ಮಂಡ್ಯದ ಮಾಜಿ ಸಂಸದೆ ರಮ್ಯಾ , ಶಾಸಕಿಯಾಗೋಲ್ಲ ಬಿಡಿ!
ಮಂಡ್ಯದ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಸುದ್ದಿ ಈಗಾಗಲೇ ಎಲ್ಲರ ಕಿವಿ ತಲುಪಿದೆ. ಇನ್ನೊಂದೆಡೆ ರಮ್ಯಾ ಅವರು ದೆಹಲಿ ಸಹವಾಸ ಸಾಕು ಎಂದು ಯಡಿಯೂರಪ್ಪ ಅವರ ರೀತಿಯಲ್ಲಿ ವಿಧಾನಸಭೆ ಪ್ರವೇಶ ಬಯಸಿದ್ದಾರೆ ಎಂಬ ಸುದ್ದಿಯೂ ಹರಡುತ್ತಿದೆ.
ಅದರೆ, ದೆಹಲಿ ದರ್ಬಾರು ನೋಡಿ ಬಂದ ಫಾರಿನ್ ರಿಟರ್ನ್ ರಮ್ಯಾ ಅವರು ಮೇಲ್ಮನೆ, ಕೆಳಮನೆ ಪ್ರವೇಶ ಸಾಧ್ಯವಿಲ್ಲ ಎನ್ನುತ್ತದೆ ರಾಜಕೀಯ ಪಂಡಿತರ ಲೆಕ್ಕಾಚಾರ.
ಲೋಕಸಭಾ ಚುನಾವಣೆಯಲ್ಲಿ ಸೋಲುಕಂಡ ಮೇಲೆ ಅಧ್ಯಯನ, ಅನಧ್ಯಯನ, ವಿಹಾರ, ವಿಶ್ರಾಂತಿಗಾಗಿ ವಿದೇಶ(ಯಾವ ದೇಶ ಅವರಿಗೆ ಗೊತ್ತು) ಪ್ರವಾಸ ಮಾಡುವ ವೇಳೆಗೆ ಮಂಡ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಿದ್ದಂತೂ ನಿಜ. [ಮೇಲ್ಮನೆಯಲ್ಲಿ ರಮ್ಯಾ ರಂಗು!?]
ಜಿಲ್ಲಾ ಉಸ್ತುವಾರಿ ಕಮ್ ವಸತಿ ಸಚಿವ ಅಂಬರೀಷ್ ಅವರು ಮಂಡ್ಯ ಜನತೆಗೆ ದಿನ ನಿತ್ಯ ಬಾಡೂಟ ಹಾಕಿಸದಿದ್ದರೂ ಆಗಾಗ ಬಾಡಿದ ರಾಜಕೀಯ, ಹಳಸಿದ ಚಿತ್ರಾನ್ನಕ್ಕೆ ಫ್ರೆಶ್ ಒಗ್ಗರಣೆ ಹಾಕುತ್ತಾ ಸದಾ ಸುದ್ದಿಯಲ್ಲಿದ್ದರು.[ರಮ್ಯಾ ವಿರುದ್ಧ ಮಂಡ್ಯ ಕಾಂಗ್ರೆಸಿಗರ ದೂರು]
ಈ ಎಲ್ಲದರ ನಡುವೆ ಬೆಳಗಾವಿಗೆ ಮುಖಂಡರ ದಂಡು ತೆರಳಿ ಅಧಿವೇಶನ ಮಾಡುವ ಸಮಯಕ್ಕೆ ನಮ್ಮ ರೈತರು ಕೈಗೆ ಸಿಕ್ಕ ವಿಷ ಸೇವಿಸಿ ಪ್ರಾಣತ್ಯಾಗ ಮಾಡಿದ್ದರು. ರೈತರ 'ದಿಲ್ ಕಿ ಬಾತ್' ಸಿಎಂ ಸಿದ್ದು ಅವರಿಗಾಗಲಿ, ರೆಬಲ್ ಸ್ಟಾರ್ ಗಾಗಲಿ, ಲಕ್ಕಿ ಸ್ಟಾರ್ ಗಾಗಲಿ ಕೇಳಲೇ ಇಲ್ಲ. ಇನ್ನೂ ಕೇಳಿಸಿಲ್ಲ.

ಯಾವ ನಾಮನಿರ್ದೇಶನ ಅವಕಾಶವೂ ಇಲ್ಲ
ಸರಿ ಸುಮಾರು 11 ಜನ ನಾಮನಿರ್ದೇಶಿತ ಸದಸ್ಯರು ಸದನದಲ್ಲಿದ್ದಾರೆ. ಬಿಜೆಪಿಯ ಪಿ.ವಿ.ಕೃಷ್ಣಭಟ್, ಜಗ್ಗೇಶ್ ಫೆಬ್ರವರಿ 3, 2016 ರಂದು ನಿವೃತ್ತರಾಗಲಿದ್ದಾರೆ. ಲೆಹರ್ಸಿಂಗ್ ಅವಧಿ ಮುಂದಿನ ವರ್ಷ ಮೇ ಅಂತ್ಯದವರೆಗೆ ಇದೆ. ಸದ್ಯಕ್ಕೆ ಯಾವ ನಾಮನಿರ್ದೇಶನ ಅವಕಾಶವೂ ಇಲ್ಲ. ವಿಧಾನಸಭೆಯಿಂದ ಚುನಾಯಿತರಾಗಲು ಜೂನ್ ಮಧ್ಯಭಾಗದವರೆಗೆ ಕಾಯಬೇಕು. ಹೀಗಾಗಿ ರಮ್ಯಾ ಸುಮ್ಮನೆ ಮಂಡ್ಯ ಜನತೆ ಮುಂದೆ ತಲೆಬಾಗಿದರೆ ರಾಜಕೀಯ ಬದುಕು ಮುಂದುವರೆಯಲಿದೆ.

