Vishnuvardhan Samadhi: ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸಮಾಧಿ ನೆಲಸಮ!
ಸ್ಯಾಂಡಲ್‌ವುಟ್ ಹಿರಿಯ ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಹಬ್ಬದ ದಿನವೇ ಆಘಾತದ ಸುದ್ದಿ ಹೊರಬಿದ್ದಿದೆ. ವಿಷ್ಣುದಾದಾ ಅವರ ಸಮಾಧಿ ವಿಚಾರವಾಗಿ ಹಿಂದಿನಿಂದಲೂ ವಿವಾದಗಳು ಬೂದಿಮುಚ್ಚಿದೆ ಕೆಂಡದಂತಿತ್ತು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಮೂಲ ಸಮಾಧಿ ಜಾಗವನ್ನು ರಾತ್ರೋರಾತ್ರಿ ನೆಲಸಮ ಮಾಡಿರುವುದಾಗಿ ತಿಳಿದುಬಂದಿದೆ. ಹಬ್ಬದ ಸಂಭ್ರಮದಲ್ಲಿದ್ದ ವಿಷ್ಣು ಅಭಿಮಾನಿಗಳಿಗೆ ಈ ವಿಚಾರ ಬೇಸರ ಮೂಡಿಸಿದೆ. ಈ ಹಿಂದೆ ಈ ಸಮಾಧಿ ಜಾಗಕ್ಕೆ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈಗ ಸಮಾಧಿ ಜಾಗವನ್ನೇ ನೆಲಸಮ ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ಅಭಿಮಾನಿಗಳ ಆರಾಧ್ಯದೈವ, ದಿವಂಗತ ನಟ ವಿಷ್ಣುವರ್ಧನ್ ಅವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಿರುವ ದುಃಖದ ಘಟನೆಯನ್ನು ನಿರ್ದೇಶಕ ರವಿ ಶ್ರೀವತ್ಸ ಅವರು ಬಹಿರಂಗಪಡಿಸಿದ್ದಾರೆ. ರವಿ ಅವರು ಇಂದು ಸ್ಟುಡಿಯೋ ಜಾಗಕ್ಕೆ ತೆರಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಫೇಸ್‌ಬುಕ್ ಲೈವ್ ಮಾಡಿ ಈ ವಿಚಾರವನ್ನು ಅಭಿಮಾನಿಗಳಿಗೆ ಮುಟ್ಟಿಸಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿ ಇರುವ ವಿಷ್ಣುವರ್ಧನ್ ಸಮಾಧಿ ಸ್ಥಳಕ್ಕೆ ಅಭಿಮಾನಿಗಳಿಗೆ ಪ್ರವೇಶ ಸಿಗುತ್ತಿಲ್ಲ. ಈಗಾಗಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಿದೆ. ಆದರೂ ಕೂಡ ಅಂತ್ಯಸಂಸ್ಕಾರ ನಡೆದ ಸ್ಥಳದ ಬಗ್ಗೆ ಅಭಿಮಾನಿಗಳಿಗೆ ಭಾವನಾತ್ಮಕ ನಂಟು ಇತ್ತು. ಆದರೆ ಈಗ ಸಮಾಧಿ ಸ್ಥಳವನ್ನು ನೆಲಸಮ ಮಾಡಿರುವುದಕ್ಕೆ ರವಿ ಶ್ರೀವತ್ಸ ಅವರು ಅಳುತ್ತಾ ಫೇಸ್ ಬುಕ್ ಲೈವ್ ಬಂದಿದ್ದಾರೆ.
"ನಮ್ಮ ದೇವರ ಗುಡಿಯನ್ನು ಇಂದು ನೆಲಸಮವಾಗಿದೆ. ಇದು ನಮ್ಮ ಯಜಮಾನರು ಮಲಗಿದ್ದ ಜಾಗ. ಅಲ್ಲೊಂದು ಪುಟ್ಟ ಗುಡಿ ಕೂಡ ಇತ್ತು. ಸಣ್ಣ ಗೋಪುರವಿತ್‌ತು. ಆ ಗೋಪುರವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ನಮ್ಮ ಯಜಮಾನರನ್ನು ನೋಡಲು ಬಂದರೆ, ಗೇಟ್ ಕೂಡ ತೆಗೆಯುತ್ತಿಲ್ಲ. ಪೊಲೀಸರು ಕಾವಲಿಗೆ ಕೂತ್ತಿದ್ದಾರೆ" ಎಂದು ರವಿ ಶ್ರೀವತ್ಸ ಲೈವ್‌ನಲ್ಲಿ ಮಾತನಾಡಿದ್ದಾರೆ.

