ಕೊಪ್ಪಳ: ಹಣ್ಣು ಮತ್ತು ಜೇನು ಮೇಳದಲ್ಲಿ ದಾಖಲೆಯ ವಹಿವಾಟು, ಸಂತಸದಲ್ಲಿ ರೈತರು
ಕೊಪ್ಪಳ, ಮಾರ್ಚ್ 06: ತೋಟಗಾರಿಕಾ ಇಲಾಖೆ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ 8ನೇ ವರ್ಷದ ಹಣ್ಣು ಮತ್ತು ಜೇನು ಮೇಳವನ್ನು ಕೊಪ್ಪಳದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಹಿಂದಿನ ವರ್ಷಗಳ ಮೇಳಕ್ಕಿಂತಲೂ ಹೆಚ್ಚಿನ ಜನರು ಈ ವರ್ಷ ಆಗಮಿಸಿದ್ದರು. ಐದು ದಿನಗಳ ಮೇಳದಲ್ಲಿ ದಾಖಲೆಯ ವಹಿವಾಟು ನಡೆದಿದ್ದು, ರೈತರು ಸಂತಸಗೊಂಡಿದ್ದಾರೆ.
ಫೆಬ್ರವರಿ 23 ರಿಂದ 27ರ ತನಕ 5 ದಿನಗಳ ಕಾಲ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಛೇರಿ ಆವರಣದಲ್ಲಿ ಹಣ್ಣು-ಜೇನು ಮೇಳ-2025 ಆಯೋಜಿಸಲಾಗಿತ್ತು. 25ಕ್ಕೂ ಹೆಚ್ಚು ಮಳಿಗೆಗಳನ್ನು ರೈತರಿಗೆ ಉಚಿತವಾಗಿ ನೀಡಲಾಗಿತ್ತು. ವಿವಿಧ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಒದಗಿಸಲಾಗಿತ್ತು.

ಐದು ದಿನಗಳ ಮೇಳದಲ್ಲಿ ಜಗತ್ತಿನ ದುಬಾರಿ ಬೆಲೆಯ ದ್ರಾಕ್ಷಿ ಜಪಾನಿನ 'ರೂಬಿ ರೋಮನ್' ಎಲ್ಲರ ಆಕರ್ಷಣೆಯಾಗಿತ್ತು. ಈ ದ್ರಾಕ್ಷಿ ತಳಿಯನ್ನು ನೋಡಲು ಹೊರ ಜಿಲ್ಲೆ ಹಾಗೂ ಸ್ಥಳೀಯ ಜನರು ತಂಡೋಪ ತಂಡವಾಗಿ ಆಗಮಿಸಿದ್ದರು. ಬೆಲೆ ಕೇಳಿ ಆಶ್ಚರ್ಯ ವ್ಯಕ್ತಪಡಿಸಿದರು. ರೈತರು ತಾವು ಸಹ ಈ ಬೆಳೆಯನ್ನು ಬೆಳೆಯುವ ಬಗ್ಗೆ ಆಶಯ ವ್ಯಕ್ತಪಡಿಸಿದರು.
ಮೇಳದಲ್ಲಿ ದಾಖಲೆಯ ವಹಿವಾಟು: ಹಣ್ಣು ಮತ್ತು ಜೇನು ಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ 10ಕ್ಕೂ ಹೆಚ್ಚಿನ ವಿವಿಧ ಹಣ್ಣುಗಳಾದ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ, ಅಂಜೂರ, ಪೇರಲ, ಬಾಳೆ, ಡ್ರ್ಯಾಗನ್, ಸಪೋಟಾ, ಪಪ್ಪಾಯ ಹಾಗೂ ಜೇನು ಹಾಗೂ ಜೇನಿನ ವಿವಿಧ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು.
