ಮುಂದಿನ ದಿನಗಳಲ್ಲಿ ಪತ್ರಿಕೆಗಳ ಸುದ್ದಿ ಹೀಗಿರಬಹುದಾ?
ಬೆಳಗ್ಗೆದ್ದು ಹಲ್ಲುಜ್ಜುವ ಮೊದಲು ಫೇಸ್‌ಬುಕ್ ಆನ್ ಮಾಡಿ 'ಶುಭೋದಯ' ಎಂದು ಟೈಪಿಸುವುದರಿಂದ ಹಿಡಿದು ರಾತ್ರಿ ಮಲಗುವ ಮುನ್ನ 'ಗುಡ್ ನೈಟ್, ಸ್ವೀಟ್ ಡ್ರೀಮ್ಸ್' ಎಂದು ಬರೆದು ಮುಸುಕು ಹೊದ್ದುಕೊಳ್ಳದಿದ್ದರೆ ಅನೇಕ ಜಾಲತಾಣದ ಜಾಣರಿಗೆ ತಿಂದಿದ್ದು ಕರಗುವುದಿಲ್ಲ, ರಾತ್ರಿ ನಿದ್ದೆ ಹತ್ತುವುದಿಲ್ಲ.
ಸಾಮಾಜಿಕ ಜಾಲತಾಣಗಳು ಈ ಪರಿ ಅನೇಕರನ್ನು ಆವರಿಸಿಕೊಂಡಿವೆ. ಇದು ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಫೇಸ್ ಬುಕ್ಕಿನಲ್ಲೇ ಮದುವೆಗಳಾಗಿವೆ, ಫೇಸ್ ಬುಕ್ಕಿನಲ್ಲಿ ವಿಚ್ಛೇದನಗೊಂಡು ಬದುಕು ಮೂರಾಬಟ್ಟೆಯಾಗಿವೆ. ಇಲ್ಲಿ ಸ್ನೇಹಿತರೂ ಸಿಗುತ್ತಾರೆ ವೈರಿಗಳೂ ಎಡತಾಕುತ್ತಾರೆ.
ಒಂದು ರೀತಿ ಇದು ವಿಪರೀತಮಟ್ಟಿಗೆ ಹೋಗಿದೆ ಎಂದರೂ ತಪ್ಪಾಗಲಾರದು. ಕೆಲ ವಿಪರೀತ ಆತ್ಮರತಿ ಬೆಳೆಸಿಕೊಂಡವರು ನಾಲ್ಕು ಲೈನಿನ ಕವನ ಬರೆದು ನೂರಾಯೆಂಟು ಸ್ನೇಹಿತರಿಂದ ಲೈಕಿಸಿಕೊಳ್ಳದಿದ್ದರೆ ಬದುಕು ನಿರರ್ಥಕ ಎನ್ನುವಷ್ಟರ ಮಟ್ಟಿಗೆ ಅಡಿಕ್ಟ್ ಆಗಿದ್ದಾರೆ. ಇನ್ನು ಹಲವಾರು ಜನರು ಬರವಣಿಗೆಯ ಕಲೆಯನ್ನು ರೂಢಿಸಿಕೊಂಡಿರುವುದೂ ಇಲ್ಲೆಯೆ.
ಇದು ಹೀಗೇ ಮುಂದುವರಿದರೆ ಮುಂದೆ ಏನಾಗುತ್ತದೋ ಬಲ್ಲವರು ಯಾರು? ಈಗಂತೂ ಮಕ್ಕಳಿಗೆ ಕೂಡ ಫೇಸ್ ಬುಕ್ಕಿನಲ್ಲಿ ಪೋಸ್ಟ್ ಮಾಡುವುದೇ ಹೇಗೆ, ಟ್ಯಾಗ್ ಮಾಡುವುದು ಹೇಗೆ, ಚಿತ್ರ ಕಳಿಸುವುದು ಹೇಗೆ ಎಂಬುದನ್ನು ಹೇಳಿಕೊಡುವ ಅಗತ್ಯ ಇಲ್ಲ. ಅಂಥ ಪರಿಸ್ಥಿತಿ ಉದ್ಭವವಾದರೆ ಮುಂದೊಂದು ದಿನ ಪತ್ರಿಕೆಗಳು ಹೇಗೆ ಸುದ್ದಿ ನೀಡಬಹುದು ಎಂದು ತಮಾಷೆಯಾಗಿ ಬರೆದಿದ್ದಾರೆ ಚಾಮರಾಜನಗರದ ಉದಯೋನ್ಮುಖ ಬರಹಗಾರ ಗವಿ ಸ್ವಾಮಿ. ಓದಿ ಮಜಾ ಮಾಡಿ. [ಸಾಮಾಜಿಕ ಜಾಲತಾಣಕ್ಕೆ ಸಿದ್ದು]

* ಟ್ಯಾಗ್ ಮಾಡಿ ತಲೆಮರೆಸಿಕೊಂಡಿದ್ದವ ತಿರುಚಿನಾಪಳ್ಳಿಯಲ್ಲಿ ಸೆರೆ.
* ಭಾವೀ ಪತ್ನಿ ಕ್ಯಾಂಡಿ ಕ್ರಷ್ ಆಹ್ವಾನ ಕಳಿಸಿದ್ದಕ್ಕೆ ರೊಚ್ಚಿಗೆದ್ದು ಮದುವೆಯನ್ನೇ ರದ್ದುಗೊಳಿಸಿದ ಭೂಪ!
* ಫೇಸ್ಬುಕ್ ಕವಿತೆಗಳ ಮೇಲೆ ತೆರಿಗೆ ಹಾಕುವ ನಿರ್ಧಾರ ಅಮಾನವೀಯ : ಫೇಸ್ಬುಕ್ ಜ್ಞಾನಪೀಠ ಪುರಸ್ಕೃತ ಕವಿ ಮುಖಪುಟಪ್ಪ ಖಂಡನೆ.
* ಮ್ಯಾರಥಾನ್ ಕವಿಗಳ ಮೇಲೆ ತೆರಿಗೆ ಹಾಕುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಸಂತ್ರಸ್ತ ವಾಚಕರ ದಳ (ಸಂವಾದ) ಮುಖಂಡ ನಿತ್ರಾಣೇಶ್ ಉವಾಚ.
* ನಕಲಿ ಖಾತೆಗಳನ್ನು ಸಕ್ರಮಗೊಳಿಸಿ, ಇಲ್ಲವೇ ಕಂಬಿ ಎಣಿಸಲು ಸಿದ್ಧರಾಗಿ : ಫೇಸ್ಬುಕ್ ಸಚಿವ ಅಕ್ರಮಪ್ರಭು ಎಚ್ಚರಿಕೆ.
* ವಿವಿಧ ವೃತ್ತಗಳಲ್ಲಿ ಲೈಕ್ ಭಿಕ್ಷೆ ಬೇಡುತ್ತಿದ್ದವರ ಸಾಮೂಹಿಕ ಬಂಧನ, ಫೇಸ್ಬುಕ್ ಮಾನಸಿಕ ಆಸ್ಪತ್ರೆಗೆ ರವಾನೆ.
* ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜೂಕರಬರ್ಗನನ್ನು ಘೇರಾವ್ ಮಾಡಿದ ಫೇಸ್ಬುಕ್ ಮಹಿಳಾ ಸದಸ್ಯರು : ಪ್ರೊಫೈಲ್ ಫೋಟೊ ಬದಲಾವಣೆ ತಿಂಗಳಿಗೆ ಒಂದು ಸರತಿಗೆ ಸೀಮಿತಗೊಳಿಸಿದ್ದಕ್ಕೆ ತೀವ್ರ ಆಕ್ಷೇಪ.
* ಸ್ಕ್ರೀನ್ ನಲ್ಲಿ ಗಳಿಸಿದ ಮಾನ ಸ್ಕ್ರೀನ್ ಶಾಟ್ ಮೂಲಕ ಹೋಯ್ತು! : ಮಹಿಳೆಗೆ ಅಸಭ್ಯ ಸಂದೇಶ ಕಳಿಸಿ ಸಿಕ್ಕಿಬಿದ್ದ ನಟ.
* ಸ್ಕ್ರೀನ್ ಶಾಟುಗಳನ್ನು ಮಾರಿ ಬಿಗ್ ಶಾಟ್ ಆದ ಭೂಪ! : ಪರಸ್ಪರ ವೈರಿಗಳಿಗೆ ಅನುಕೂಲಕರ ಸ್ಕ್ರೀನ್ ಶಾಟ್ ಮಾರುವುದನ್ನೇ ಕಸುಬಸಾಗಿಸಿಕೊಂಡವನೀಗ ಕೋಟ್ಯಾಧಿಪತಿ!
* ಬ್ಲಾಕ್ ತೆಗೆಸಲು ಗಣ್ಯವ್ಯಕ್ತಿಗಳಿಂದ ಶಿಫಾರಸು ಪತ್ರದ ಜೊತೆಗೆ ಬ್ಲಾಕ್ ಆದವರ ಮುಚ್ಚಳಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಫೇಸ್ಬುಕ್ ಶಿಸ್ತು ಆಯೋಗ.
* ಪೋಕ್ ಮಾಡಿದ ಪೋಕರಿಗೆ ಪೋರಿಯಿಂದ ಧರ್ಮದೇಟು : ಪೋಲಿಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸದಿದ್ದರೆ ಕೊಂದೇಬಿಡುತ್ತಿದ್ದಳೆಂದು ಪುಕಾರು.
* ಫುಟ್ಪಾತಿನಲ್ಲಿ ನಿಂತು ಚಾಟ್ ಮಾಡುತ್ತಿದ್ದವನಿಗೆ ಬಿದ್ವು ನೂರೊಂದು ಚಾಟಿಯೇಟು! : ಟ್ರಾಫಿಕ್ ಪೋಲಿಸರ ಕ್ರಮವನ್ನು ಶ್ಲಾಘಿಸಿದ ಪಾದಚಾರಿಗಳು.












Click it and Unblock the Notifications