Range Rover Gift: ನಿರ್ದೇಶಕನಿಗೆ ದುಬಾರಿ ರೇಂಜ್ ರೋವರ್ ಕಾರು ಗಿಫ್ಟ್ ಕೊಟ್ಟ ನಟ ಚಿರಂಜೀವಿ
ಟಾಲಿವುಡ್ ಮೆಗಾಸ್ಟಾರ್ ನಟ ಚಿರಂಜೀವಿ ಅವರು ತಮ್ಮ ಇತ್ತೀಚಿನ ಸೂಪರ್‌ಹಿಟ್ ಸಿನಿಮಾ 'ಮನ ಶಂಕರ ವರ ಪ್ರಸಾದ್ ಗಾರು' ಭರ್ಜರಿ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಲಾಭ ಗಳಿಸಿರುವ ಈ ಚಿತ್ರವು, ಚಿರಂಜೀವಿ ಹಾಗೂ ನಿರ್ದೇಶಕ ಅನಿಲ್ ರವಿಪುಡಿ ಇಬ್ಬರ ವೃತ್ತಿಜೀವನದಲ್ಲೂ ಮಹತ್ವದ ಮೈಲಿಗಲ್ಲಾಗಿದೆ. ಈ ಯಶಸ್ಸಿಗೆ ಕೃತಜ್ಞತೆಯ ಸೂಚಕವಾಗಿ ಚಿರಂಜೀವಿ ಅವರು ನಿರ್ದೇಶಕ ಅನಿಲ್ ರವಿಪುಡಿಗೆ ದುಬಾರಿ ಬೆಲೆಯ ರೇಂಜ್ ರೋವರ್ ಸ್ಪೋರ್ಟ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜನವರಿ 12ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರವು ಪ್ರಭಾಸ್ ಅಭಿನಯದ 'ದಿ ರಾಜಾ ಸಾಬ್' ಹಾಗೂ ನವೀನ್ ಪೋಲೀಶೆಟ್ಟಿ ನಟನೆಯ 'ಅನಗನಗ ಓಕ ರಾಜು' ಸೇರಿದಂತೆ ಭಾರೀ ನಿರೀಕ್ಷೆಯ ಚಿತ್ರಗಳಿಗೆ ಪೈಪೋಟಿ ನೀಡಿತ್ತು. ಆದರೆ ಆ ಎಲ್ಲ ಚಿತ್ರಗಳನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್‌ನಲ್ಲಿ ಅಪ್ರತಿಮ ಜಯ ಸಾಧಿಸುವ ಮೂಲಕ ಈ ಸಿನಿಮಾ ಸಂಕ್ರಾಂತಿ ರೇಸ್‌ನ ವಿಜೇತವಾಗಿ ಹೊರಹೊಮ್ಮಿದೆ. ಚಿತ್ರವು ಇನ್ನೂ ಯಶಸ್ವಿ ಪ್ರದರ್ಶನ ಮುಂದುವರಿಸುತ್ತಿದ್ದು, ಟಾಲಿವುಡ್‌ನಲ್ಲಿ ವರ್ಷದ ದೊಡ್ಡ ಹಿಟ್‌ಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಈ ಹಿನ್ನೆಲೆ ಚಿರಂಜೀವಿ ಅವರು ತಮ್ಮ ಸಿನಿಮಾದ ನಿರ್ದೇಶಕನಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಈ ಸಂದರ್ಭದಲ್ಲಿ ತುಂಬಾ ಸಂತಸ ವ್ಯಕ್ತಪಡಿಸಿದ್ದು, ಚಿರಂಜೀವಿ ಅವರ ಪ್ರೀತಿ ಮತ್ತು ನಂಬಿಕೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. 'ಮನ ಶಂಕರ ವರ ಪ್ರಸಾದ್ ಗಾರು' ಚಿತ್ರದ ಈ ಬ್ಲಾಕ್‌ಬಸ್ಟರ್ ಯಶಸ್ಸು, ಚಿರಂಜೀವಿ-ರವಿಪುಡಿ ಕಾಂಬಿನೇಷನ್‌ಗೆ ಮತ್ತಷ್ಟು ಗೌರವ ತಂದುಕೊಟ್ಟಿದೆ.
ದುಬಾರಿ ಬ್ರಾಂಡೆಡ್ ವಾಚ್ ಕೊಟ್ಟಿದ್ದ ಚಿರು
ಈ ಹಿಂದೆ ಕೂಡ ಚಿರಂಜೀವಿ ಅವರು ನಿರ್ದೇಶಕ ಅನಿಲ್ ರವಿಪುಡಿ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ರವಿಪುಡಿ ಅವರ ಜನ್ಮದಿನದ ಸಂದರ್ಭದಲ್ಲಿ ದುಬಾರಿ ಬ್ರಾಂಡೆಡ್ ವಾಚ್ ಉಡುಗೊರೆಯಾಗಿ ನೀಡಿದ್ದ ಚಿರಂಜೀವಿ, ಈಗ ಕಾರು ಉಡುಗೊರೆಯ ಮೂಲಕ ತಮ್ಮ ವೃತ್ತಿಪರ ಸ್ನೇಹವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಕಾರು ಹಸ್ತಾಂತರಿಸಿದ ಸಂದರ್ಭದಲ್ಲಿ ಮಾತನಾಡಿದ ಚಿರಂಜೀವಿ, ನನ್ನ 'ಖೈದಿ ನಂ.150' ಮತ್ತು 'ವಾಲ್ತೇರ್ ವೀರಯ್ಯ' ನಂತರ ಈ ಚಿತ್ರದ ಸೆಟ್‌ಗೆ ಬರೋದು ನನಗೆ ತುಂಬಾ ಖುಷಿ ಕೊಟ್ಟಿತು ಎಂದು ಹೇಳಿಕೊಂಡಿದ್ದಾರೆ.
'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ಚಿರಂಜೀವಿಗೆ ವೃತ್ತಿಜೀವನದ ಒಂದು ದೊಡ್ಡ ತಿರುವು ನೀಡಿದೆ. 2023ರಲ್ಲಿ ಬಿಡುಗಡೆಯಾದ 'ಭೋಲಾ ಶಂಕರ್' ಚಿತ್ರದ ಬಾಕ್ಸ್ ಆಫೀಸ್ ವೈಫಲ್ಯದ ನಂತರ, ಈ ಸಿನಿಮಾ ಮೂಲಕ ಅಭಿಮಾನಿಗಳು ನಿರೀಕ್ಷಿಸಿದ್ದ ಹಾಸ್ಯ, ಸ್ವಾಗ್ ಹಾಗೂ ವಿಂಟೇಜ್ ಚಿರಂಜೀವಿಯನ್ನು ಅನಿಲ್ ರವಿಪುಡಿ ಯಶಸ್ವಿಯಾಗಿ ತೆರೆಗೆ ತಂದಿದ್ದಾರೆ ಅಭಿಪ್ರಾಯ ಅಭಿಮಾನಗಳಲ್ಲಿ ವ್ಯಕ್ತವಾಗಿದೆ. ಈ ಚಿತ್ರದ ಅಪಾರ ಯಶಸ್ಸು, ಮೆಗಾಸ್ಟಾರ್ ಇನ್ನೂ ಟಾಲಿವುಡ್ ಬಾಕ್ಸ್ ಆಫೀಸ್‌ನ ಕಿಂಗ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.












Click it and Unblock the Notifications