ವಿವಿಧ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಸಹ ಜಿಲ್ಲೆಯಲ್ಲಿ ರೈತರಿಂದ ಹಣ್ಣುಗಳನ್ನು ಖರೀದಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಮೇಳದಿಂದ ಕಲ್ಪಿಸಲಾಗಿತ್ತು. ರೈತರ ವಿವಿಧ ಉತ್ಪನ್ನಗಳನ್ನು ಕೂಡಾ ಮಾರಾಟ ಮಾಡಲು ಅವಕಾಶ ಕೊಡಲಾಗಿತ್ತು.
ಈ ಮೇಳದಲ್ಲಿ ದ್ರಾಕ್ಷಿಯ ವಿವಿಧ ತಳಿಗಳಲ್ಲದೇ ಕಲ್ಲಂಗಡಿ ಹಣ್ಣಿನ ಹಳದಿ ಮತ್ತು ಗುಲಾಬಿ ತಿರುಳು ಹೊಂದಿದ ತಳಿಗಳು, ಪಪ್ಪಾಯ ಹಣ್ಣಿನ ಮೂರು ತರಹದ ತಳಿಗಳು ಮತ್ತು ಪೇರಲ ಹಾಗೂ ದಾಳಿಂಬೆ ಹಣ್ಣಿನ ತಳಿಗಳನ್ನು ಗ್ರಾಹಕರಿಗೆ ಪೂರೈಸುವ ಮೂಲಕ ಹಣ್ಣುಗಳ ವಿವಿಧ ತಳಿಗಳ ಸ್ವಾದವನ್ನು ಸವಿಯಲು ಅವಕಾಶ ನೀಡಲಾಗಿತ್ತು.
ಮೇಳಕ್ಕೆ 30,000ಕ್ಕೂ ಹೆಚ್ಚು ಗ್ರಾಹಕರು ಭೇಟಿ ನೀಡಿದರು ಹಾಗೂ ರೂ. 40 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆಯಿತು. ಈ ಮೇಳದಲ್ಲಿ ಗ್ರಾಹಕರು ಹಳದಿ ತಿರುಳಿನ ಕಲ್ಲಂಗಡಿ ಹಣ್ಣನ್ನು ಅತೀ ಹೆಚ್ಚು ಖರೀದಿಸಿದರು. ಕೆಂಪು ತಿರುಳಿನ ಕಲ್ಲಂಗಡಿ ಸಹ ಒಟ್ಟು 30 ಟನ್‌ಗೂ ಹೆಚ್ಚು ಮಾರಾಟವಾಯಿತು. 20 ಟನ್‌ಗೂ ಹೆಚ್ಚಿನ ವಿವಿಧ ಜಾತಿಯ ಕರಬೂಜ ಹಣ್ಣುಗಳು ಮಾರಾಟವಾದವು, 6 ಟನ್‌ಗೂ ಹೆಚ್ಚು ದಾಳಿಂಬೆ, 12 ಟನ್‌ಗೂ ಹೆಚ್ಚು ದ್ರಾಕ್ಷಿ ಹಾಗೂ ಅಂಜೂರ, ಪೇರಲ, ಚಿಕ್ಕು, ಬಾಳೆ ಹಾಗೂ ವಿವಿಧ ಹಣ್ಣುಗಳು ಮಾರಾಟವಾಗಿ ಹೊಸ ದಾಖಲೆ ನಿರ್ಮಾಣವಾಯಿತು.
