ಕನ್ನಡ ಚಿತ್ರರಂಗವನ್ನ ರಿಪೇರಿ ಮಾಡ್ತೀನಿ: ಕರವೇ ನಾರಾಯಣಗೌಡ ಎಚ್ಚರಿಕೆ ಕೊಟ್ಟಿದ್ದೇಕೆ?
ಕೆಲ ತಿಂಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡೋದು ಗೊತ್ತಿದೆ ಎಂದು ಹೇಳಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು. ಇತ್ತೀಚೆಗಷ್ಟೇ ಬಳಿಕ ಈ ಬಗ್ಗೆ ಸುದೀಪ್ ಖಾರವಾಗಿ ಉತ್ತರಿಸಿದ್ದರು. ಎಲ್ಲರ ನಟ್ಟು ಬೋಲ್ಟ್ ಟೈಟೇ ಇದೆ ಎಂದು ಕಿಚ್ಚ ತಿರುಗೇಟು ನೀಡಿದ್ದರು. ಇದೀಗ ಕನ್ನಡ ಚಿತ್ರರಂಗದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕೂಡ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕನ್ನಡ ಚಿತ್ರರಂಗವನ್ನು ರಿಪೇರಿ ಮಾಡ್ತೀನಿ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
"ರಾಜನಿವಾಸ" ಸಿನಿಮಾದ ಕಾರ್ಯಕ್ರಮದಲ್ಲಿ ಕರವೇ ನಾರಾಯಣಗೌಡ ಕನ್ನಡ ಚಿತ್ರರಂಗದ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. 'ಕನ್ನಡ ಚಿತ್ರರಂಗ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನೋದು ನನಗೆ ಈಗಲೂ ಅರ್ಥವಾಗಿಲ್ಲ. ಅನೇಕ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಬಂದು ಕರವೇ ಕಚೇರಿಯಲ್ಲಿ ನೋವು ಹೇಳಿಕೊಳ್ಳುತ್ತಾರೆ. ನನಗೆ ಕನ್ನಡ ಚಿತ್ರರಂಗದವರೊಂದಿಗೆ ಅಷ್ಟಾಗಿ ನಂಟಿಲ್ಲ. ಏಕೆಂದರೆ ಅವರೆಲ್ಲ ಕನ್ನಡದ ಪರವಾಗಿ ಇಲ್ಲ. ಹಾಗಾಗಿ ನಂಟು ಇಲ್ಲ. ತೆರೆಯ ಮೇಲೆ ಕನ್ನಡದ ಬಗ್ಗೆ ಉದ್ದುದ್ದ ಭಾಷಣ, ಡೈಲಾಗ್ ಹೊಡೆಯಬಹುದಷ್ಟೇ. ಕನ್ನಡದ ಬಗ್ಗೆ ಹಾಡುಗಳನ್ನ ಹಾಡಬಹುದಷ್ಟೇ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗ ಯಾವ ನಟನೂ ಬರಲಿಲ್ಲ
'ಕನ್ನಡ, ಕರ್ನಾಟಕ, ಕನ್ನಡಿಗ ಅಂತ ಬಂದಾಗ ಅವರು ಎಲ್ಲಿ ನಿಲ್ಲಬೇಕು? ಯಾರನ್ನು ಬೆಂಬಲಿಸಬೇಕು? ಎನ್ನುವ ಗೊಂದಲದಲ್ಲಿ ಕಲಾವಿದರು ಇಂದಿಗೂ ಇದ್ದಾರೆ. ಕನ್ನಡಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ ಅಂತಾರಲ್ಲ? ನಾವು ಈ ಹಿಂದೆ ಯಾವುದೇ ಸಿನಿಮಾ ಕರ್ನಾಟಕಕ್ಕೆ ಬರಬೇಕಾದ್ರೆ, ಆ ರಾಜ್ಯದಲ್ಲಿ ಬಿಡುಗಡೆಯಾಗಿ ಏಳು ವಾರದ ನಂತರ ಇಲ್ಲಿ ರಿಲೀಸ್ ಆಗಬೇಕು ಎಂದು ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ದೊಡ್ಡ ಹೋರಾಟ ಮಾಡಿದೆವು. ಆಗ ಕಲಾವಿದರು ಕೆಜಿ ರೋಡ್‌ನಲ್ಲಿ ಸ್ವಲ್ಪ ಹೊತ್ತು ಇದ್ದು, ಮನೆ ಸೇರಿಕೊಂಡ್ರು. ಕರವೇ ಕಾರ್ಯಕರ್ತರು ಕೇಸ್ ಹಾಕಿಸಿಕೊಂಡರು. ಆಗ ಯಾವ ಕಲಾವಿದನೂ ಜೈಲಿನಲ್ಲಿದ್ದವರಿಗೆ ಜಾಮೀನು ಕೊಡಿಸಲು ಬರಲಿಲ್ಲ' ಎಂದು ಆಕ್ರೋಶ ಹೊರಹಾಕಿದ್ದಾರೆ.
