Kantara Chapter 1: ಬಾಲ್ಯದಲ್ಲಿ ಅಜ್ಜಿ ಹೇಳಿದ್ದ ಕಥೆಗಳೇ ಕಾಂತಾರ ಸಿನಿಮಾ ಆಗಿದೆ: ನಟ ಜೂ.ಎನ್‌ಟಿಆರ್
ರಿಷಬ್ ಶೆಟ್ಟಿ ಹಾಗೂ ಟಾಲಿವುಡ್ ನಟ ಯಂಗ್ ಟೈಗರ್ ಜ್ಯೂನಿಯರ್ ಎನ್‌ಟಿಆರ್ (ತಾರಕ್) ಬೆಳೆದಿದ್ದು ಬೇರೆ ಬೇರೆ ಚಿತ್ರರಂಗದಲ್ಲಾದರೂ ಮೂಲತಃ ಒಂದೇ ಊರಿನ ನಂಟು ಹೊಂದಿದ್ದಾರೆ. ತಾರಕ್ ಅವರ ತಾಯಿ ಕುಂದಾಪುರದವರು. ಹೀಗಾಗಿ ಅವರಿಗೆ ಕನ್ನಡದಲ್ಲಿ ಮಾತನಾಡಲು ಬರುತ್ತೆ. ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್-1 ಸಿನಿಮಾ ರಿಲೀಸ್‌ಗೆ ತಾರಕ್ ಕೂಡ ಸಾಥ್ ನೀಡಿದ್ದಾರೆ. ಇದೇ ವೇಳೆ ಈ ಸಿನಿಮಾ ಬಗ್ಗೆ ಅವರು ಅಚ್ಚರಿಯ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ಕಾಂತಾರ ಸಿನಿಮಾ ಕಾರ್ಯಕ್ರಮದಲ್ಲಿ ಜ್ಯೂನಿಯರ್ ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಬಾಲ್ಯದಲ್ಲಿ ನಾನು ಕೇಳಿದ್ದ ಕಥೆಗಳು ಸಿನಿಮಾ ಆಗುತ್ತೆ ಎಂದು ನಾನು ಭಾವಿಸಿರಲಿಲ್ಲ ಎಂದು ಕಾಂತಾರ ಬಗ್ಗೆ ಅಚ್ಚರಿ ವಿಚಾರ ಹೇಳಿದ್ದಾರೆ. ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿ ಕುಂದಾಪುರದ ಬಳಿ ಇದೆ ಎಂದು ನನ್ನ ಅಜ್ಜಿ ನನಗೆ ಹೇಳುತ್ತಿದ್ದರು. ಅವರು ಅದಕ್ಕೆ ಸಂಬಂಧಿಸಿದ ಕಥೆಗಳನ್ನು ಕೂಡ ಹೇಳುತ್ತಿದ್ದರು. ನನಗೆ ಅದು ಇಷ್ಟವಾಗುತ್ತಿತ್ತು ಎಂದಿದ್ದಾರೆ.

ಆ ಕಥೆಗಳ ಬಗ್ಗೆ ನನಗೆ ಅನುಮಾನಗಳಿದ್ದವು. ಇದೆಲ್ಲ ನಿಜವಾಗಿಯೂ ಸಂಭವಿಸುತ್ತದೆಯೇ ಎಂದು ಕೇಳುತ್ತಿದ್ದೆ. ಮುಖ್ಯವಾಗಿ ಪಂಜುರ್ಲಿಯ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸೆ ಇತ್ತು. ನಾನು ಬಾಲ್ಯದಲ್ಲಿ ಕೇಳಿದ ಕಥೆಗಳೇ ಸಿನಿಮಾ ಆಗಿ ಬರುತ್ತೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಇದನ್ನು ನನ್ನ ಸಹೋದರ ರಿಷಬ್ ಶೆಟ್ಟಿ ಸಾಧ್ಯವಾಗಿಸಿದ್ದಾರೆ ಎಂದು ನೆನೆದಿದ್ದಾರೆ.
ಬಾಲ್ಯದಲ್ಲಿ ನಾನು ಕೇಳಿದ ಕಥೆಗಳನ್ನು ಈಗ ಸ್ಕ್ರೀನ್ ಮೇಲೆ ನೋಡಿ ನಿಜಕ್ಕೂ ಅಚ್ಚರಿ ಆಯ್ತು. ಅದನ್ನು ನಾನು ಪದಗಳಲ್ಲಿ ಹೇಳಲು ಆಗಲ್ಲ. ಈ ದಸರಾದಲ್ಲಿ ನಾವೆಲ್ಲರೂ ನಿಜಕ್ಕೂ ಕಾಂತಾರ ಅಧ್ಯಾಯ 1 ನೋಡಿ ಆಶೀರ್ವಾದ ಪಡೆಯಬೇಕು ಎಂದಿದ್ದಾರೆ. ರಿಷಬ್ ಇಲ್ಲದಿದ್ದರೆ ಈ ಸಿನಿಮಾ ಈ ರೀತಿ ಬೆಳಕಿಗೆ ಬರುತ್ತಿರಲಿಲ್ಲ. ಅವರಿಲ್ಲದೆ ಈ ಚಿತ್ರ ಈ ಪ್ರಮಾಣದಲ್ಲಿ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಕನ್ನಡದಲ್ಲೇ ಮಾತನಾಡಿದ ರಿಷಬ್
ಹೈದರಾಬಾದ್ ಕಾರ್ಯಕ್ರಮದಲ್ಲೂ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ದಾರೆ. ನಾನು ಮನಸಿಂದ ಮಾತನಾಡಬೇಕು. ಹಾಗಾಗಿ ಮಾತೃಭಾಷೆ ಕನ್ನಡದಲ್ಲೇ ಮಾತನಾಡ್ತೀನಿ. ಏನಾದ್ರೂ ಗೊತ್ತಾಗಲಿಲ್ಲ ಅಂದ್ರೆ ನನ್ನ ಸಹೋದರ ಎನ್‌ಟಿಆರ್ ನಿಮಗೆ ಭಾಷಾಂತರ ಮಾಡ್ತಾರೆ ಎಂದು ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ಜೂನಿಯರ್ ಎನ್‌ಟಿಆರ್ ನನ್ನ ಸ್ನೇಹಿತ, ನನ್ನ ಸಹೋದರ ಮತ್ತು ಅವರು ಕೇವಲ ತೆಲುಗು ಹೀರೋ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ಅವರು ನಮ್ಮ ಮನೆಯ ಸಹೋದರ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ.












Click it and Unblock the Notifications