ಈ ಬಾರಿಯ ಮೇಳದಲ್ಲಿ ಹಳದಿ ಮತ್ತು ಕೆಂಪು ತಿರುಳಿನ ಕಲ್ಲಂಗಡಿಯನ್ನು ಅಲ್ಲಿಯೇ ಗ್ರಾಹಕರಿಗೆ ಕತ್ತರಿಸಿ ಪೂರೈಸುವ ವ್ಯವಸ್ಥೆ ಸಹ ಮಾಡಲಾಗಿತ್ತು. 7 ಟನ್‌ಗೂ ಹೆಚ್ಚಿನ ಕಲ್ಲಂಗಡಿ ಹಣ್ಣುಗಳನ್ನು ಗ್ರಾಹಕರು ಸವಿದರು. ಮೇಳದಲ್ಲಿ 2.50 ಟನ್‌ಗೂ ಹೆಚ್ಚಿನ ಜೇನು ಹಾಗೂ ಜೇನಿನ ವಿವಿಧ ಉತ್ಪನ್ನಗಳಾದ ಜೇನಿನ ಮೇಣದಿಂದ ತಯಾರಿಸಿದ ಬಾಮ್, ಲಿಪ್‌ಸ್ಟಿಕ್, ಸೋಪ್ ಹಾಗೂ ವಿವಿಧ ತರಹದ ಶುಂಠಿ ಮತ್ತು ಲಿಂಬೆ ಮಿಶ್ರಿತ ಜೇನುಗಳು ಮಾರಾಟವಾದವು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಈ ಮೇಳದಲ್ಲಿ ಹಣ್ಣುಗಳನ್ನು ಉತ್ತಮ ರೀತಿಯಲ್ಲಿ ಪ್ಯಾಕ್ ಮಾಡಿ ಸರಬರಾಜು ಮಾಡಲು ಪುನೆಟ್ ಬಾಕ್ಸ್ ಮತ್ತು ರಟ್ಟಿನ ಬಾಕ್ಸ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಮುಖಾಂತರ ಮೌಲ್ಯವರ್ಧನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ರೈತರು ಪುನೆಟ್ ಬಾಕ್ಸ್‌ನಲ್ಲಿ ದ್ರಾಕ್ಷಿ ಹಣ್ಣುಗಳನ್ನು ಪ್ಯಾಕ್ ಮಾಡಿ ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಿದರು. ರೈತರಿಗೆ ನೇರ ಮಾರುಕಟ್ಟೆ ಮತ್ತು ಬಾಕ್ಸ್ ಪ್ಯಾಕಿಂಗ್‌ಗಳಲ್ಲಿ ಹಣ್ಣುಗಳನ್ನು ಪೂರೈಸುವ ಮೂಲಕ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿಕೊಟ್ಟಂತಾಗಿದೆ. ಇದರಿಂದಾಗಿ ರೈತರು ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿ ಮಾರುಕಟ್ಟೆ ಕಂಡುಕೊಳ್ಳುವ ಕೌಶಲ್ಯವನ್ನು ತಿಳಿಸಿಕೊಟ್ಟಂತಾಯಿತು.
10ಕ್ಕೂ ಹೆಚ್ಚು ದ್ರಾಕ್ಷಿಯ ವಿವಿಧ ತಳಿಗಳು, ಕಲ್ಲಂಗಡಿ ಹಣ್ಣಿನ 4 ವಿವಿಧ ತಳಿಗಳು (ಕೆಂಪು, ಹಳದಿ, ಬಿಳಿ, ಕಿತ್ತಳೆ ಬಣ್ಣ ಇತ್ಯಾದಿ), ಪೇರಲ ಹಣ್ಣಿನ 5ಕ್ಕೂ ಹೆಚ್ಚು ತಳಿಗಳು ಮತ್ತು ದಾಳಿಂಬೆಯ 2 ತಳಿಗಳು ಪ್ರದರ್ಶನದಲ್ಲಿ ಕಂಡುಬಂದವು. ಪಪ್ಪಾಯ, ಕಮಲಾಪೂರದ ಕೆಂಪು ಬಾಳೆ, ನೇಂದ್ರನ್ ಬಾಳೆ ಹಾಗೂ ಬೆಣ್ಣೆ ಹಣ್ಣು, ಹಸಿರು ಸೇಬು ಹಾಗೂ ವಿವಿಧ ಸಂಸ್ಕರಿಸಿದ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.












Click it and Unblock the Notifications