ಅಮೃತಧಾರೆ ಸೀರಿಯಲ್ ನಟಿಯ ಸ್ಥಿತಿ ಗಂಭೀರ, ಚಾಕುವಿನಿಂದ ಇರಿದ ಪತಿ!
ಕನ್ನಡದ ಜನಪ್ರಿಯ ಧಾರಾವಾಹಿ "ಅಮೃತಧಾರೆ"ಯಲ್ಲಿ ನಟಿಸಿದ್ದ ಹಾಗೂ ನಿರೂಪಕಿ ಶ್ರುತಿ (ಮಂಜುಳಾ) ಅವರ ಮೇಲೆ ಪತಿಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಶ್ರುತಿ ಅವರ ಪತಿಯೇ ಈ ಕೃತ್ಯ ಎಸಗಿದ್ದು, ಜುಲೈ 4ರಂದು ನಡೆದ ಘಟನೆಯಲ್ಲಿ ಅಮರೇಶ್ ಪತ್ನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಇದು ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶ್ರುತಿ ಅವರನ್ನು ಶೀಘ್ರವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸದ್ಯ ಪೊಲೀಸರು ಶ್ರುತಿ ಅವರ ಪತಿ ಅಮರೇಶ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶ್ರುತಿ ಅವರ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ನಲ್ಲಿ ನಡೆದಿದೆ. ಶ್ರುತಿ ಅವರು "ಅಮೃತಧಾರೆ" ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಪತಿ ಅಮರೇಶ್ ಅವರು ಪೆಪ್ಪರ್ ಸ್ಪ್ರೇ ಬಳಸಿ ನಂತರ ಚಾಕುವಿನಿಂದ ಕುತ್ತಿಗೆ, ಪಕ್ಕೆಲುಬು ಮತ್ತು ತೊಡೆಯ ಭಾಗಕ್ಕೆ ಇರಿದು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಳಿಕ ನಟಿಯ ತಲೆ ಕೂದಲು ಹಿಡಿದು ಗೋಡೆಗೆ ಗುದ್ದಿ ಭೀಕರವಾಗಿ ಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪ ಪತಿ ಅಮರೇಶ್ ವಿರುದ್ಧ ಕೇಳಿಬಂದಿದೆ.
ಹಲ್ಲೆಗೆ ಕಾರಣವೇನು?
ಹಲವು ವರ್ಷಗಳ ಹಿಂದೆ ಅಮರೇಶ್ ಹಾಗೂ ಶ್ರುತಿ ಲವ್ ಮ್ಯಾರೇಜ್ ಆಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಬೆಂಗಳೂರಿನ ಹನುಮಂತನಗರದಲ್ಲಿ ವಾಸವಿದ್ದರು. ಆದರೆ ದಂಪತಿ ನಡುವೆ ಜಗಳ ವೈಮನಸ್ಸು ಇತ್ತು ಎಂದು ಹೇಳಲಾಗುತ್ತಿದೆ. ಇದೇ ವಿಚಾರ ಪತಿ ಅಮರೇಶ್‌ಗೆ ಇಷ್ಟವಾಗುತ್ತಿರಲಿಲ್ಲ. ಬಳಿಕ ಗಂಡನಿಂದ ದೂರವಾಗಿ ಅಣ್ಣನ ಮನೆಯಲ್ಲೇ ಅವರು ಇದ್ದರು. ಬಳಿಕ ಇಬ್ಬರೂ ರಾಜಿ ಮಾಡಿಕೊಂಡು ಮತ್ತೆ ಒಂದಾಗಿದ್ದರು ಎನ್ನಲಾಗಿದೆ.

ಕಳೆದ ಕೆಲ ತಿಂಗಳಿಂದ ಹಣಕಾಸು ಸಮಸ್ಯೆಗಳು ಮತ್ತು ವೈಯಕ್ತಿಕ ವಿಚಾರಗಳಲ್ಲಿ ಜಗಳಗಳು ನಡೆಯುತ್ತಿದ್ದು, ಇತ್ತೀಚೆಗೂ ಮನೆಯಲ್ಲಿ ಗಲಾಟೆ ನಡೆದಿದ್ದು, ಈ ವೇಳೆ ಕೋಪಗೊಂಡ ಅಮರೇಶ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಕಳೆದ ಶುಕ್ರವಾರ ಮಕ್ಕಳು ಕಾಲೇಜಿಗೆ ಹೋದ ಮೇಲೆ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಶ್ರುತಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶ್ರುತಿ ತನ್ನ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಪೊಲೀಸರು ಆರೋಪಿ ಅಮರೇಶ್‌ನನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಶ್ರುತಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications