ಅಲ್ಲು ಅರ್ಜುನ್ ಯುದ್ಧ ಮಾಡಿಲ್ಲ, ಸಿನಿಮಾ ಬ್ಯುಸಿನೆಸ್ ಅಷ್ಟೇ: ಸಿ.ಎಂ ರೇವಂತ್ ರೆಡ್ಡಿ!
Allu Arjun: ನಟ ಅಲ್ಲು ಅರ್ಜುನ್ ಬಗ್ಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಇದೇ ಮೊದಲ ಬಾರಿ ಬಹಿರಂಗವಾಗಿ ಕಿಡಿಕಾರಿದ್ದಾರೆ. ಪುಷ್ಪ - 2 ಸಿನಿಮಾದ ಪ್ರೀಮಿಯರ್ ಶೋನಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಈ ವಿಚಾರವಾಗಿ ಅಲ್ಲು ಅರ್ಜುನ್ ಅವರ ಬಂಧನ ಸಹ ಆಗಿತ್ತು. ಬಂಧನದ ಬೆನ್ನಲ್ಲೇ ತೆಲಂಗಾಣದ ಸಿ.ಎಂ ರೇವಂತ್ ರೆಡ್ಡಿ ಅವರ ವಿರುದ್ಧ ಅಲ್ಲು ಅರ್ಜುನ್ ಫ್ಯಾನ್ಸ್ ಆಂಧ್ರಪ್ರದೇಶ ಹಾಗೂ ತೆಲಂಗಾಣ ಎರಡೂ ರಾಜ್ಯಗಳಲ್ಲೂ ತಮ್ಮ ಆಕ್ರೋಶ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಈ ವಿಚಾರವಾಗಿ ರೇವಂತ್ ರೆಡ್ಡಿ ರಿಯಾಕ್ಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರ ಬಗ್ಗೆ ರೇವಂತ್ ರೆಡ್ಡಿ ಹೇಳಿದ್ದೇನು ಎನ್ನುವ ಮಾಹಿತಿ ಇಲ್ಲಿದೆ.
ಅಲ್ಲು ಅರ್ಜುನ್ ಅವರ ಬಂಧನ ಈಚೆಗೆ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿತ್ತು. ತೆಲಂಗಾಣದ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ ಘಟನೆಯಿಂದ ಅಲ್ಲು ಅರ್ಜುನ್‌ಗೆ ಭಾರೀ ಸಂಕಷ್ಟ ಎದುರಾಗಿದೆ. ಈ ವಿಚಾರ ದೇಶದಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ಬಹಿರಂಗವಾಗಿಯೇ ತೆಲಂಗಾಣ ಸಿ.ಎಂ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಮತ್ತೆ ಭಾರೀ ವೈರಲ್ ಆಗಿದ್ದು, ಸಿ. ಎಂ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

ಮಹಿಳೆ ಮೃತಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲ್ಲು ಅರ್ಜುನ್ ಮೇಲೆ ಕೇಸ್ ದಾಖಲಾಗಿದೆ. ಅಲ್ಲದೆ ಮಧ್ಯಂತರ ಜಾಮೀನಿನ ಮೇಲೆ ಅಲ್ಲು ಅರ್ಜುನ್ ಅವರು ಹೊರಗಿದ್ದಾರೆ. ಜನ ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಿರುವ ರೀತಿಯ ಬಗ್ಗೆ ಸಿ.ಎಂ ರೇವಂತ್ ರೆಡ್ಡಿ ಅವರು ಗರಂ ಆಗಿದ್ದಾರೆ. ರೇವಂತ್ ರೆಡ್ಡಿ ಅವರು, ಆಜ್ ತಕ್ ಅಜೆಂಡಾ ಎನ್ನುವ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಅಲ್ಲು ಅರ್ಜುನ್ ಅವರು ಯಾವುದೋ ಯುದ್ಧ ಗೆದ್ದು ಬಂದಿಲ್ಲ. ಸಿನಿಮಾ ಎನ್ನುವುದು ಒಂದು ಉದ್ಯಮ. ಅಲ್ಲು ಅರ್ಜುನ್ ಅವರು ಸಿನಿಮಾ ಮಾಡಿ ಅದರಿಂದ ದುಡ್ಡು ಮಾಡಿಕೊಳ್ಳುತ್ತಿದ್ದಾರಷ್ಟೇ ಇದೊಂದು ಪಕ್ಕಾ ಉದ್ಯಮ. ಎಲ್ಲರೂ ಅಲ್ಲು ಅರ್ಜುನ್ ಬಂಧನದ ಬಗ್ಗೆ ಮಾತನಾಡ್ತಿದ್ದೀರಿ. ನೀವು ಯಾರಾದರೂ ದುರ್ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಬಗ್ಗೆ ವಿಚಾರ ಮಾಡಿದ್ದೀರಾ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು, ಆ ಮೃತ ಮಹಿಳೆಯ ಬಾಲ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಳೆ ಅವನು ಚೇತರಿಸಿಕೊಂಡ ಮೇಲೆ ಅಮ್ಮ ಇಲ್ಲ ಎನ್ನುವುದು ಗೊತ್ತಾದರೆ ಆ ಹುಡುಗನ ಪರಿಸ್ಥಿತಿ ಏನು ಅಂತ ಪ್ರಶ್ನೆ ಮಾಡಿದ್ದಾರೆ.

ಒಂದು ಪ್ರಾಣ ಹೋಗಿರುವ ಬಗ್ಗೆ ಯಾರಿಗೂ ಮರುಕ ಎನ್ನುವುದು ಇಲ್ಲವೇ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಆ ಹುಡುಗ ಕೋಮಾದಿಂದ ಹೊರಗೆ ಬಂದರೂ ಅವನ ಮುಂದಿನ ಜೀವನ ಹೇಗೆ ಇರಲಿದೆ ಎನ್ನುವ ಬಗ್ಗೆ ಯಾರಾದರೂ ಯೋಚನೆ ಮಾಡಿದ್ದೀರಾ ಅಂತಲೂ ಕೇಳಿದ್ದಾರೆ.
ಹಲವರು ರೇವಂತ್ ರೆಡ್ಡಿ ಅವರ ಮಾತುಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರ ಫ್ಯಾನ್ಸ್ ಇದಕ್ಕೂ ತಮ್ಮ ಕೋಪವನ್ನು ತೋರಿಸಿದ್ದಾರೆ. ಹಾಗಾದರೆ ರಾಜ್ಯದಲ್ಲಿ ತಪ್ಪು ಮಾಡಿದವರೆಲ್ಲರನ್ನೂ ತೆಲಂಗಾಣ ಪೊಲೀಸರು ಇದೇ ರೀತಿ ಸರಿಯಾದ ಕ್ರಮ ಅನುಸರಿಸುತ್ತಿದ್ದಾರೆಯೇ ಅಂತಲೂ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications