Manjunath Sangalad: 'ನನ್ನ ಗೆಳತಿ ನನ್ನ ಗೆಳತಿ' ಖ್ಯಾತಿಯ ಗಾಯಕ ಇನ್ನಿಲ್ಲ, ಆಗಿದ್ದೇನು?
ಒಂದು ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದ್ದ ನನ್ನ ಗೆಳತಿ, ನನ್ನ ಗೆಳತಿ ಜಾನಪದ ಹಾಡಿನ ಗಾಯಕ ಮಂಜುನಾಥ್ ಸಂಗಳದ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹುಬ್ಬಳ್ಳಿಯ ತಾರಿಹಾಳ ಗ್ರಾಮದ ನಿವಾಸಿಯಾಗಿದ್ದ ಮಂಜುನಾಥ್ ಅವರಿಗೆ ನಿನ್ನೆ ಎದೆನೋವು ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ದುರಾದೃಷ್ಟವಶಾತ್ ಮಾರ್ಗ ಮಧ್ಯೆದಲ್ಲೇ ಇಹಲೋಹ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಜುನಾಥ್ ಅವರಿಗೆ ಪತ್ನಿ ಇದ್ದು, ಆರು ತಿಂಗಳ ಗರ್ಭಿಣಿ ಎನ್ನಲಾಗಿದೆ. ಗಾಯಕ ಮಂಜುನಾಥ್ ಅವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಾರಿಹಾಳ ಗ್ರಾಮದ ಹೊರವಲಯದಲ್ಲಿ ಮಂಜುನಾಥ್ ಅವರಿಗೆ ವಿಧಿವಿಧಾನದ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಜಾನಪದ ಹಾಡುಗಳ ಮೂಲಕ ನಾಡಿನ ಜನತೆಯ ಮನಗೆದ್ದಿದ್ದ ಮಂಜುನಾಥ್ ಸಂಗಲದ ಅವರ ಅಗಲಿಕೆಗೆ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿನಲ್ಲೇ ನಿಧನರಾದ ಅವರ ಆತ್ಮಕ್ಕೆ ಸದ್ಗತಿ ಲಭಿಸಲಿ. ಅವರ ಗರ್ಭಿಣಿ ಪತ್ನಿ ಹಾಗೂ ಅವರ ಕುಟುಂಬಕ್ಕೆ ಮಂಜುನಾಥ್ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. ಮಂಜುನಾಥ್ ಸಂಗಳದ ಅವರು ಈ ಹಿಂದೆ ನನ್ನ ಗೆಳತಿ, ನನ್ನ ಗೆಳತಿ, ನನ್ನ ನೋಡಿ ನಗುತಿ ಎನ್ನುವ ಜಾನಪದ ಹಾಡಿನ ಮೂಲಕ ಕನ್ನಡಿಗರ ಮನಗೆದ್ದಿದ್ದರು.
ಮಂಜುನಾಥ ಸಂಗಳದ ಭಜನೆ ಹಾಡಿನ ಮೂಲಕ ಬೆಳಕಿಗೆ ಬಂದು ನಂತರ ಜಾನಪದ ಹಾಡುಗಾರರಾಗಿ ಹೊರಹೊಮ್ಮಿದ್ದರು. ಅವರು ಬರೆದ ನನ್ನ ಗೆಳತಿ ಹಾಡನ್ನು ಕೋಟ್ಯಂತರ ಜನ ವೀಕ್ಷಣೆ ಮಾಡಿದ್ದರು. ಇಡೀ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಸದ್ದು ಈ ಹಾಡು ಸದ್ದು ಮಾಡಿತ್ತು. ಹಾಡಿನ ರಚನೆಕಾರ ಮತ್ತು ಹಾಡುಗಾರರೂ ಆದ ಮಂಜುನಾಥ ಸಂಗಳದ ತಾರಿಹಾಳದಲ್ಲಿ ವಿಧಿವಶರಾಗಿದ್ದಾರೆ. ಮಂಜುನಾಥ್ ಅವರು ಉತ್ತರ ಕರ್ನಾಟಕದ ಅತ್ಯುತ್ತಮ ಹಾಡುಗಾರ ಎಂದು ಹೆಸರುವಾಸಿಯಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಅವರು ಎಪಿಎಂಸಿ ಚುನಾವಣೆಯ ಸಂಬಂಧವಾಗಿ ಇವರ ಹೆಸರು ಮುನ್ನೆಲೆಗೆ ಬಂದಿತ್ತು.
ನನ್ನ ಗೆಳತಿ ಹಾಡಿನ ಹಿಂದಿನ ಕಥೆಯೇನು?
ನನ್ನ ಗೆಳತಿ, ನನ್ನ ಗೆಳತಿ, ನನ್ನ ನೋಡಿ ನೀ ನಗುತೀ ಹಾಡು ಮಂಜುನಾಥ ಸಂಗಳದ ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟಿತ್ತು. ಆದರೆ, ಈ ಹಾಡಿನ ಹಿಂದೆ ಒಂದು ಕಥೆಯೂ ಇತ್ತು. ಅಸಲಿಗೆ ಮಂಜುನಾಥ್ ಅವರು ತಮ್ಮ ಗೆಳೆಯನ ಪ್ರೇಮಕಥೆಯಿಂದಲೇ ಪ್ರೇರಣೆಗೊಂಡು ಈ ಹಾಡು ಬರೆದಿದ್ದರು ಎನ್ನಲಾಗಿದೆ. ಇದರಿಂದ ಮೂಡಿದ್ದ ನನ್ನ ಗೆಳತಿ ನನ್ನ ಗೆಳತಿ ಹಾಡು ಮುಂದೆ ಅವರಿಗೆ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಅಲ್ಲದೆ ಈ ಹಾಡು ಸಖತ್ ಹಿಟ್ ಕಂಡ ಮೇಲೆ ಹಲವರು ಈ ಟ್ಯೂನ್ ಕೂಡ ಕದ್ದಿದ್ದರು. ಇದೇ ಹಾಡನ್ನು ರ್‍ಯಾಪ್ ವರ್ಷನ್‌ನಲ್ಲೂ ಬಳಸಿಕೊಂಡಿದ್ದರು. ಈ ವಿಚಾರವಾಗಿಯೂ ಮಂಜುನಾಥ್ ಅವರು ಬಹಳ ಬೇಸರಗೊಂಡಿದ್ದರು. ಉತ್ತರ ಕರ್ನಾಟಕ ಭಾಗದ ಪ್ರತಿಭಾವಂತ ಕಲಾವಿದರಾಗಿ ಮಂಜುನಾಥ್ ಅವರು ಗುರುತಿಸಿಕೊಂಡಿದ್ದಾರೆ. ಅವರ ನಿಧನದಿಂದ ಉತ್ತರ ಕರ್ನಾಟಕ ಮಂದಿ ನಿಜಕ್ಕೂ ಆಘಾತಕ್ಕೆ ಒಳಗಾಗಿದ್ದಾರೆ.












Click it and Unblock the Notifications