ಬಿಡದಿ ಎಐ ಸಿಟಿ ಪ್ರಾಜೇಕ್ಟ್: "ಡಿ.ಕೆ ಶಿವಕುಮಾರ್ ಜೈಲಿಗೆ ಹೋಗುವ ದಿನಗಳು ದೂರವಿಲ್ಲ"
ಬೆಂಗಳೂರು,ಸೆಪ್ಟೆಂಬರ್ 29: ನನ್ನ ಕುಟುಂಬವನ್ನು ಮುಗಿಸಲು ಡಿಕೆ.ಶಿವಕುಮಾರ್ ನಡೆಸಿದ ಪಿತೂರಿ ಎಲ್ಲರಿಗೂ ತಿಳಿದೇ ಇದೆ. ಆದರೆ, ರೈತರು ಮತ್ತು ದೇವರು ನಮ್ಮೊಂದಿಗಿದ್ದು ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಹೋಬಳಿಯ 2000 ಎಕರೆಗೂ ಹೆಚ್ಚು ಜಾಗದಲ್ಲಿ ದೇಶದ ಮೊದಲ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧರಿತ ವಿಶ್ವದರ್ಜೆಯ ಎ.ಐ ನಗರ (ಎ.ಐ ಸಿಟಿ) ತಲೆ ಎತ್ತಲಿದೆ. ಎಐ ನಗರಕ್ಕೆ ಇದೀಗ ತೀವ್ರ ವಿರೋಧ ಕೇಳಿ ಬಂದಿದ್ದು, ಜೆಡಿಎಸ್ ರಾಜ್ಯ ಘಟಕ ಇದೀಗ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಟೌನ್ ಶಿಪ್ ವಿರೋಧಿಸಿ ಬಿಡದಿ ಭಾಗದ ರೈತರು ನಡೆಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ನವದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಡಿ ಕೆ ಶಿವಕುಮಾರ್ ವಿರುದ್ದ ಗುಡುಗಿದ್ದಾರೆ.

ಬಿಡದಿ ಟೌನ್ ಶಿಪ್ ದೇವೇಗೌಡರ ಪುತ್ರನ ಕೂಸು ಎಂದು ಸುಳ್ಳು ಪ್ರಚಾರ ನಡೆಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಬಿಡದಿ ಟೌನ್ʼಶಿಪ್ ಗಾಗಿ ರೈತರ ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು. ಬಡವರು, ರೈತರ ಭೂಮಿಯನ್ನು ಲೂಟಿ ಹೊಡೆಯುತ್ತಿರುವ ವ್ಯಕ್ತಿ ನನ್ನ ಬಗ್ಗೆ ಲಘವಾಗಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಒಬ್ಬ ರೈತನಾಗಿ ಬಿಡದಿಯಲ್ಲಿ ಜೀವನ ಕಟ್ಟಿಕೊಂಡಿದ್ದೇನೆ. ಆತನಂತೆ ಕೊಳ್ಳೆ ಹೊಡೆದ ಬಡವರ ಭೂಮಿಯಲ್ಲಿ ಶಾಲೆ, ಕಾಲೇಜು, ಮುಗಿಲೆತ್ತರದ ಕಟ್ಟಡಗಳನ್ನು ಸೇರಿ ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡಿಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಬಿಳ್ಳೆಕೆಂಪನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎಂಬ ವ್ಯಕ್ತಿ ಕರ್ನಾಟಕ ಹಣಕಾಸು ನಿಗಮ (KFC) ದಿಂದ ಸಾಲ ಪಡೆದು ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿ ಹೋಟೆಲ್ ಮಾಡಿದ್ದರು. ಆ ಜಾಗವನ್ನು ದಬ್ಬಾಳಿಕೆಯಿಂದ ಖಾಲಿ ಮಾಡಿಸಿ, ಪುನಾ ಕಡಿಮೆ ಬೆಲೆಗೆ ಅದೇ ಜಾಗವನ್ನು ಖರೀದಿ ಮಾಡಿಸಿ ಅಲ್ಲೇ ಶಾಲಾ ಕಟ್ಟಡ ಕಟ್ಟಿಕೊಂಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದರು.
ಇನ್ನೊಬ್ಬರು ರಾಮಸ್ವಾಮಿ ಅಂತ ಇದ್ದರು. ಅವರು ಭಾರತೀಯ ಸೇನೆಯಲ್ಲಿ ರಾಷ್ಟ್ರಸೇವೆ ಮಾಡಿ ಬಂದಿದ್ದರು. ಅವರು ತಮ್ಮ ಕಷ್ಟದ ಹಣದಿಂದ ಒಂದಿಷ್ಟು ಜಮೀನು ಖರೀದಿಸಿ ಬದುಕು ಕಟ್ಟಿಕೊಂಡಿದ್ದರು. ಆ ಭೂಮಿಯ ಮೇಲೆ ಡಿಕೆಶಿ ಕಾಕದೃಷ್ಟಿ ಬಿದ್ದಿತು. ಆ ಜಮೀನು ಬಿಟ್ಟುಕೊಡಿ ಎಂದು ಅವರಿಗೆ ಧಮ್ಕಿ ಹಾಕಿದ್ದರು. ಅವರು ಬಿಟ್ಟು ಕೊಡಲಿಲ್ಲ. ಕೊನೆಗೆ ಆ ಸೈನಿಕನ ಮಗಳನ್ನೇ ಕಿಡ್ನಾಪ್ ಮಾಡಿ ಆ ಜಮೀನನ್ನು ಬರೆಸಿಕೊಂಡಿದ್ದಾರೆ. ಇಂತಹ ನೀಚ ಕೆಲಸ ನಾವು ಮಾಡಿದ್ದೇವೆಯೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಬೆಂಗಳೂರು ಸುತ್ತಮುತ್ತ ನೈಸ್ ರಸ್ತೆ ಇದೆ. ಹೊಸಕೆರೆಹಳ್ಳಿ ಸುತ್ತಮುತ್ತ ಸಾರ್ವಜನಿಕರಿಂದ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನೂ ಡಿಕೆ ಶಿವಕುಮಾರ್ ಕಬಳಿಸಿದ್ದಾರೆ. ಜತೆಗೆ, ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಇದೇ ಶಿವಕುಮಾರ್ ಸಚಿವರಾಗಿದ್ದರು. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ಮಾಡುತ್ತೇವೆ ಭಾರೀ ಪ್ರಮಾಣದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡರು. ಅದಕ್ಕೊಂದು ಪ್ರಾಧಿಕಾರ ಮಾಡಿ ಅದಕ್ಕೆ ಇವರೇ ಅಧ್ಯಕ್ಷರಾದರು. ಇಪ್ಪತ್ತು ವರ್ಷದ ಮೇಲೆ ಆಯಿತು. ರಸ್ತೆ ನಿರ್ಮಾಣ ಮಾಡಿದರಾ? ಇಲ್ಲ.. ಆ ಭೂಮಿಯನ್ನು ನುಂಗಲು ಹೊರಟಿದ್ದಾರೆ. ಆದರೆ ಕೇವಲ ಎರಡು ಮೂರು ವರ್ಷದಲ್ಲಿ ಬೆಂಗಳೂರು-ಮೈಸೂರು ನೂತನ ಹೆದ್ದಾರಿ ನಿರ್ಮಾಣವಾಯಿತು. ನಾನು ಸಿಎಂ ಆಗಿದ್ದಾಗ ಅತ್ಯಂತ ಕ್ಷಿಪ್ರಗತಿಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಯಿತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಡವರ ಭೂಮಿಗೆ ಕನ್ನ ಹಾಕುವ ಇಂಥ ವ್ಯಕ್ತಿಗಳು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರಿಗೆ ಹೋರಾಟದ ಮೂಲಕವೇ ಉತ್ತರ ಕೊಡುತ್ತೇವೆ. ಯಾರೂ ಹೆದರಬೇಕಿಲ್ಲ. ಟೌನ್ ಶಿಪ್ ಹೆಸರಿನಲ್ಲಿ ಆ ಭಾಗದ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಒಂದು ಇಂಚು ಜಮೀನನ್ನು ಬಿಟ್ಟುಕೊಡುವುದಿಲ್ಲ ಎಂದು ಎಂದು ರೈತರಿಗೆ ಧೈರ್ಯ ತುಂಬಿದರು ಕೇಂದ್ರ ಸಚಿವರು.
ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಾನೂ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಖುದ್ದಾಗಿ ನಾನೇ ಬಂದು ಹೋರಾಟದಲ್ಲಿ ಭಾಗವಹಿಸುತ್ತೇನೆ. ರೈತರಿಗಾಗಿ ನನ್ನ ಆರೋಗ್ಯದ ಹಂಗು ತೊರೆದು ಹೋರಾಡುತ್ತೇನೆ. ಯಾರು ಬಂದು ಸ್ವಾಧೀನ ಮಾಡಿಕೊಳ್ಳುತ್ತಾರೋ ನೋಡೋಣ ಎಂದು ಕುಮಾರಸ್ವಾಮಿ ಅವರು ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು.
ಈ ದೇಶದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ ರಾಜಕಾರಣಿ ಎಂದರೇ ಅದು ದೇವೇಗೌಡರು. ನಾನು ಎಂದೂ ಹೀಗೆ ಭೂಮಿಯನ್ನು ಕಿತ್ತುಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದು ಸುಳ್ಳು ಹೇಳಲಿಲ್ಲ. ನಾನು ಅಂದು ಯೋಜನೆಗಾಗಿ ಭೂಮಿ ಸ್ವಾಧೀನ ಮಾಡಿಕೊಂಡಿರಲಿಲ್ಲ. 40% ಭೂಮಿಯನ್ನು ರೈತರಿಗೇ ಉಳಿಸಿಕೊಳ್ಳಲು ಅವಕಾಶ ನೀಡದ್ದೆ. ನನ್ನ ಜೀವನದ ಕೊನೆಯವರೆಗೂ ರೈತರಿಗೆ ಅನ್ಯಾಯ ಮಾಡಲ್ಲ ಎಂದು ಅವರು ಹೇಳಿದರು
ಬಿಡದಿ ಟೌನ್ ಶಿಪ್ ನೆಪದಲ್ಲಿ ಜನರಿಗೆ ಸುಳ್ಳು ಅಂಕಿಅಂಶ ಹೇಳುತ್ತಿದ್ದಾರೆ. ಡಿಕೆಶಿ ಜತೆ ಅಧಿಕಾರಿಗಳು ಕುಮ್ಮಕ್ಕಾಗಿ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ. ೯,೦೦೦ ಎಕರೆಯಲ್ಲಿ ೩,೦೦೦-೪,೦೦೦ ಎಕರೆಯಷ್ಟು ಸರಕಾರಿ ಭೂಮಿ ಇದೆ ಎಂದು ಸುಳ್ಳು ಹೇಳಿದ್ದರು. ಆದರೆ ಅಸಲಿಗೆ ಅಲ್ಲಿರುವ ಸರಕಾರಿ ಭೂಮಿ 700 ಎಕರೆ ಮಾತ್ರ ಎಂದು ತೋರಿಸುತ್ತಿದ್ದಾರೆ. ಟೌನ್ ಶಿಪ್ ಹೆಸರಲ್ಲಿ ಭೂಮಿ ಲೂಟಿ ಹೊಡೆಯಲು ಹೊರಟಿದ್ದಾರೆ ಅವರು ಆರೋಪಿಸಿದರು.












Click it and Unblock the Notifications