಕು, ನನ್ನ ಡ್ರೀಮ್ ಬಾಡಿನಾ ಮಾಡಬೇಕು ಎನ್ನುವುದಿತ್ತು. ಹೀಗಾಗಿ ಆ ಸಮಯದಲ್ಲಿ ತುಂಬಾ ವರ್ಕೌಟ್ ಮಾಡುತ್ತಿದ್ದೆ. ಡಯಟ್ ಮಾಡುತ್ತಿದ್ದೆ'.

'ಬ್ರೇಕಪ್ ಆದ ಮೇಲೆ ಹುಡುಗರಿಗೆ ಹೇಗೆ ಸಿಕ್ಸ್ ಪ್ಯಾಕ್ ಬಾಡಿ ಮಾಡಬೇಕು ಎನ್ನುವುದು ಇರುತ್ತದೋ, ನನಗೂ ಹಾಗೆ ಬಿಕಿನಿ ಬಾಡಿ ಮಾಡಲೇಬೇಕು, ಒಂದೊಳ್ಳೆ ಟ್ರಿಪ್‌ಗೆ ಹೋಗಬೇಕು, ಎಂಜಾಯ್ ಮಾಡಬೇಕು ಎನ್ನುವ ರೆಬೆಲ್ ಫೇಸ್ ಇತ್ತು. ಧಾರಾವಾಹಿ, ಡಯೆಟ್ ಮತ್ತೆ ವರ್ಕೌಟ್‌ನಿಂದ ಮಾನಸಿಕವಾಗಿ ತುಂಬಾ ಒತ್ತಡ ಆಗಿತ್ತು. ಹೀಗಾಗಿ ಒಂದು ಬ್ರೇಕ್ ಬೇಕಿತ್ತು' ಎಂದರು.
'ಹೀಗಾಗಿ ನಾನು ಮತ್ತೆ ನನ್ನ ಫ್ರೆಂಡ್ ಐಶ್ವರ್ಯಾ ಸಿಂಧೋಗಿ ಎಲ್ಲಾ ಪ್ಲಾನ್ ಮಾಡಿಕೊಂಡು ಬಾಲಿಗೆ ಹೋದೆವು. ಆ ಸಮಯದಲ್ಲಿ ತುಂಬಾ ಶಾಪಿಂಗ್ ಮಾಡಿದ್ದೆವು. ಅಲ್ಲಿ ಎಲ್ಲಾ ತುಂಬಾ ಚೆನ್ನಾಗಿ ಟ್ರಿಪ್ ಎಂಜಾಯ್ ಮಾಡಿಕೊಂಡು ಇಲ್ಲಿಗೆ ಬಂದು ನೋಡಿದರೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆಗ ನನಗೆ ಆಲೋಚನೆ ಆರಂಭವಾಯ್ತು. ನಾನೇದರೂ ತಪ್ಪು ಮಾಡಿದ್ದೀನಾ? ಯಾಕೆ ಈ ರೀತಿ ಟ್ರೋಲ್ ಮಾಡುತ್ತಿದ್ದಾರೆ'.

'ನನ್ನ ದೇಹ, ನಾನು ಕಷ್ಟಪಟ್ಟು ದುಡಿದ ಹಣದಲ್ಲಿ ಟ್ರಿಪ್‌ಗೆ ಹೋಗಿದ್ದೆ. ನನ್ನ ಫೋಟೋ, ನಾನು ಸಂಪಾದನೆ ಮಾಡಿ ತೆಗೆದುಕೊಂಡಿರುವ ಬಿಕಿನಿ, ಎಲ್ಲವೂ ನನ್ನದೇ. ನಾನು ಫೋಟೋ ಹಾಕಿದ್ದೇನೆ ಅಂದರೆ ನನ್ನ ದೇಹದ ಮೇಲೆ ನನಗಷ್ಟು ನಂಬಿಕೆ ಇತ್ತು. ನಾನು ಎಷ್ಟು ಪಾಸಿಟಿವ್ ಆಗಿ ಫೋಟೋ ಹಾಕಿದ್ದೆ, ಇಲ್ಲಿ ಅಷ್ಟೇ ನೆಗೆಟಿವ್ ಆಗಿತ್ತು. ಇದನ್ನು ಹೇಗೆ ಎದುರಿಸಬೇಕು ಅಂತಾ ಗೊತ್ತಾಗಿಲ್ಲ. ಕೊನೆಗೆ ಅಮ್ಮನನ್ನೇ ನಾನು ತಪ್ಪು ಮಾಡಿದ್ದೀನಾ ಅಂತಾ ಕೇಳಿದೆ. ಅವರು ಇಲ್ಲ ಅಂದರು. ಅಲ್ಲಿಗೆ ಇದನೆಲ್ಲಾ ಬಿಟ್ಟು ಮುಂದುವರಿದೆ' ಎಂದು ಹೇಳಿದರು.
'ಬಿಕಿನಿ ಫೋಟೋ ಹಾಕಿದ ಮೇಲಂತೂ ಕೆಟ್ಟ ಕೆಟ್ಟ ಕಮೆಂಟ್ ಮಾಡಲು ಶುರು ಮಾಡಿದರು. ನಾನು ಆ ಪದಗಳನ್ನೂ ಕೇಳಿಯೂ ಇಲ್ಲ. ನಾನು ಅಂತಹ ವಾತಾವರಣದಲ್ಲಿ ಬೆಳೆದವಳು ಅಲ್ಲ. ಬಿಗ್ ಬಾಸ್ ಆದ ಮೇಲೆ ಕೂಡ ತುಂಬಾ ನೆಗೆಟಿವ್‌ಗಳನ್ನು ಎದುರಿಸುವಂತಾಯಿತು. ಇದರಿಂದ ನಾನು ಕೂಡ ಕುಗ್ಗಿದೆ. ನನಗೆ ಎಷ್ಟೋ ಸಲ ಅನಿಸಿತ್ತು ನನ್ನ ಇನ್ಸ್ಟಾಗ್ರಾಮ್ ಡಿಲಿಟ್ ಮಾಡೋಣ ಅಂತಾ. ನನಗೆ ಸಾಕಾಗಿತ್ತು'.
'ನನಗೆ ಯಾಕಷ್ಟು ನೆಗೆಟಿವ್ ಕಮೆಂಟ್ ಬರುತ್ತದೆ ಅಂತಾ ತುಂಬಾ ಅಳು ಬರುತ್ತಿತ್ತು. ತುಂಬಾ ಬೇಜಾರಾಗುತ್ತಿತ್ತು. ಎಷ್ಟರ ಮಟ್ಟಿಗೆ ಕೆಟ್ಟ ಮೆಸೇಜ್ ಮಾಡುತ್ತಿದ್ದರೆ ಅಂದರೆ ನಾನು ನನ್ನ ಶತ್ರೂಗೂ ಅದನ್ನು ಬಯಸುವುದಿಲ್ಲ. ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ಅನಿಸುತ್ತದೆ. ನನಗೆ ತುಂಬಾ ನೋವಾದ ಮೆಸೇಜ್ ಅಂದರೆ ನಿನ್ನಂತ ಮಗಳನ್ನು ಹೆತ್ತ ಅಪ್ಪ-ಅಮ್ಮ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತಾ ಯಾವನೋ ಒಬ್ಬ ಮೆಸೇಜ್ ಹಾಕಿದ್ದ. ಆ ಮೆಸೇಜ್ ನೋಡಿ ನಾನು ಸಂಪೂರ್ಣ ಒಂದು ದಿನ ಕೊರಗಿದ್ದೇನೆ'.
'ನನ್ನ ಮನೆ ಸಾಕಲು, ನನ್ನ ಜೀವನ ನಾನು ಕಟ್ಟಿಕೊಳ್ಳಲು, ಯಾವುದೇ ಕೆಟ್ಟ ರೀತಿಯಲ್ಲಿ ಹೋಗದೆ, ಎಲ್ಲವನ್ನೂ ಕಷ್ಟಪಟ್ಟು ದುಡಿದು ಮಾಡಿಕೊಳ್ಳುತ್ತಿದ್ದೇನೆ. ಹಗಳು ರಾತ್ರಿ ದುಡಿದು, ಯಾರ ಹತ್ತಿರ ಸಾಲ ಮಾಡದೇ, ನಿಯತ್ತಿನಿಂದ ನನ್ನ ಅನ್ನ ನಾನು ತಿನ್ನುತ್ತಿದ್ದೇನೆ. ಅಂತದರಲ್ಲಿ ಇವನು ಯಾವನೋ ನನ್ನ ಬಗ್ಗೆ ಹೀಗೆ ಮಾತನಾಡುತ್ತಾನಲ್ಲ ಅಂತಾ ತುಂಬಾ ಕೊರಗಿದ್ದೇನೆ. ಆದರೆ ಈಗ ಎಲ್ಲವನ್ನೂ ಬಿಟ್ಟಿದ್ದೇನೆ. ಹೇಗೆ ನಮಗೆ ಇಷ್ಟವಾಗದೇ ಇರುವವರಿಂದ ದೂರ ಇರುತ್ತೇವೋ ಹಾಗೇ ಈಗ ಟ್ರೋಲ್, ಕೆಟ್ಟ ಕಮೆಂಟ್, ನೆಗೆಟಿವ್‌ಗಳಿಂದ ದೂರ ಇದ್ದೇನೆ. ಒಬ್ಬ ಜನರಿಗೆ ಗೊತ್ತಿರುವ ನಟಿಯಾದ ಮೇಲೆ ಇದನೆಲ್ಲಾ ಎದುರಿಸೋದು ಸಾಮಾನ್ಯ ಅಂತಾ ನಾನು ಎಲ್ಲವನ್ನೂ ಬಿಟ್ಟುಹಾಕಿದ್ದೇನೆ' ಎಂದು ನಮ್ರತಾ ಗೌಡ ಹೇಳಿದರು.
ಇನ್ನು ಧಾರಾವಾಹಿಯ ಒಬ್ಬ ನಾಯಕಿ ಹೇಗೆ ಇರಬೇಕು? ಆಕೆ ಹೇಗೆ ಇರಬೇಕು ಎಂದು ಜನ ಬಯಸುತ್ತಾರೆ ಎನ್ನುವುದರ ಬಗ್ಗೆ ಮಾತನಾಡಿದ ಅವರು, ಧಾರಾವಾಹಿಯಲ್ಲಿ ನಾಯಕಿ ಬೋಲ್ಡ್ ಆಗಿರುತ್ತಾಳೆ ಅಂದರೆ ಯಾರೂ ಒಪ್ಪಿಕೊಳ್ಳಲ್ಲಾ. ಒಂದು ಧಾರಾವಾಹಿ ನಾಯಕಿ ಸಾಮಾನ್ಯ ಹುಡುಗಿಯಾಗಿರಬೇಕು. ತುಂಬಾ ಟ್ರೆಡಿಶನಲ್ ಆಗಿರಬೇಕು. ತುಂಬಾ ವಿನಯದಿಂದ ಇರಬೇಕು. ಜನ ಇದನ್ನೇ ನಿರೀಕ್ಷೆ ಮಾಡುವುದು.
ಈಗ ಒಬ್ಬ ನಾಯಕಿ ಬೋಲ್ಡ್ ಆಗಿ ಬಟ್ಟೆ ಹಾಕಿಕೊಂಡು ಆ ಧಾರಾವಾಹಿ ಎಷ್ಟು ವರ್ಷ ಇರುತ್ತಲ್ಲಾ, ಅಷ್ಟು ವರ್ಷ ಅವಳು ಬೋಲ್ಡ್ ಪಾತ್ರದಲ್ಲೇ ಇದ್ದರೆ ಅವಳು ಜನರಿಗೆ ಇಷ್ಟವಾಗುವುದೇ ಇಲ್ಲ. ಅದರಲ್ಲೂ ನಮ್ಮ ಕನ್ನಡಿಗರಿಗೆ. ಯಾಕೆಂದರೆ ಅವರು ಹೃದಯದಿಂದ ತುಂಬಾ ಮುಗ್ಧರಾಗಿರುತ್ತಾರೆ. ಹೀಗಾಗಿ ಅವರ ನಿರೀಕ್ಷೆಯೆಂದರೆ ಧಾರಾವಾಹಿಯ ನಾಯಕಿ ಎಂದರೆ ಅವಳು ಯಾವಾಗಲೂ ಅಂದವಾಗಿ ಇರಬೇಕು. ಮೃದುವಾಗಿ ಮಾತನಾಡಬೇಕು ಎಂದು ಬಯಸುತ್ತಾರೆ ಎಂದು ನಟಿ ನಮ್ರತಾ ಗೌಡ ಧಾರಾವಾಹಿ ವೀಕ್ಷಕರ ಮನಸ್ಥಿತಿಯ ಬಗ್ಗೆ ಮಾತನಾಡಿದರು.












Click it and Unblock the Notifications