ಕನ್ನಡ ಅಷ್ಟೊಂದು ಕೆಳಮಟ್ಟಕ್ಕೆ ಇಳಿದಿಲ್ಲ: ಸೈಮಾ ವೇದಿಕೆಯಲ್ಲೇ ದುನಿಯಾ ವಿಜಯ್ ಗರಂ ಆಗಿದ್ದೇಕೆ?
SIIMA Awards 2025: ದುಬೈನಲ್ಲಿ ನಡೆದ ಪ್ರತಿಷ್ಠಿತ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ (ಸೈಮಾ) ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗಕ್ಕೆ ಅವಮಾನ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿಂದೆಯೂ ಹಲವು ಬಾರಿ ಸೈಮಾ ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದ ಆರೋಪ ಹೊತ್ತಿತ್ತು. ಈ ಬಾರಿ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲೂ ಇದು ಮರುಕಳಿಸಿದೆ. ಈ ಬಗ್ಗೆ ಕನ್ನಡ ನಟ ದುನಿಯಾ ವಿಜಯ್ ವೇದಿಕೆಯಲ್ಲೇ ಬೇಸರ ಹೊರಹಾಕಿರುವ ವಿಡಿಯೋ ವೈರಲ್ ಆಗಿದೆ. ಸೈಮಾ ಕಾರ್ಯಕ್ರಮದ ಆಯೋಜಕರಿಗೆ ಖಡಕ್ ಎಚ್ಚರಿಕೆಯೂ ನೀಡಿದ್ದಾರೆ. ಇಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಗೊತ್ತಾ?
ದಕ್ಷಿಣ ಭಾರತ ಎಲ್ಲ ಚಿತ್ರರಂಗಗಳಿಗೆ ಪ್ರತಿವರ್ಷವೂ ವಿವಿಧ ವಿಭಾಗಗಳಲ್ಲಿ ಸೈಮಾ ಪ್ರಶಸ್ತಿ ನೀಡುತ್ತಾ ಬಂದಿತ್ತು. ಇದರಲ್ಲಿ ಸ್ಯಾಂಡಲ್‌ವುಡ್ ಕಲಾವಿದರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಾರಿಯ ಕಾರ್ಯಕ್ರಮ ದುಬೈನಲ್ಲಿ ಆಯೋಜಿಸಲಾಗಿತ್ತು. ಆದರೆ ಕನ್ನಡ ಚಿತ್ರರಂಗದವರನ್ನು ನಿರ್ಲಕ್ಷಿಸಿ ಅವಮಾನಿಸಲಾಗಿದೆ ಎಂದು ನಟ ದುನಿಯಾ ವಿಜಯ್ ವೇದಿಕೆಯಲ್ಲೇ ಗುಡುಗಿದ್ದಾರೆ.

ದುನಿಯಾ ವಿಜಯ್ ಅವರ "ಭೀಮ" ಸಿನಿಮಾಗೆ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಘೋಷಣೆಯಾಗಿತ್ತು. ಈ ಹಿನ್ನೆಲೆ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋದ ದುನಿಯಾ ವಿಜಯ್, ಸೈಮಾ ವಿರುದ್ಧ ಗರಂ ಆಗಿದ್ದಾರೆ. 'ಎಲ್ಲರೂ ಹೋದ ಮೇಲೆ ಕನ್ನಡ ಚಿತ್ರರಂಗದವರನ್ನು ಕರೆದು ಪ್ರಶಸ್ತಿ ಕೊಡೋದು ಸರಿನಾ? ಎಂದು ಕೇಳಿದ್ದಾರೆ. ಕಾರ್ಯಕ್ರಮದಲ್ಲಿ ಯಾರೂ ಇಲ್ಲದಿದ್ದಾಗ ಕನ್ನಡಿಗರಿಗೆ ಅವಾರ್ಡ್ಸ್ ಕೊಡುತ್ತಿದ್ದೀರ. ಕನ್ನಡ ಭಾಷೆ ಈಗಾಗಲೇ ಎತ್ತರದಲ್ಲಿದೆ ಅಂತ ಅದನ್ನ ಕೆಳಗಿಳಿಸುವ ಕೆಲಸ ಮಾಡಬೇಡಿ' ಎಂದು ಖಾರವಾಗಿ ಮಾತನಾಡಿದ್ದಾರೆ.