ಕಾರ್ಮೋಡದಲ್ಲಿ ಬೆಳ್ಳಿರೇಖೆ ಮೂಡಿದ ಘಟನೆ
ಇತ್ತೀಚೆಗೆ ಸೋಮನಹಳ್ಳಿಯ ಕೃಷ್ಣ ಅವರು ಹಳ್ಳಿಗರ ಕಣ್ಣೀರೊರೆಸುವ ಕಾರ್ಯಕ್ರಮದಿಂದ ಅಲ್ಪಸ್ವಲ್ಪ ಕಾರ್ಮೋಡದಲ್ಲಿ ಬೆಳ್ಳಿರೇಖೆ ಮೂಡಿದ ಘಟನೆ ಜರುಗಿತ್ತು. ಅದರೆ, ಎಲ್ಲವೂ ರಾಜಕೀಯ ದಾಳವಾಯಿತೇ ಹೊರತೂ ಮಹಾಜನತೆಗೆ ಉಪಕಾರವಾಗುವ ಕಾರ್ಯ ಎಲ್ಲೂ ಕಂಡು ಬರಲಿಲ್ಲ.

ಕಾವೇರಿ ತುಂಬಿ ಹರಿದರೆ ಬೆಳೆಗಳ ಗತಿ ಏನು?
ಅತ್ತ ಡಬ್ಬಲ್ ಆಷಾಢದಲ್ಲಿ ಮಹಾತಾಯಿ ಕಾವೇರಿ ಕೂಡಾ ಉಕ್ಕಿ ಹರಿಯಲು ಆರಂಭಿಸಿದ್ದಾಳೆ. ಕೀಟ, ಸಾಲ, ಬಡ್ಡಿ, ಹೀಗೆ ಅನೇಕ ಸಮಸ್ಯೆಯಿಂದ ಬೆಳೆ ಹಾನಿಗೆ ಒಳಗಾಗಿರುವ ಕಬ್ಬು ಸೇರಿದಂತೆ ವಿವಿಧ ಬೆಳೆಗಾರರ ಸಮಸ್ಯೆಗಳ ಮಹಾಪೂರವನ್ನು ಕಾವೇರಮ್ಮ ಕಾಪಾಡಮ್ಮ ಕಾಪಾಡುವಳೆ.

ರಮ್ಯಾ ವಿರುದ್ಧ ಮಂಡ್ಯ ಕಾಂಗ್ರೆಸಿಗರ ದೂರು
ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಮ್ಯಾ ಅವರು ಸಾಂತ್ವನ ಹೇಳಲು ಆಗಮಿಸಿಲ್ಲ. ಇಂತಹ ನಾಯಕರು ನಮಗೆ ಬೇಡ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಡ್ಯ ಕಾಂಗ್ರೆಸಿಗರ ದೂರು ನೀಡಿದ್ದಾರೆ. [ವಿವರ ಇಲ್ಲಿದೆ]

ರಮ್ಯಾ ಮೇಡಂ ಎಂ.ಎಲ್.ಸಿ
ರಮ್ಯಾ ಅವರು ಎಂಎಲ್ಸಿ ಆಗುತ್ತಾರೆ ಎಂಬ ವಿಷಯ ಯಾರು ಹಬ್ಬಿಸಿದರೋ ಗೊತ್ತಿಲ್ಲ. ಮಂಡ್ಯದಲ್ಲಿ ಹೋಗಿ ಕೇಳಿದರೆ ಎದುರು ಬಣದತ್ತ ಬೊಟ್ಟು ತೋರಿಸುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಬಯಸಿದರೆ ರಮ್ಯಾ ಅವರಿಗೆ ಉಚಿತವಾದ ಯಾವುದಾದರೂ ಹುದ್ದೆ ನೀಡಬಹುದು. ರೈತರ ಪರ ರಮ್ಯಾ ಮಾಡಿದ ಭಾಷಣ ಇನ್ನೂ ಕೇಳುವ ಭಕ್ತರಿಗೆ ರಮ್ಯಾ ಅವರನ್ನು ಉನ್ನತ ಸ್ಥಾನದಲ್ಲಿ ನೋಡುವ ಆಸೆ, ಸೋ ಗಾಸಿಪ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿರುತ್ತದೆ.











Click it and Unblock the Notifications