ಕರವೇಗೆ ಬೇಡಿಕೊಂಡಿದ್ದ ಈಗಿನ ದೊಡ್ಡ ಹೀರೋಗಳು
'ಇವತ್ತು ಯಾರೆಲ್ಲ ದೊಡ್ಡ ಹೀರೋಗಳು ಅಂತಿದ್ದಾರಲ್ಲ? ಅವರೂ ಕೂಡ ಒಂದು ಕಾಲದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬಳಿ ಬಂದು ಥಿಯೇಟರ್‌ಗಳು ಸಿಗಲಿಲ್ಲ ಎಂದು ಬೇಡಿಕೊಂಡವರಿದ್ದಾರೆ. ಈಗ ಅವರೆಲ್ಲ ಭಾರಿ ದೊಡ್ಡ ಹೀರೋಗಳು. ಅವರ ಹೆಸರು ಕೂಡ ಹೇಳಬಹುದು. ಯಾಕಂದ್ರೆ ನಮಗೆ ಆ ಧೈರ್ಯವೂ ಇದೆ. ಅವರಿಗೆ ಸಹಾಯ ಮಾಡಿದ ವಿಚಾರಗಳೂ ನಮ್ಮಲ್ಲಿವೆ. ಅವರೆಲ್ಲ ಇವತ್ತು ಬೆಳೆದಿದ್ದಾರೆ, ಬೆಳೆಯಲಿ. ಆದರೆ ನಿರ್ಮಾಪಕರು, ನಿರ್ದೇಶಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎನ್ನುವ ಮನಸ್ಥಿತಿ ಅವರಿಗೆ ಇರಬೇಕಿತ್ತು' ಎಂದು ಪರೋಕ್ಷವಾಗಿ ಬೇರೆ ಪರಭಾಷಾ ನಿರ್ದೇಶಕರು, ನಿರ್ಮಾಪಕರ ಸಿನಿಮಾಗಳಲ್ಲಿ ನಟಿಸುತ್ತಿರುವ ಸ್ಟಾರ್ ಹೀರೋಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಈಗ ಅವರೆಲ್ಲ ತಮ್ಮ ಸುತ್ತ ಒಂದು ಕೋಟೆ ಕಟ್ಟಿಕೊಂಡಿದ್ದಾರೆ. ಹಾಗಾಗಿ ಅದನ್ನು ಒಡೆದು, ಕನ್ನಡ ಚಿತ್ರರಂಗ ಯಾವತ್ತೂ ನಿಂತ ನೀರಾಗಬಾರದು. ಕೆಲವು ನಿರ್ದೇಶಕರ ಒಂದು ಸಿನಿಮಾ ಗೆದ್ದುಬಿಟ್ಟರೆ ಕೈಗೇ ಸಿಗೋದಿಲ್ಲ. ಒಂದು ಐದು ಮಂದಿ ನಟರು, ಒಂದಷ್ಟು ಮಂದಿ ನಿರ್ಮಾಪಕರು, ನಿರ್ದೇಶಕರು ಸೇರಿ ಅದೇ ಚಿತ್ರರಂಗ ಎಂದುಕೊಂಡಿದ್ದಾರೆ' ಎಂದು ಟಾಂಗ್ ನೀಡಿದ್ದಾರೆ.
ಚಿತ್ರರಂಗದ ಕೊಳಕು ತೊಳೀತೀವಿ!
'ಕನ್ನಡ ಸರಿಯಾಗಿ ಗೊತ್ತಿಲ್ಲದವರು ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿದ್ದಾರೆ. ಪ್ರಭಾಕರ್ ಮಗ ಥಿಯೇಟರ್ ಸಿಗಲಿಲ್ಲ ಅಂತಾ ಗೋಳಾಡ್ತಿದ್ದ. ಒಂದು ಕನ್ನಡ ಸಿನಿಮಾ ತೆಗೆದು ಮತ್ತೊಂದು ಕನ್ನಡ ಸಿನಿಮಾ ಹಾಕೋದು ನಡೀತಿದೆ. ಹಾಗಾಗಿ ಕನ್ನಡ ಚಿತ್ರರಂಗದಲ್ಲಿರುವ ದೊಡ್ಡ ಕೊಳಕನ್ನು ತೊಳೆದು ರಿಪೇರಿ ಮಾಡಬೇಕಾಗಿದೆ. ನಾನು ಇಲ್ಲಿವರೆಗೆ ಚಿತ್ರರಂಗದ ವಿಚಾರಕ್ಕೆ ಹೋಗಬಾರದು ಎಂದು ದೂರವಿದ್ದೆ. ಆದರೆ ಇನ್ನು ಸುಮ್ಮನೆ ಇರಬಾರದು ಎಂದು ತೀರ್ಮಾನ ಮಾಡಿದ್ದೀನಿ. ಹಾಗಾಗಿ ಕನ್ನಡ ಚಿತ್ರರಂಗವನ್ನು ರಿಪೇರಿ ಮಾಡುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications