Manjunath Sangalad: ನನ್ನ ಗೆಳತಿ.. ನನ್ನ ಗೆಳತಿ ಹಾಡು ಬಳಸಿ ಅನ್ಯಾಯ? ಸರ್ಕಾರಿ ಶಾಲೆ ಪ್ರೇಮ ಅಪಾರ!
Manjunath Sangalad: ಉತ್ತರ ಕರ್ನಾಟಕದ ಅದ್ಭುತ ಪ್ರತಿಭೆ ಹಾಗೂ ಜಾನಪದ, ಭಜನೆ ಹಾಡಿನಿಂದಲೇ ಕರ್ನಾಟಕದಲ್ಲಿ ಫೇಮಸ್ ಆಗಿದ್ದ ಮಂಜುನಾಥ ಸಂಗಳದ ಅವರು ಸಾವನ್ನಪ್ಪಿದ್ದಾರೆ. ಕನ್ನಡ ಜಾನಪದ ಲೋಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದ ಮಂಜುನಾಥ್ ಅವರ ಕನ್ನಡ ಪ್ರೇಮದ ಬಗ್ಗೆ ಕನ್ನಡಿಗರು ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರು ಸ್ಮರಿಸಿದ್ದಾರೆ. ಇದರೊಂದಿಗೆ ಅವರ "ನನ್ನ ಗೆಳತಿ.. ನನ್ನ ಗೆಳತಿ" ಹಾಡಿನ ವಿಚಾರದಲ್ಲಿ ಅವರಿಗೆ ಅನ್ಯಾಯವಾಗಿತ್ತು ಎನ್ನುವ ಬಗ್ಗೆಯೂ ಇದೀಗ ಚರ್ಚೆಯಾಗುತ್ತಿದೆ. ಅವರ ಹಾಡನ್ನು ಬಳಸಿ ಸಾಂಗ್ ಮಾಡಲಾಗಿತ್ತು ಎನ್ನುವ ಬಗ್ಗೆ ಚರ್ಚೆ ನಡೆದಿದೆ.
ಉತ್ತರ ಕರ್ನಾಟಕದ ಜಾನಪದ ಪ್ರತಿಭೆ ಮಂಜುನಾಥ ಸಂಗಳದ ಅವರು ವಿಧಿವಶರಾಗಿದ್ದಾರೆ. ಇದರ ಬೆನ್ನಲ್ಲೇ ಅವರು ಹಾಡಿದ್ದ ನನ್ನ ಗೆಳತಿ ನನ್ನ ಗೆಳತಿ ಹಾಡಿನ ಕಮೆಂಟ್ ಬಾಕ್ಸ್‌ನಲ್ಲಿ ಅವರ ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ. ಅಣ್ಣನ ಹಾಡುಗಳು ಯಾವಾಗಲೂ ನೆನಪಿನಲ್ಲಿ ಉಳಿಯಲಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೋರಿದ್ದಾರೆ. ಅವರ ಕನ್ನಡ ಸರ್ಕಾರಿ ಶಾಲೆಯ ಪ್ರೀತಿ, ನನ್ನ ಗೆಳತಿ ಹಾಡು ಹೇಗೆ ಹುಟ್ಟಿತು ಎನ್ನುವ ವಿಚಾರಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಂಜುನಾಥ ಅವರ ನನ್ನ ಗೆಳತಿ.. ನನ್ನ ಗೆಳತಿ ಹಾಡನ್ನು ಬೇರೊಬ್ಬರು ಬಳಸಿ ವೈರಲ್ ಆಗಿದ್ದರು ಎನ್ನುವ ಆರೋಪವು 5-6 ವರ್ಷಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ನಾನು ಬರೆದ ಹಾಡನ್ನು ಬೇರೆ ಅವರು ಮ್ಯೂಸಿಕ್‌ನೊಂದಿಗೆ ಹಾಡಿದ್ದಾರೆ, ಪರವಾಗಿಲ್ಲ. ಆದರೆ, ಜನರಿಗೆ ಇದು ಯಾರು ಬರೆದ ಹಾಡು ಅಂತ ಗೊತ್ತು. ಕನ್ನಡಿಗರ ಅಭಿಮಾನ ಹಾಗೂ ಪ್ರೀತಿ ನನ್ನ ಮೇಲಿದೆ ಇದು ನನಗೆ ಸಾಕು ಅಂತ ಮಂಜುನಾಥ್ ಅವರು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲೂ ಒಮ್ಮೆ ಹೇಳಿದ್ದರು.
ಕನ್ನಡ ಶಾಲೆಯ ಪ್ರೀತಿ ಸ್ಮರಿಸಿದ ಶಿಕ್ಷಕರು
ಇನ್ನು ಇದೇ ಸಂದರ್ಭದಲ್ಲಿ ಮಂಜುನಾಥ ಅವರು ಕನ್ನಡ ಹಾಗೂ ಸರ್ಕಾರಿ ಶಾಲೆಯ ಬಗ್ಗೆ ಹೊಂದಿದ್ದ ಗೌರವದ ಬಗ್ಗೆ ಶಿಕ್ಷಕರಾದ ಸೋಮು ಕುದರಿಹಾಳ ಚಂದಾಪುರ ಅವರು ಸ್ಮರಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, Very Sad .. ನನ್ನ ಗೆಳತಿ ನನ್ನ ಗೆಳತಿ ಹಾಡಿನ ಧಾಟಿಯಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಶಾಲೆಗೆ ಬರುವ ಮಗುವಿನ ಬಗ್ಗೆ ಹಾಡು ಬರೆದಿದ್ದೆ.
ಅದನ್ನು ಆತ್ಮೀಯ ಸ್ನೇಹಿತರಾದ Sachinkumar B. Hiremath ಹಾಡಿದ್ದರು. ಸಹಜವಾಗಿ ಕಾಪಿ ರೈಟ್ ಸಮಸ್ಯೆಯಾದಾಗ "ಹೋಗ್ಲಿ ಬಿಡ್ರಿ ಸರ್.. ಸರ್ಕಾರಿ ಶಾಲೆಯ ಬಗ್ಗೆ ಬರೆದಿದ್ದೀರಿ. ಆ ಹಾಡಿನಿಂದ ನೀವೇನ್ ರೊಕ್ಕಾ ಮಾಡ್ಕೊಳಿಂಗಿಲ್ಲಲ್ಲ ಎಂದಿದ್ದರು ಮಂಜುನಾಥ" ಅಂತ ಹೇಳಿದ್ದರು ಅಂತ ನೆನಪಿಸಿಕೊಂಡಿದ್ದಾರೆ.
ಮುಂದುವರಿದು ವಿಡಿಯೋದಲ್ಲಿ ಇವರ ಹೆಸರನ್ನು ಹಾಕಿದ್ವಿ. ಅದರ ಬಗ್ಗೆ ಖುಷಿ ಆಗಿದ್ದರು. ನಿಮ್ಮ ಅಗಲಿಕೆಯ ಹೊತ್ತಿನಲಿ ಈ ಎಲ್ಲ ನೆನಪಾಯ್ತು. ವಿದಾಯದ ನಮನಗಳು ಅಂತ ಬರೆದುಕೊಂಡಿದ್ದಾರೆ. ಮಂಜುನಾಥ ಸಂಗಳದ ಅವರು ಶನಿವಾರ ನಿಧನರಾಗಿದ್ದಾರೆ. ಅವರ ಪುಣ್ಯ ಸ್ಮರಣೆಯನ್ನು ಏಪ್ರಿಲ್ 16ಕ್ಕೆ ಬುಧವಾರ ತಾರಿಹಾಳ ಗ್ರಾಮದ ಸ್ವಗ್ರಹಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
ಮಂಜುನಾಥ ಅವರ ನಿಧನಕ್ಕೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಲವರು ಪೋಸ್ಟ್ ಮಾಡಿದ್ದಾರೆ. ಉತ್ತರ ಕನ್ನಡ ಹಾಗೂ ಜಾನಪದ ಪ್ರತಿಭೆಯೊಬ್ಬರನ್ನು ಕರುನಾಡು ಕಳೆದುಕೊಂಡಿದೆ. ಅವರ ಹಾಡುಗಳು ಸದಾ ಜನಮಾನಸದಲ್ಲಿ ಉಳಿಯಲಿದೆ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications