ರೋಸ್ ಮಾರ್ಟ್ ಕಂಪನಿ ಡಾಟಾ ಕದ್ದು ನಕಲಿ ಆಧಾರ್, ಪಾನ್ ತಯಾರಿಸಿ ಮಾರಾಟ !
ಬೆಂಗಳೂರು, ಜನವರಿ 04: ಸರ್ಕಾರಿ ಇಲಾಖೆಗಳ ದಾಖಲೆಗಳನ್ನು ಮುದ್ರಿಸುವ ರೋಸ್ ಮಾರ್ಟ್ ಕಂಪನಿಯ ಡಾಟಾ ಕದ್ದು ನಕಲಿ ಆಧಾರ್, ಪಾನ್ ಕಾರ್ಡ್, ಆರ್.ಸಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಜಾಲದಲ್ಲಿ ತೊಡಗಿದ್ದ ಹತ್ತು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಸುಮಾರು 60 ಸಾವಿರ ನಕಲಿ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ರಾಜಸ್ತಾನ ಮೂಲದ ಕಮಲೇಶ್ ಕುಮಾರ್, ಪುಟ್ಟೇನಹಳ್ಳೀ ನಿವಾಸಿ ಲೋಕೇಶ್, ಶಾಂತಿನಗರದ ಸುದರ್ಶನ್ , ನಿರ್ಮಲ್ ಕುಮಾರ್, ಕೆಂಗೇರಿಯ ದರ್ಶನ್, ಹಾಸನದ ಶ್ರೀಧರ್, ಕೆಂಚನಪುರ ನಿವಾಸಿ ಚಂದ್ರಪ್ಪ, ಮಾರೇನಹಳ್ಳಿ ನಿವಾಸಿ ಅಭಿಲಾಶ್, ತೇಜಶ್, ಶ್ರೀಧರ್ ದೆಶಪಾಂಡೆ ಬಂಧಿತ ಆರೋಪಿಗಳು. ಸರ್ಕಾರದ ಚಿನ್ಹೆಗಳನ್ನು ಬಳಸಿ ನಕಲಿ ದಾಖೆಗಳನ್ನು ಸೃಷ್ಟಿಸಿ ಆರೋಪಿಗಳು ಅಗತ್ಯ ಇರುವರಿಗೆ ಮಾರಾಟ ಮಾಡುತ್ತಿದ್ದರು. ಸಾವಿರಾರು ನಕಲಿ ಕಾರ್ಡ್ ತಯಾರಿಸಿರುವುದು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಕನಕಪುರ ರಸ್ತೆಯ ಹೆರಿಟೇಜ್ ಅಪಾರ್ಟ್ ಮೆಂಟ್ ನಲ್ಲಿ ತಂಗಿದ್ದ ಕಮಲೇಶ್ ಕುಮಾರ್ ಎಂಬುವನ ಮನೆ ಮೇಲೆ ದಾಳಿ ನಡೆಸಿದಾಗ, ನಕಲಿ ದಾಖಲೆಗಳು ಪತ್ತೆಯಾಗಿವೆ.

ಹೆಸರು ವಿಳಾಸ ನಮೂದಿಸದ ಸರ್ಕಾರಿ ಚಿನ್ಹೆ ಇರುವ 9,000 ಆಧಾರ್ ಕಾರ್ಡ್
ಹೆಸರು ವಿಳಾಸ ನಮೂದಿಸದ ಸರ್ಕಾರಿ ಚಿನ್ಹೆ ಇರುವ 9000 ಪಾನ್ ಕಾರ್ಡ್,
ಹೆಸರು ವಿಳಾಸವಿಲ್ಲದ 12,200 ಅರ್ ಸಿ ಕಾರ್ಡ್,
ಹೆಸರು ವಿಳಾಸ ಇರುವ 250 ವಾಹನ ನೋಂದಣಿ ಪ್ರಮಾಣ ಪತ್ರ ( ಆರ್.ಸಿ ಕಾರ್ಡ್ )
ಹೆಸರು ವಿಳಾಸ ಇರುವ 6240 ನಕಲಿ ಚುನಾವಣ ಗುರುತಿನ ಚೀಟಿ
ಸರ್ಕಾರಿ ಚಿನ್ಹೆ ಬಳಿಸಿರುವ 28000 ಸಾವಿರ ನಕಲಿ ಗುರುತಿನ ಚೀಟಿಯ ದಾಖಲೆ
ಇಷ್ಟು ದಾಖಲೆ ಜತೆಗೆ ಮೂರು ಲ್ಯಾಪ್ ಟಾಪ್, ಮೂರು ಕಂಪ್ಯೂಟರ್ ಪ್ರಿಂಟರ್ ಮತ್ತಿತರ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದಂಧೆಯ ಕಿಂಗ್ ಪಿನ್ ರಾಜಸ್ತಾನ ಮೂಲದ ಕಮಲೇಶ್ ಕುಮಾರ್ ನಕಲಿ ಧಾಖಲಾತಿಗಳನ್ನು ನೀಡುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ ಎಂಬುದು ಸಿಸಿಬಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ನಕಲಿ ದಾಖಲಾತಿ ಕೊಡುವ ಜಾಲವನ್ನು ವಿಸ್ತರಿಸಿರುವ ಸಂಗತಿ ಗೊತ್ತಾಗಿದೆ.

ಡಾಟಾ ಕದ್ದು ಮಾರಾಟ :
ಸರ್ಕಾರಿ ಇಲಾಖೆಗಳ ದಾಖಲೆಗಳನ್ನು ನೀಡುವ ಗುತ್ತಿಗೆ ಪಡೆದಿರುವ ರೋಸ್ ಮಾರ್ಟ್ ಕಂಪನಿಯಯಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಎಂಬಾತ ಕೆಲಸ ಬಿಟ್ಟಿದ್ದ. ಸರ್ಕಾರಿ ಗುರುತಿನ ಚೀಟಿ ಮುದ್ರಿಸುವ ರೋಸ್ ಮಾರ್ಟ್ ಕಂಪನಿಯ ಡಾಟಾ ಕದ್ದು ಲೋಕೇಶ್ ಮತ್ತು ಕಮಲೇಶ್ ಸೇರಿ ಪರ್ಯಾಯವಾಗಿ ಕಾರ್ಡ್ ಗಳನ್ನ ಮುದ್ರಿಸಿ ವಿತರಣೆ ಮಾಡುತ್ತಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇವರಿಂದ ಯಾವ ಕಂಪನಿಯವರು ಬೃಹತ್ ಪ್ರಮಾಣದಲ್ಲಿ ನಕಲಿ ಡಾಟಾ ತೆಗೆದುಕೊಳ್ಳುತ್ತಿದ್ದರು ಎಂಬ ಖಚಿತ ಮಾಹಿತಿ ಇನ್ನಷ್ಟೇ ಹೊರಗೆ ಬೀಳಬೇಕಿದೆ.

ಕದ್ದ ವಾಹನಗಳಿಗೆ ಆರ್‌ಸಿ :
ನಕಲಿ ದಾಖಲೆಗಳನ್ನು ಬಳಿಸಿ ಕದ್ದ ವಾಹನಗಳಿಗೆ ಅಸಲಿ ದಾಖಲೆಗಳನ್ನು ನೀಡುತ್ತಿದ್ದರು ಎಂಬುದು ಗೊತ್ತಾಗಿದೆ. ಕದ್ದ ವಾಹನಗಳಿಗೆ ಆರ್.ಸಿ ಮಾಡಿಕೊಟ್ಟಿರುವ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಆರ್.ಸಿ ಕಾರ್ಡ್ ಪಡೆಯಲು ಬೇಕಾದ ವಿಳಾಸ ಗುರುತಿನ ಚೀಟಿಗಳನ್ನು ನಕಲಿ ಮಾಡಿದ್ದರು ಎಂದು ಅಪರಾಧ ವಿಭಾಗದ ಡಿಸಿಪಿ ಕೆ.ಪಿ. ರವಿಕುಮಾರ್ ತಿಳಿಸಿದ್ದಾರೆ.

ಲೋನ್ ಗೆ ದಾಖಲೆ:
ಬ್ಯಾಂಕ್ ಗಳಿಗೆ ವಂಚಿಸಿ ಕೋಟ್ಯಂತರ ರೂಪಾಯಿ ಲೋನ್ ಪಡೆಯುವ ವ್ಯಕ್ತಿಗಳಿಗೆ ಅಗತ್ಯ ನಕಲಿ ದಾಖಲೆಗಳನ್ನು ನೀಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಲೋನ್ ಪಡೆಯಬೇಕಾದರೆ ಎಲ್ಲಾ ದಾಖಲೆಗಳು ಖಚಿತವಾಗಿರಬೇಕು. ಸಾಲ ಪಡೆದು ಕಟ್ಟದಿದ್ದರೆ ಜೀವನ ಪರ್ಯಂತ ಸಾಲ ನೀಡುವುದಿಲ್ಲ. ಹೀಗಾಗಿ ಇಂತಹವರನ್ನು ಟಾರ್ಗೆಟ್ ಮಾಡುತ್ತಿದ್ದ ಕಮಲೇಶ್ ಗ್ಯಾಂಗ್ ಕೋಟ್ಯಂತರ ರೂಪಾಯಿ ಸಾಲ ಪಡೆಯುವರಿಗೆ ಪಾನ್ ಕಾರ್ಡ್ ವೋಟರ್ ಐಡಿ, ಆಧಾರ ಕಾರ್ಡ್ ಎಲ್ಲವನ್ನು ನೀಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಸಾವಿರಾರು ರೂಪಾಯಿ ಹಣ ವಸೂಲಿಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಕಲಿ ದಾಖಲೆ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸಿಪಿ ಕೆ.ಪಿ. ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.