"ವಿಷ್ಣು ಅವರ ಸಮಾಧಿಯನ್ನು ಕೂಡ ಕಾಪಾಡಿಕೊಳ್ಳಲು ಆಗದ ಮಟ್ಟದಲ್ಲಿ ನಾವಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ನಮ್ಮ ಯಜಮಾನರ ಜಾಗ ಈಗ ಬರೀ ಮಣ್ಣಾಗಿದೆ. ನನಗೆ ಈ ನೋವು ತಡೆಯಲು ಆಗುತ್ತಿಲ್ಲ. ನಮ್ಮ ಯಜಮಾನರನ್ನು ಇವತ್ತು ನಾವು ನಿಜವಾಗಿಯೂ ಕಳೆದುಕೊಂಡಿದ್ದೀವಿ. ಅವರಿಗೆ ಯಾರೂ ಇಲ್ಲ ಎಂಬಂತೆ ಅನಾಥರನ್ನಾಗಿ ಮಾಡಿಬಿಟ್ಟರು" ಎಂದು ರವಿ ಶ್ರೀವತ್ಸ ಕಣ್ಣೀರಿಟ್ಟಿದ್ದಾರೆ.
"ಇಷ್ಟೆಲ್ಲ ನಡೆಯುತ್ತಿದ್ದರೂ ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ದೊಡ್ಡ ನಿರ್ಮಾಪಕರು ಈಗ ಎಲ್ಲಿದ್ದೀರಿ?ನಿರ್ದೇಶಕರು ಎಲ್ಲಿದ್ದೀರಿ? ಬಂದು ನೆಲಸಮ ಆಗಿರುವ ನಮ್ಮ ಯಜಮಾನರನ್ನ ನೋಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇವರು ಫೇಸ್‌ಬುಲ್ ಲೈವ್ ಮಾಡುವಾಗಲೇ ಪೊಲೀಸರು ತಡೆದಿದ್ದು, ನನ್ನ ಮೇಲೆ ದರ್ಪ ತೋರಿದಿದ್ದಾರೆ. ನನ್ನ ಹಿಡಿದು ಎಳೆದಾಡಿದ್ದಾರೆ" ಎಂದು ಅಲ್ಲಿ ನಡೆದ ಘಟನೆ ವಿವರಿಸಿದ್ದಾರೆ.
ಏನಿದು ವಿವಾದ?
ಕನ್ನಡ ಚಿತ್ರರಂಗದ ಹಿರಿಯ ನಟ ಬಾಲಕೃಷ್ಣ (ಬಾಲಣ್ಣ) ಅವರು ಈ ಹಿಂದೆ ಅಭಿಮಾನ್ ಸ್ಟುಡಿಯೋ ಆರಂಭಿಸಿದ್ದರು. ಇದೇ ಜಾಗದಲ್ಲಿ ನಟ ವಿಷ್ಣುವರ್ಧನ್ ಅವರ ಸಮಾಧಿ ಇತ್ತು. ಈ ಜಾಗದ ವಿಚಾರವಾಗಿ ವಿವಾದಗಳಿದ್ದ ಕಾರಣ ವಿಷ್ಣುವರ್ಧನ್ ಅವರ ಸಮಾಧಿ ಜಾಗಕ್ಕೆ ನಿರ್ಬಂಧ ಹೇರಲಾಗಿತ್ತು. ಇತ್ತೀಚೆಗೆ ವಿಷ್ಣು ಅವರ ಜನ್ಮದಿನ, ಪುಣ್ಯಸ್ಮರಣೆಗೆ ಹೋದಾಗಲೂ ಅಭಿಮಾನಿಗಳಿಗೆ ಪ್ರವೇಶ ಕೊಡಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಲ್ಲಿ ವಿವಾದ ಎದುರಾಗಿದ್ದರಿಂದ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲಾಯಿತು. ಆದರೆ ಅಭಿಮಾನಿಗಳಿಗೆ ಇದು ಇಷ್ಟವಿರಲಿಲ್ಲ. ಮೂಲ ಸಮಾಧಿ ಇರುವುದು ಅಭಿಮಾನ್ ಸ್ಟುಡಿಯೋದಲ್ಲಿ ಎಂದು ವಾದಿಸಿದ್ದರು. ಈಗ ಅವರ ಸಮಾಧಿಯೂ ನೆಲಸಮವಾಗಿದೆ.












Click it and Unblock the Notifications