ರೈತರಿಗೆ ದೀಪಾವಳಿ ಕೊಡುಗೆ: ಪಿಎಂ ಕಿಸಾನ್ ಯೋಜನೆಯ 12ನೇ ಕಂತು ಅ.17ಕ್ಕೆ ಜಮೆ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 16: ರೈತರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' (ಪಿಎಂ ಕಿಸಾನ್) ಯಡಿ ನೀಡಲಾಗುತ್ತಿರುವ 2,000 ರೂ ಹಣವನ್ನು ದೀಪಾವಳಿಗೆ ನೀಡುವುದಾಗಿ ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ದೀಪಾವಳಿಗೆ ಮುನ್ನ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ''ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಫಲಾನುಭವಿಗಳ ಖಾತೆಗೆ ಸೋಮವಾರ ಅಕ್ಟೋಬರ್ 17ರಂದು ಯೋಜನೆಯ 12ನೇ ಕಂತು ಜಮಾ ಆಗಲಿದೆ. ಸೋಮವಾರ ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನ ಸಮಾರಂಭ ನಡೆಯಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡು ಸಾವಿರ ರೂ. ಹಣವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ವರೆಗೆ ದೇಶದಲ್ಲಿ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ' ಫಲಾನುಭವಿ ರೈತರು ಒಟ್ಟು 11 ಕಂತು ಪಡೆದಿದ್ದಾರೆ. ಕಳೆದ ಮೇ 30ರಂದು ಯೋಜನೆಯ 11 ಕಂತಿನ ರೂ 2,000 ಅನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಅದಕ್ಕಾಗಿ ಒಟ್ಟು 10 ಕೋಟಿ ಹಣ ಕೇಂದ್ರ ಬಿಡುಗಡೆ ಮಾಡಿತ್ತು.
ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಯೋಜನೆಯ ಪ್ರಯೋಜನಗಳನ್ನು ರೈತರಿಗೆ ತಲುಪಿಸುತ್ತಿದೆ. ಈ ಬಾರಿಯ ಕಂತನ್ನು ಪಡೆಯಲು ಸೂಕ್ತ ಮಾಹಿತಿ, ಕೆವೈಸಿ ಮಾಡಿಕೊಳ್ಳುವಂತೆ ಈಗಾಗಲೇ ಕೇಂದ್ರವು ಸೂಚಿಸಿತ್ತು.

11ನೇ ಕಂತು ಮೇ 30ಕ್ಕೆ ಬಿಡುಗಡೆ ಆಗಿತ್ತು
ರೈತರಿಗೆ ವಿಜಯದಶಮಿಯಂದು 12ನೇ ಕಂತಿನ 2000ರೂ.ಹಾಕುವುದಾಗಿ ಭರವಸೆ ನೀಡಿತ್ತು. ಮೊದಲೇ ಹೇಳಿದಂತೆ 11ನೇ ಕಂತು ಮೇ 30ಕ್ಕೆ ನೀಡಿದ್ದು, ಅದಾದ ನಾಲ್ಕು ತಿಂಗಳಿಗೆ 12ನೇ ಕಂತು ಸೆಪ್ಟಂಬರ್ ನಲ್ಲಿ ಖಾತೆಗೆ ಜಮೆ ಆಗಬೇಕಿತ್ತು. ಆದರೆ ನಕಲಿ ದಾಖಲೆ ಸಲ್ಲಿಸಿ ಸರ್ಕಾರದ ಈ ಆರ್ಥಿಕ ಸಹಾಯದ ದುರ್ಲಾಭ ಪಡೆಯಲು ಹಲವು ಮುಂದಾಗಿರುವುದು ಕಂಡು ಬಂದಿತ್ತು.
ಈ ಕಾರಣಕ್ಕೆ ಕೇಂದ್ರ ಸರ್ಕಾರ ಪರಿಶೀಲಿಸಿ ವಿವಿಧ ರಾಜ್ಯಗಳ ಲಕ್ಷಾಂತರ ರೈತರನ್ನು ಅನರ್ಹರೆಂದು ಗುರುತಿಸಿತ್ತು. ಈ ಪ್ರಕ್ರಿಯೆಗೆ ತುಸು ಸಮಯ ಹಿಡಿದ ಪರಿಣಾಮ ನಿಗದಿತ ಅವಧಿಗೆ ಕಂತುಬಿಡುಗಡೆ ಮಾಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ದೀಪಾವಳಿಗೆ ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.

