ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ನಾವು ಕಟ್ಟುವ ಮನೆಯ ದಿಕ್ಕು ಹಾಗೂ ಮುಖ್ಯ ದ್ವಾರದ ದಿಕ್ಕುಗಳು ವ್ಯಕ್ತಿಯ ರಾಶಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ವಾಸ್ತು ತಜ್ಞರ ಪ್ರಕಾರ ತಮ್ಮ ರಾಶಿಗೆ ಅನುಕೂಲಕರ ದಿಕ್ಕಿನ ಮನೆಯಲ್ಲಿ ವಾಸಿಸುವುದರಿಂದ ಆರ್ಥಿಕ ಅಭಿವೃದ್ಧಿ, ಉತ್ತಮ ಆರೋಗ್ಯ ಮತ್ತು ಮಾನಸಿಕ ಶಾಂತಿ ಲಭ್ಯವಾಗುತ್ತದೆ. ವ್ಯಕ್ತಿಯ ಜನ್ಮರಾಶಿ ಮತ್ತು ಮನೆ ದಿಕ್ಕಿನ ನಡುವೆ ಗಾಢ ಸಂಬಂಧವಿದೆ ಎಂದು ಹೇಳಲಾಗುತ್ತದೆ.
ಮೇಷ, ಸಿಂಹ, ಧನು ರಾಶಿ
ಈ ಮೂರು ರಾಶಿಯವರಿಗೆ ಪೂರ್ವ ದಿಕ್ಕಿನ ಮನೆ ಅತ್ಯಂತ ಶುಭಕರ. ಈ ದಿಕ್ಕು ಅವರಿಗೆ ಹೊಸ ಉತ್ಸಾಹ, ಕೀರ್ತಿ ಮತ್ತು ಗೌರವವನ್ನು ತರುತ್ತದೆ. ಪೂರ್ವಮುಖದ ಮನೆಯಲ್ಲಿ ವಾಸಿಸುವವರು ರಾಜಕೀಯ ಅಥವಾ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಗಳನ್ನು ಸಾಧಿಸುವ ಸಾಧ್ಯತೆ ಇರುತ್ತದೆ. ಸರ್ಕಾರ ಸಂಬಂಧಿತ ಕೆಲಸಗಳು ಸುಗಮವಾಗಿ ನಡೆಯಲು ಮತ್ತು ಸಮಾಜದಲ್ಲಿ ಗೌರವ ಹೆಚ್ಚಲು ಈ ದಿಕ್ಕು ತುಂಬಾ ಸಹಾಯಕವಾಗಿರುತ್ತದೆ.

ವೃಷಭ, ಕನ್ಯಾ, ಮಕರ ರಾಶಿ
ಸಾಮಾನ್ಯವಾಗಿ ದಕ್ಷಿಣ ದಿಕ್ಕು ಕೆಲವರಿಗೆ ಆಗುವುದಿಲ್ಲ ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ ಆದರೆ, ವಾಸ್ತು ಪ್ರಕಾರ ವೃಷಭ, ಕನ್ಯಾ ಮತ್ತು ಮಕರ ರಾಶಿಯವರಿಗೆ ದಕ್ಷಿಣ ದಿಕ್ಕು ಮಂಗಳಕರವಾಗಿದೆ. ಈ ದಿಕ್ಕಿನಲ್ಲಿ ಮನೆ ಇದ್ದರೆ ಆರ್ಥಿಕ ಸ್ಥಿತಿಯು ಸ್ಥಿರತೆಯಿಂದ ಇರುತ್ತದೆ. ವ್ಯವಹಾರಸ್ಥರು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರಿಗೆ ಈ ದಿಕ್ಕು ಹೆಚ್ಚು ಲಾಭಕಾರಿ. ಪೂರ್ವ ಅಥವಾ ದಕ್ಷಿಣ ದಿಕ್ಕು ಇವರಿಗೆ ಉತ್ತಮ ಫಲಿತಾಂಶ ನೀಡುತ್ತದೆ.
ಮಿಥುನ, ತುಲಾ, ಕುಂಭ ರಾಶಿ
ಈ ರಾಶಿಯವರಿಗೆ ಪಶ್ಚಿಮ ದಿಕ್ಕಿನ ಮನೆ ಉತ್ತಮ. ಪಶ್ಚಿಮಾಭಿಮುಖ ಮನೆಯಲ್ಲಿ ವಾಸಿಸುವುದರಿಂದ ಸಂತೋಷ, ತೃಪ್ತಿ ಮತ್ತು ಸಂತಾನ ಭಾಗ್ಯ ದೊರೆಯುತ್ತದೆ. ಸಾಮಾನ್ಯವಾಗಿ ಪಶ್ಚಿಮ ದಿಕ್ಕು ಗಂಭೀರವಾದ ದಿಕ್ಕು ಎಂದು ಪರಿಗಣಿಸಲಾಗುತ್ತದೆ, ಆದರೆ ಈ ರಾಶಿಯವರಿಗೆ ಇದು ಯಶಸ್ಸು ನೀಡುತ್ತದೆ. ಬುದ್ಧಿವಂತಿಕೆ ಮತ್ತು ಸಾಮಾಜಿಕ ಗುರುತಿನ ವೃದ್ಧಿಗೆ ಈ ದಿಕ್ಕು ಸಹಕಾರಿ.
ಕರ್ಕಾಟಕ, ವೃಶ್ಚಿಕ, ಮೀನ ರಾಶಿ
ಈ ರಾಶಿಯವರಿಗೆ ಉತ್ತರ ದಿಕ್ಕು ಅತ್ಯಂತ ಶುಭಕರ. ಉತ್ತರ ದಿಕ್ಕು ಕುಬೇರನ (ಸಂಪತ್ತಿನ ದೇವರು) ಸ್ಥಾನವೆಂದು ಪರಿಗಣಿಸಲಾಗುತ್ತದೆ. ಉತ್ತರಾಭಿಮುಖ ಮನೆಯಲ್ಲಿ ವಾಸಿಸುವುದರಿಂದ ಆರ್ಥಿಕ ಕೊರತೆ ಎದುರಾಗುವುದಿಲ್ಲ. ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಬುದ್ಧಿವಂತಿಕೆಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ದಿಕ್ಕು ಉತ್ತಮ ವೃತ್ತಿ ಬೆಳವಣಿಗೆಗೆ ಸಹಾಯಕ.
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಪ್ರಕಾರ ನಿಮ್ಮ ರಾಶಿಗೆ ಅನುಗುಣವಾದ ದಿಕ್ಕಿನ ಮನೆಯನ್ನು ಆಯ್ಕೆ ಮಾಡುವುದರಿಂದ ಜೀವನದಲ್ಲಿ ಮಹತ್ವದ ಬದಲಾವಣೆ ಆಗಬಹುದು. ಸರಿಯಾದ ದಿಕ್ಕಿನ ಮನೆ ನಿಮ್ಮ ಆರ್ಥಿಕ ಸ್ಥಿರತೆ, ಆರೋಗ್ಯ, ಮಾನಸಿಕ ಶಾಂತಿ ಮತ್ತು ವೃತ್ತಿ ಬೆಳವಣಿಗೆಯಲ್ಲಿ ಸಹಕಾರಿ ಆಗುತ್ತದೆ. ಆದ್ದರಿಂದ ಮನೆ ಖರೀದಿ ಅಥವಾ ನಿರ್ಮಾಣ ಮಾಡುವ ಮೊದಲು ರಾಶಿ ಪ್ರಕಾರದ ದಿಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಸಣ್ಣ ಸಣ್ಣ ನಿರ್ಧಾರಳೇ ಭವಿಷ್ಯದಲ್ಲಿ ದೊಡ್ಡ ಫಲಿತಾಂಶಗಳನ್ನು ನೀಡಬಹುದು ಎಂಬುದನ್ನು ಮರೆಯಬೇಡಿ.












Click it and Unblock the Notifications