'ಈ ಕಾರ್ಯಕ್ರಮವನ್ನು ಮುಂದಿನ ಬಾರಿ ಹೀಗೆಲ್ಲ ಮಾಡೋಕೆ ಹೋಗ್ಬೇಡಿ. ನಮಗೆಲ್ಲ ಈಗಾಗಲೇ ಪ್ರಶಸ್ತಿ ಬಂದಾಗಿದೆ ಪರವಾಗಿಲ್ಲ. ಆದರೆ ಹೊಸಬರು ಬಂದಾಗ ಈ ರೀತಿ ಮಾಡಿದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ. ನಾವೆಲ್ಲ ಮೊದಲ ಸಿನಿಮಾಗಳಲ್ಲೇ ಪ್ರಶಸ್ತಿ ತಗೊಂಡ್ವಿ. ಈ ವಿಧಾನದಲ್ಲಿ ಪ್ರಶಸ್ತಿ ಕೊಟ್ಟರೆ ಅದನ್ನ ತಗೊಳ್ಳೋದು ಕೂಡ ವೇಸ್ಟ್' ಎಂದಿದ್ದಾರೆ.
'ಮುಂದೆ ಸೈಮಾಗೆ ಬರಲ್ಲ'
'ಕನ್ನಡದ ಇನ್‌ಚಾರ್ಜ್ ವಹಿಸಿಕೊಂಡಿರುವವರು ಈ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಂಡರೆ ಒಳ್ಳೆಯದು. ಪ್ರತಿ ಬಾರಿಯೂ ಕನ್ನಡ ಪ್ರಶಸ್ತಿಗಳನ್ನ ಕೊನೆಯಲ್ಲಿ ಕೊಡ್ತೀರ. ಈ ಬಗ್ಗೆ ತುಂಬಾ ಬೇಜಾರಿದೆ. ಕನ್ನಡ ಅಷ್ಟೊಂದು ಕೆಳಮಟ್ಟಕ್ಕೆ ಇಳಿದಿಲ್ಲ. ಕನ್ನಡ ತುಂಬಾ ದೊಡ್ಡ ಸ್ಥಾನದಲ್ಲಿದೆ. ಹಾಗಾಗಿ ಕನ್ನಡಕ್ಕೆ ತುಂಬಾ ದೊಡ್ಡ ಗೌರವ ಕೊಡಿ. ಮುಂದೆ ಏನಾದ್ರೂ ಇದೇ ತರ ನಡೆದುಕೊಂಡರೆ ನಾವ್ಯಾರೂ ಸೈಮಾ ಕಾರ್ಯಕ್ರಮಕ್ಕೆ ಬರೋದೆ ಇಲ್ಲ' ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಹಿಂದೆಯೂ ಸೈಮಾ ಕಾರ್ಯಕ್ರಮದಲ್ಲಿ ಕನ್ನಡದ ಕಲಾವಿದರನ್ನು ನಿರ್ಲಕ್ಷಿಸಿರುವ ಆರೋಪ ಕೇಳಿಬಂದಿತ್ತು. ನಟ ದರ್ಶನ್ ತೂಗುದೀಪ ಕೂಡ ಈ ಬಗ್ಗೆ ಗರಂ ಆಗಿದ್ದರು. ಕನ್ನಡದವರನ್ನ ಎಲ್ಲೋ ಕೂರಿಸುತ್ತಾರೆ. ಇದೇ ಕಾರಣಕ್ಕೆ ನಾನು ಅವಾರ್ಡ್ ಪಡೆಯಲು ಹೋಗಲ್ಲ. ನಿಜವಾಗಿ ಕನ್ನಡದ ಕಲಾವಿದರಿಗೆ ಕಾರ್ಯಕ್ರಮದ ಮುಂದಿನ ಸಾಲಿನಲ್ಲಿ ಜಾಗ ಕೊಡಬೇಕು ಆಗ ಮಾತ್ರ ಅಂತಹ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದಿದ್ದರು. ಅದರಂತೆ ಬೆಂಗಳೂರಿನಲ್ಲಿ ನಡೆದ ಸೈಮಾ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ಗೆ ಆದ್ಯತೆ ಕೊಡಲಾಗಿತ್ತು. ಈಗ ಮತ್ತೆ ಸೈಮಾ ಅದೇ ಎಡವಟ್ಟು ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.












Click it and Unblock the Notifications