ACP Chandan: ದರ್ಶನ್ ಬಂಧಿಸಿದ್ದ ದಕ್ಷ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಅಮಾನತಿಗೆ ಮನವಿ! ಕಾರಣವೇನು?
ಎಸಿಪಿ ಚಂದನ್ ಕುಮಾರ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸುವ ಮೂಲಕ ಹೆಸರು ಮಾಡಿರುವ ಖಡಕ್ ಪೊಲೀಸ್ ಅಧಿಕಾರಿ. ದರ್ಶನ್ ಬಂಧನದ ಬಳಿಕ, ಪುನೀತ್ ಕೆರೆಹಳ್ಳಿ ವಿಚಾರದಲ್ಲಿ ಕೂಡ ಎಸಿಪಿ ಚಂದನ್ ಹೆಸರು ಮತ್ತೆ ಮುನ್ನಲೆಗೆ ಬಂದಿತ್ತು. ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಮಾಂಸವನ್ನು ನಾಯಿ ಮಾಂಸ ಎಂದು ತಪ್ಪು ದಾರಿಗೆ ಎಳೆಯಲು ಯತ್ನಿಸಿದ್ದ ಪುನೀತ್ ಕೆರೆಹಳ್ಳಿಯನ್ನು ಎಸಿಪಿ ಚಂದನ್ ಕುಮಾರ್ ಬಂಧಿಸಿದ್ದರು.
ಇದೀಗ ಎಸಿಪಿ ಚಂದನ್ ವಿರುದ್ಧವೇ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಕಳಪೆ ಮಾಂಸ ಸಾಗಾಟ ಮಾಡುವವರನ್ನು ಬಿಟ್ಟು ಪ್ರಶ್ನೆ ಮಾಡಲು ಹೋಗಿದ್ದ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಕುಮಾರ್ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಈ ಮೊದಲು ಕೂಡ ಹಿಂದೂ ಸಂಘಟನೆಗಳ ಒಕ್ಕೂಟ ಎಸಿಪಿ ಚಂದನ್ ವಿರುದ್ಧ ಪೊಲೀಸ್ ಕಮಿಷನರ್ ಅವರಿಗೆ ದೂರು ಕೊಟ್ಟಿತ್ತು.

ಏನಿದು ಘಟನೆ?
ಜುಲೈ 26 ರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ರಾಜಸ್ಥಾನದಿಂದ ಮಾಂಸ ತಂದಿರುವ ಬಾಕ್ಸ್‌ಗಳನ್ನು ತಡೆದಿದ್ದ ಪುನೀತ್ ಕೆರೆಹಳ್ಳಿ ಮತ್ತು ಆತನ ಬೆಂಬಲಿಗರು ಇದರಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಅದು ನಾಯಿ ಮಾಂಸ ಅಲ್ಲ ಕುರಿ ಮಾಂಸ ಎಂದು ತಿಳಿದ ಬಳಿಕ, ಇದು ಕಳಪೆ ಮಾಂಸ, ಸುರಕ್ಷತಾ ನಿಯಮಗಳನ್ನು ಪಾಲಿಸದೇ ಮಾಂಸವನ್ನು ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪುನೀತ್ ಕೆರೆಹಳ್ಳಿ ಮತ್ತು ಅಬ್ದುಲ್ ರಜಾಕ್ ನಡುವೆ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಿದ್ದರು. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು, ಇದೀಗ ರಾಜ್ಯಪಾಲರಿಗೂ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಏನಿದೆ?
ಕಳಪೆ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ, ಮಾಂಸ ಮಾರಾಟ ಮಾಡುವವರನ್ನು ಬಿಟ್ಟಿದ್ದಾರೆ. ಘಟನೆ ಸಂದರ್ಭದಲ್ಲಿ ಅಬ್ದುಲ್ ರಜಾಕ್ ಕೂಡ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದರು, ಆದರೆ ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಕಳಪೆ ಮಾಂಸ ತರಿಸುವ ಮೂಲಕ ಕೋಟ್ಯಂತರ ರೂಪಾಯಿ ದಂಧೆ ಮಾಡಲಾಗುತ್ತಿದೆ, ಸಾರ್ವಜನಿಕರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಎಸಿಪಿ ಚಂದನ್ ಅಮಾನತಿಗೆ ಆಗ್ರಹ
ನ್ಯಾಯವಾಗಿ ಮಾಂಸದ ಗುಣಮಟ್ಟ ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದಕ್ಕೆ ಪುನೀತ್ ಕೆರೆಹಳ್ಳಿಯನ್ನು ಬಂಧಿಸಲಾಗಿತ್ತು. ಶಾಂತಿ ಭಂಗ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಪುನೀತ್ ಕೆರೆಹಳ್ಳಿ ಮೇಲೆ ಚಂದನ್ ಕುಮಾರ್ ದೌರ್ಜನ್ಯ ಎಸಗಿದ್ದಾರೆ. ಸ್ವತಃ ಪುನೀತ್ ಅವರೇ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಕೂಡಲೇ ಎಸಿಪಿ ಚಂದನ್ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಅವರನ್ನು ಅಮಾನತು ಮಾಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.












Click it and Unblock the Notifications