Darshan Thoogudeepa: ಬೇಲ್ ಸಿಕ್ಕ ಖುಷಿಯಲ್ಲಿದ್ದ ನಟ ದರ್ಶನ್‌ಗೆ ಪೊಲೀಸರಿಂದ ಮತ್ತೊಂದು ಶಾಕ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದರಿಂದ ನೆಮ್ಮದಿಯಾಗಿದ್ದ ದರ್ಶನ್ ಅವರಿಗೆ ಇದೀಗ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಇದೆ. ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಪೊಲೀಸರು ಮುಂದಾಗಿದ್ದಾರೆ.
ಈ ಬಗ್ಗೆ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಮಾಹಿತಿ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದರ್ಶನ್ ಅವರ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುವ ಸಂಬಂಧ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಅಲ್ಲಿಂದ ಪೂರ್ವಾನುಮತಿ ಸಿಕ್ಕ ನಂತರ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಮಂಜೂರು ಆದೇಶವನ್ನು ಪ್ರಶ್ನಿಸಲಿದ್ದೇವೆ ಎಂದು ಕಮೀಷನರ್ ಬಿ.ದಯಾನಂದ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿದೆ. ಮೊನ್ನೆ ಜಾಮೀನು ಪ್ರಕ್ರಿಯೆ ಮುಗಿಸಿ ಅವರು ಮತ್ತೆ ಚಿಕಿತ್ಸೆಯ ಕಾರಣಕ್ಕೆ ಆಸ್ಪತ್ರೆಗೆ ಮರಳಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರು ಅಲ್ಲಿಂದಲೇ ನೇರವಾಗಿ ಕೋರ್ಟ್‌ಗೆ ಬಂದು ಜಾಮೀನು ಪ್ರಕ್ರಿಯೆ ಮುಗಿಸಿದರು.

ನಟ ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಕೇಸ್‌ನಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ 57ನೇ ಸಿಸಿಎಚ್ ಕೋರ್ಟ್‌ಗೆ ಹಾಜರಾಗಿ, ಜಾಮೀನು ಪ್ರಕ್ರಿಯೆ ಮುಗಿಸಿದರು. ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಅಲ್ಲಿಂದಲೇ ನೇರವಾಗಿ ಕೋರ್ಟ್‌ಗೆ ಹಾಜರಾಗಿ ಜಾಮೀನಿಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದರು.
ಜಾಮೀನು ಪ್ರಕ್ರಿಯೆಯ ಸಂಬಂಧ ನಟ ದರ್ಶನ್ ಅವರ ಪರವಾಗಿ ಸಹೋದರ ದಿನಕರ್ ತೂಗುದೀಪ ಹಾಗೂ ನಟ ಧನ್ವೀರ್ ಶ್ಯೂರಿಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್ ಅವರು ಒಂದು ಲಕ್ಷ ರೂಪಾಯಿ ಮೌಲ್ಯದ ಬಾಂಡ್‌ಗೂ ಸಹಿ ಮಾಡಿದ್ದಾರೆ.

ದರ್ಶನ್ ಅವರು ಈ ಕೇಸ್‌ನಲ್ಲಿ ಬಂಧನವಾದ ನಂತರ ಅವರ ಪಾಸ್‌ಪೋರ್ಟ್ ವಶಕ್ಕೆ ಪಡೆಯಲಾಗಿತ್ತು. ಅದನ್ನು ದರ್ಶನ್ ಅವರಿಗೆ ಹಿಂತಿರುಗಿಸಲು ಹೈಕೋರ್ಟ್ ಅನುಮತಿ ನೀಡಿದೆ. ಜಾಮೀನು ಪ್ರಕ್ರಿಯೆ ಮುಗಿದ ಕಾರಣ ಕೋರ್ಟ್‌ನಿಂದ ನೇರವಾಗಿ ಮತ್ತೆ ಬಿಜಿಎಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಮುಂದುವರಿಸಿದ್ದಾರೆ. ಇತ್ತ ಪೊಲೀಸರು ದರ್ಶನ್ ಅವರಿಗೆ ಶಾಕ್ ನೀಡಲು ಮುಂದಾಗಿದ್ದಾರೆ.
ಈ ಹಿಂದೆಯೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡ ದರ್ಶನ್ ಅವರ ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಸದ್ಯ ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಕಾರಣ ಆರೋಗ್ಯ ಚೇತರಿಸಿಕೊಂಡ ನಂತರ ಮತ್ತೆ ಜೈಲಿಗೆ ಹೋಗಲೇಬೇಕು ಎಂದು ಪರಮೇಶ್ವರ್ ಹೇಳಿದ್ದರು. ಆಗ ಹೈಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದ ಸಂಬಂಧ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋಗುವುದಾಗಿ ಖಡಕ್ ಆಗಿ ಹೇಳಿದ್ದರು.












Click it and Unblock the Notifications