ವಿಚಿತ್ರ ಘಟನೆ: ತಹಸೀಲ್ದಾರ್ ಲಂಚ ಕೇಳಿದ್ದಕ್ಕೆ ರೈತ ಮಾಡಿದ್ದೇನು ಗೊತ್ತಾ?
ಭೋಪಾಲ್, ಫೆ 25: ತಹಸೀಲ್ದಾರ್ ಕೇಳಿದ ಲಂಚವನ್ನು ಹಣದ ರೂಪದಲ್ಲಿ ಕೊಡಲಾಗದ ರೈತನೊಬ್ಬ ತನ್ನ ಎಮ್ಮೆಯನ್ನೇ ಲಂಚದ ರೂಪದಲ್ಲಿ ಕೊಟ್ಟ ವಿಚಿತ್ರ ಘಟನೆ ಟಿಕಾಂಗಢ್ ಜಿಲ್ಲೆಯಿಂದ ವರದಿಯಾಗಿದೆ.
ಜಿಲ್ಲೆಯ, ದೇವಪುರ ಎನ್ನುವ ಗ್ರಾಮದ ಐವತ್ತು ವರ್ಷದ ರೈತ ಲಕ್ಷ್ಮೀ ಯಾದವ್ ಎನ್ನುವವರು ಭೂವರ್ಗಾವಣೆ ಸಂಬಂಧದ ಕೆಲಸಕ್ಕಾಗಿ ಖರ್ಗಾಪುರದಲ್ಲಿರುವ ತಹಸೀಲ್ದಾರ್ ಕಚೇರಿಗೆ ಬಂದಿದ್ದರು.
ತನ್ನ ಸೊಸೆಯ ಹೆಸರಿನಲ್ಲಿ ಖರೀದಿ ಮಾಡಲಾಗಿದ್ದ ಜಮೀನನ್ನು ವರ್ಗಾವಣೆ ಮಾಡಲು ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ರೆಡಿಮಾಡಲು, ತಹಸೀಲ್ದಾರ್ 50 ಸಾವಿರ ರೂಪಾಯಿ ನೀಡಬೇಕೆಂದಿದ್ದರು.

ಐವತ್ತು ಸಾವಿರ ರೂಪಾಯಿಯನ್ನು ಹೇಗೋ ಹೊಂದಿಸಿ ರೈತ ಲಕ್ಷ್ಮೀ ಯಾದವ್ ನೀಡಿದ್ದರು. ಆದರೆ, ಇದಾದ ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಇನ್ನೂ ಐವತ್ತು ಸಾವಿರ ರೂಪಾಯಿ ನೀಡುವಂತೆ ಡಿಮಾಂಡ್ ಮಾಡಿದ್ದರು.
ಹೆಚ್ಚಿನ ಹಣ ಹೊಂದಿಸಲಾಗದೇ ರೈತ ಲಕ್ಷ್ಮೀ ಯಾದವ್, ತನ್ನ ಜೊತೆ ಕರೆದುಕೊಂಡು ಬಂದಿದ್ದ ಎಮ್ಮೆಯನ್ನು ಲಂಚದ ರೂಪದಲ್ಲಿ ನೀಡಿ, ಇಲಾಖೆಯ ಅಧಿಕಾರಿಗಳ ವಾಹನಕ್ಕೆ ಎಮ್ಮೆಯನ್ನು ಕಟ್ಟಿಬಂದ ಘಟನೆ ನಡೆದಿದೆ.
ಟಿಕಾಂಗಢ್ ಜಿಲ್ಲೆಯ ಕಲೆಕ್ಟರ್ ಸೌರವ್ ಕುಮಾರ್ ಸುಮನ್, ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿಯನ್ನು ನೀಡುವಂತೆ ಖರ್ಗಾಪುರ ತಹಸೀಲ್ದಾರ್ ಕಚೇರಿಗೆ ಸೂಚಿಸಿದ್ದಾರೆ.












Click it and Unblock the Notifications