ಬಿರುಗಾಳಿ ಸಹಿತ ಮಳೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಕೃಷಿ ಭೂಮಿಗಳು ಜಲಾವೃತ, ಅನ್ನದಾತ ಕಂಗಾಲು,
ಚಿತ್ರದುರ್ಗ, ಮೇ, 22: ಕಳೆದ ಎರಡು ದಿನಗಳಿಂದ ರಾಜ್ಯದ ಹಲವೆಡೆ ಬಿರುಗಾಳಿ ಮಳೆಗೆ ಗಿಡಮರಗಳು ಧರೆಗುರುಳಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಕೃಷಿ ಭೂಮಿಗಳು ಜಲಾವೃತವಾಗಿವೆ. ಅಷ್ಟೇ ಅಲ್ಲದೆ ಮತ್ತೊಂದೆಡೆ ಓರ್ವ ಮಹಿಳೆ ಸಿಡಿಲಿಗೆ ಬಲಿಯಾದ ಘಟನೆಯೂ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಿಕ್ಕಗೊಂಡನಹಳ್ಳಿ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಮ್ಮ (47) ವರ್ಷ ಸಿಡಿಲಿಗೆ ಬಲಿಯಾಗಿದ್ದಾರೆ. ಬಿರುಗಾಳಿ ಸಮೇತ ಮಳೆ ಸುರಿದ ಹಿನ್ನೆಲೆಯಲ್ಲಿ ಜಮೀನಿನಲ್ಲಿದ್ದ ಹುಣಸೆ ಮರದ ಅಡಿಯಲ್ಲಿ ನಿಂತುಕೊಂಡಾಗ ಸಿಡಿಲು ಬಡಿದು ಭಾಗ್ಯಮ್ಮ ಸಾವನ್ನಪ್ಪಿದ್ದಾರೆ.

ಹಿರಿಯೂರಿನಲ್ಲಿ ಬಾಳೆನಾಶ
ಇನ್ನು ಹಿರಿಯೂರು ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಡರಾತ್ರಿ ಬಿರುಗಾಳಿ ಮಳೆಯ ಆರ್ಭಟಕ್ಕೆ ಅಪಾರ ಗಿಡಮರಗಳು ಧರೆಗುರುಳಿವೆ. ಗುಡುಗು, ಸಿಡಿಲು, ಮಿಂಚು ಸಹಿತ ಮಳೆಯಾದ ಹಿನ್ನೆಲೆ ಬಾಳೆ, ತೆಂಗು, ಅಡಿಕೆ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ತಾಲೂಕಿನ ಮ್ಯಾಕ್ಲೂರಹಳ್ಳಿ ವ್ಯಾಪ್ತಿಯ ಹೊಸಹಟ್ಟಿ ಗ್ರಾಮದ ರಂಗಸ್ವಾಮಿ ಅವರಿಗೆ ಸೇರಿದ ಫಸಲಿಗೆ ಬಂದಿದ್ದ ಬಾಳೆ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಅಲ್ಲದೆ ನಂದಿಹಳ್ಳಿ, ಬಬ್ಬೂರು, ಹೇಮದಳ ಸೇರಿದಂತೆ ಮತ್ತಿತರರ ಭಾಗಗಳಲ್ಲಿ ರೈತರ ಬೆಳೆಗಳಿಗೆ ನಾಶವಾಗಿದೆ. ಇನ್ನು ಹಿರಿಯೂರು ನಗರದ ವಿವಿಧೆಡೆ ಬೃಹತ್ ಮರಗಳು ನೆಲಕ್ಕುರುಳಿವೆ. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹಾಗೆಯೆ ತಾಲೂಕಿನ ಬಬ್ಬೂರಿನಲ್ಲಿ 36.0 ಮಿ.ಮೀ. ದಾಖಲೆಯ ಮಳೆ ಸುರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ರೈತರ ಕೃಷಿ ಚಟುವಟಿಕೆಗಳು ಗರಿಗೆದರಲಿವೆ.












Click it and Unblock the Notifications