ಕೊರಿಯೋಗ್ರಫರ್ ಜಾನಿ ಮಾಸ್ಟರ್ ವಿರುದ್ಧ ಗಂಭೀರ ಆರೋಪ
ಕನ್ನಡದ ನಟರಿಗೆ ನೃತ್ಯ ಸಂಯೋಜಿಸಿ ಮನೆಮಾತಾಗಿದ್ದ ತೆಲುಗಿನ ಕೊರಿಯೋಗ್ರಫರ್ ಜಾನಿ ಮಾಸ್ಟರ್ (ಶೈಕ್ ಜಾನಿ ಬಾಷಾ) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಜಾನಿ ಮಾಸ್ಟರ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ಜಾನಿ ಮಾಸ್ಟರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
21 ವರ್ಷದ ಯುವತಿಯೊಬ್ಬರು ಜಾನಿ ಮಾಸ್ಟರ್ ವಿರುದ್ಧ ಈ ಆರೋಪ ಮಾಡಿದ್ದು, ಇವರೂ ಕೂಡ ನೃತ್ಯ ಸಂಯೋಜಕಿ ಎನ್ನಲಾಗಿದೆ. ಯುವತಿ ದೂರು ಆಧರಿಸಿ ಹೈದರಾಬಾದ್‌ನ ರಾಯದುರ್ಗಂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ದೂರುದಾರ ಯುವತಿಯು ಜಾನಿ ಮಾಸ್ಟರ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು, ಔಟ್‌ಡೋರ್ ಶೂಟಿಂಗ್ ಸಮಯದಲ್ಲಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಯುವತಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಈ ಕೇಸ್ ಅನ್ನು ನರ್‌ಸಿಂಘಿ ಪೊಲೀಸರಿಗೆ ಹೆಚ್ಚಿನ ತನಿಖೆಗಾಗಿ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಶೂಟಿಂಗ್‌ಗಾಗಿ ವಿವಿಧ ನಗರಗಳಿಗೆ ಜಾನಿ ಅವರೊಂದಿಗೆ ನಾನು ತೆರಳಿದ್ದೆ. ಈ ವೇಳೆ ಅವರು ನನ್ನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನನ್ನ ನರ್‌ಸಿಂಗಿ ನಿವಾಸದಲ್ಲೂ ಜಾನಿ ನನಗೆ ಹಲವು ಬಾರಿ ದೌರ್ಜನ್ಯ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ತೆಲಂಗಾಣ ಮಹಿಳಾ ಸುರಕ್ಷತಾ ವಿಭಾಗದ ಡಿಜಿ ಶಿಖಾ ಗೋಯೆಲ್ ಮಾತನಾಡಿ, ಈ ಕೇಸ್ ಸಂಬಂಧ ಚಿತ್ರರಂಗದವರು ನನ್ನನ್ನು ಸಂಪರ್ಕಿಸಿದ್ದಾರೆ. ಲೈಂಗಿಕ ಕಿರುಕುಳ ತಡೆ (PoSH) ಕಾಯ್ದೆಯಡಿ ಆಂತರಿಕ ತನಿಖೆ ನಡೆಸುವಂತೆ ನಾನು ಅವರಿಗೆ ಸಲಹೆ ನೀಡಿದ್ದೇನೆ. ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವುದರಿಂದ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆಯೂ ತಿಳಿಸಿದ್ದೇನೆ ಎಂದಿದ್ದಾರೆ.
ಜಾನಿ ಮಾಸ್ಟರ್ ಅವರ ವಿರುದ್ಧ ಕೇಸ್ ದಾಖಲಾಗಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಡ್ಯಾನ್ಸರ್ ಸತೀಶ್ ಎಂಬುವವರು ಕೂಡ ಜಾನಿ ಅವರ ವಿರುದ್ಧ ದೂರು ದಾಖಲಿಸಿದ್ದರು. ಜಾನಿ ಅವರು ತನಗೆ ಶೂಟಿಂಗ್‌ನಲ್ಲಿ ಕೆಲಸ ಸಿಗದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. 2015ರಲ್ಲಿ ಕಾಲೇಜುವೊಂದರಲ್ಲಿ ನಡೆದಿದ್ದ ಜಗಳದ ವಿಚಾರವಾಗಿಯೂ ಜಾನಿ ಮಾಸ್ಟರ್ ಅವರಿಗೆ ಕೋರ್ಟ್ ಆರು ತಿಂಗಳ ಶಿಕ್ಷೆ ವಿಧಿಸಿತ್ತು ಎನ್ನಲಾಗಿದೆ.

ಕನ್ನಡಿಗರಿಗೂ ಜಾನಿ ಪರಿಚಿತ: ಜಾನಿ ಮಾಸ್ಟರ್ ಕನ್ನಡ ಸಿನಿಮಾಗಳಿಗೂ ನೃತ್ಯ ಸಂಯೋಜನೆ ಮಾಡಿ ಗಮನ ಸೆಳೆದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ನಟಿಸಿದ 'ರಾಜಕುಮಾರ್' ಸಿನಿಮಾದ 'ಅಪ್ಪು ಡ್ಯಾನ್ಸ್ ಡ್ಯಾನ್ಸ್', ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ 'ರಾ ರಾ ರಕ್ಕಮ್ಮ' ಸೇರಿದಂತೆ ಹಿಟ್ ಗೀತೆಗಳಿಗೆ ಕೊರಿಯೋಗ್ರಫಿ ಮಾಡಿದ್ದರು ಇದೇ ಜಾನಿ ಮಾಸ್ಟರ್.
ಪುನೀತ್ ರಾಜ್‌ಕುಮಾರ್ ಅವರ ನಿಧನದ ನಂತರವೂ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. 'ಅಕಿರ', 'ರಾಜಕುಮಾರ', 'ರಾಜರಥ', 'ನಟಸಾರ್ವಭೌಮ', 'ಯುವರತ್ನ', 'ವಿಕ್ರಾಂತ್ ರೋಣ', 'ಕಬ್ಜ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಜಾನಿ ಮಾಸ್ಟರ್ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಕನ್ನಡಿಗರಿಗೂ ಇವರು ಚಿರಪರಿಚಿತರು.












Click it and Unblock the Notifications