12ನೇ ಕಂತಿನ ಸ್ಥಿತಿಗತಿ ಪರಿಶೀಲಿಸುವುದು ಹೇಗೆ?
ರೈತರು ಮೊದಲು ತಾವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಗೆ ಹಾಲಿ ಕಂತಿಗೆ ಅರ್ಹರು ಹೌದೋ? ಇಲ್ಲವೋ ಎಂದು ಪರಿಶೀಲಿಸಬೇಕು. ಅದಕ್ಕಾಗಿ 'ಪಿಎಂ ಕಿಸಾನ್' (https://pmkisan.gov.in/) ವೆಬ್‌ಸೈಟ್‌ಗೆ ಭೇಟಿ ಕೊಡಿ. ಮುಖಪುಟದ 'ಫಾರ್ಮರ್ಸ್ ಕಾರ್ನರ್' ವಿಭಾಗದಲ್ಲಿ 'ಫಲಾನುಭವಿಗಳ ಪಟ್ಟಿ' ಇದ್ದು, ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರಾಜ್ಯಗಳು, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು. ನಂತರ ನಿಮ್ಮ ಮಾಹಿತಿ ಎಂಬ ಆಯ್ಕೆ ನೀಡಿ ವರದಿ (Get Report) ಮೇಲೆ ಕ್ಲಿಕ್ ಮಾಡಿದರೆ ಫಲಾನುಭವಿ ಪಟ್ಟಿಯಲ್ಲಿ ಹೆಸರು ಇದಿಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಇಲ್ಲಿ ಹೆಸರಿದ್ದರೆ ದೀಪಾವಳಿಗೆ ನಿಮ್ಮ ಖಾತೆಗೆ 12ನೇ ಕಂತಿನ ರೂ.2,000 ಪಾವತಿಯಾಗಲಿದೆ.

ಕಂತಿನ ಸದ್ಯದ ಸ್ಥಿತಿ ಪರಿಶೀಲಿಸಿ
ಅಲ್ಲದೇ ವೆಬ್‌ಸೈಟ್‌ನಲ್ಲಿ ರೈತರ ಕಾರ್ನರ್ ಕ್ಲಿಕ್ ಮಾಡಿ. ಈಗ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ. ಬಳಿಕ ನಿಮ್ಮ ಕಂತು ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಈ 'ಪಿಎಂ ಕಿಸಾನ್ ಯೋಜನೆ'ಯನ್ನು 2019ರಲ್ಲಿ ಆರಂಭಿಸಿದರು. ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿ ಯೋಗ್ಯ ಜಮೀನಿಗೆ ದೇಶದ ಎಲ್ಲ ಭೂಮಾಲೀಕ ರೈತ ಕುಟುಂಬಗಳನ್ನು ಆರ್ಥಿಕವಾಗಿ ಉತ್ತೇಜಿಸಲು ಉದ್ದೇಶದೊಂದಿಗೆ ಯೋಜನೆ ಜಾರಿ ಮಾಡಲಾಯಿತು.

ನಾಲ್ಕು ತಿಂಗಳಿಗೆ ಒಮ್ಮೆ 2000 ಜಮೆ
ಯೋಜನೆಯಡಿ ನಾಲ್ಕು ತಿಂಗಳಿಗೆ ಒಮ್ಮೆಯಂತೆ ವಾರ್ಷಿಕವಾಗಿ ರೂ.6000 ಹಣವನ್ನು ಮೂರು ಬಾರಿ ರೂ. 2000ನಂತೆ ನೇರವಾಗಿ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಒಂದನೇ ಕಂತು ಏಪ್ರಿಲ್-ಜುಲೈ ಅವಧಿಗೆ, ಎರಡನೇ ಕಂತು ಆಗಸ್ಟ್‌ನಿಂದ ನವೆಂಬರ್‌ವರೆಗೆ ಮತ್ತು ಮೂರನೇ ಕಂತು ಡಿಸೆಂಬರ್‌ನಿಂದ ಮಾರ್ಚ್ ಅವಧಿಗೆ ಬಿಡುಗಡೆ ಮಾಡುತ್ತಾ ಬರಲಾಗಿದೆ.












Click it and Unblock the Notifications