ಕರ್ನಾಟಕ; ಸರ್ಕಾರದ ನಿರ್ಲಕ್ಷ್ಯ, ರಸಗೊಬ್ಬರ ಅಭಾವ?
ಬೆಂಗಳೂರು ಜೂ.20: ಜೂನ್ ಮತ್ತು ಜುಲೈ ಮುಂಗಾರು ಹಂಗಾಮಿನ ಕಾಲವಾಗಿದ್ದರಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ ವ್ಯವಸಾಯಕ್ಕೆ ಅಗತ್ಯವಾದ ರಸಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫವಾಗಿದ್ದು, ರಾಜ್ಯದಲ್ಲಿ ಗೊಬ್ಬರ ಕೊರತೆ ಉಂಟಾಗಿದೆ.
ಈ ಮೊದಲು ಅಗತ್ಯದಷ್ಟು ರಸಗೊಬ್ಬರ ಸಂಗ್ರಹವಿದೆ ಎಂದು ಕೃಷಿ ಸಚಿವರು ಹೇಳಿದ್ದರು. ಆದರೆ ಈಗ ಕೃತಕ ಅಭಾವ ಸೃಷ್ಟಿಸಿರುವ ಅನುಮಾನ ಉಂಟಾಗಿದೆ. ರೈತರು ವದಂತಿಗಳಿಗೆ ಕಿವಿಕೊಟ್ಟು ಆತಂಕಪಡಬಾರದು ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹಿಂದೆ ಹೇಳಿದ್ದರು. ಹೀಗಿದ್ದರು ಇದೀಗ ಬಿತ್ತನೆಗೆ ಅಗತ್ಯದಷ್ಟು ರಸಗೊಬ್ಬರ ಸಿಗುತ್ತಿಲ್ಲ ಎಂಬ ದೂರು ರಾಜ್ಯದ ರೈತರಿಂದ ಕೇಳಿಬಂದಿದೆ.
ಬೇಡಿಕೆ ಅಧಿಕ: ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಉತ್ತಮ ಮಳೆ ಆಗಿದೆ. ಕೆರೆ-ಕುಂಟೆಗಳು ತುಂಬಿ ಹರಿದಿವೆ. ಈ ವರ್ಷವು ಸಹ ಅಧಿಕ ಮಳೆ ನಿರೀಕ್ಷೆ ಇದ್ದು ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ ಮುಂತಾದೆಡೆ ಕೆರೆಗಳು ತುಂಬಿ ಅಂತರ್ಜಲ ಹೆಚ್ಚುತ್ತಿದೆ. ಈ ಎಲ್ಲ ಕಾರಣದಿಂದ ಯುವಕರು ಸೇರಿದಂತೆ ಜನ ಸಮೂಹ ಕೃಷಿಯತ್ತ ಮುಖ ಮಾಡಿದೆ. ಹೀಗಾಗಿ ರಸಗೊಬ್ಬರ ಬಿತ್ತನೆ ಬೀಜಗಳಿಗೆ ಅಧಿಕ ಬೇಡಿಕೆ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೇ ಸರ್ಕಾರಗಳು ರಸಗೊಬ್ಬರ ಮತ್ತು ಕೀಟನಾಶಕ ಮೇಲೆ ಶೇ. 20ರಷ್ಟು ಬೆಲೆ ಏರಿಕೆ ಮಾಡಿದೆ. ಹೀಗಿದ್ದರು ಸಹ ಬಿತ್ತನೆ ಕಾಲವಾದ್ದರಿಂದ ಎಲ್ಲೆಡೆ ರಸಗೊಬ್ಬರ ಬೇಡಿಕೆ ಸೃಷ್ಟಿಯಾಗಿದೆ. ಸರ್ಕಾರ ಕೇವಲ ಬೆಲೆ ಏರಿಕೆಗೆ ಮಾತ್ರ ಸಿಮೀತವಾಗಿದ್ದು, ಅಗತ್ಯದಷ್ಟು ರಸಗೊಬ್ಬರ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ.
ವರ್ಷದಿಂದ ವರ್ಷಕ್ಕೆ ಸರ್ಕಾರ ಗೊಬ್ಬರವನ್ನು ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಂಡು ಪೂರೈಸಬೇಕು. ಆದರೆ ಅದು ಆಗುತ್ತಿಲ್ಲ ಎಂದು ಚಿಕ್ಕಬಳ್ಳಾಪುರದ ಪ್ರಗತಿಪರ ರೈತ ಮತ್ತು ಕೃಷಿಯಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಎಚ್. ಕೆ. ಸುರೇಶ್ ಮಾಹಿತಿ ನೀಡಿದ್ದಾರೆ.
ಅಧಿಕ ಬೆಲೆಗೆ ಮಾರಾಟ; ಗೊಬ್ಬರ ಕೊರತೆಗೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದು ಮೈಸೂರು ಭಾಗದಲ್ಲಿ ಕೆಲವು ರೈತ ಸಂಘಟನೆಗಳು ಈ ಹಿಂದೆ ಪ್ರತಿಭಟಿಸಿದ್ದವು. ಇದೀಗ ಕೃತಕ ಅಭಾವ ಸೃಷ್ಟಿಸಲೆಂದೆ ವ್ಯಾಪಾರಿಗಳು ಅಕ್ರಮ ದಾಸ್ತಾನು ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ರಾಜ್ಯದ ಕಲಬುರಗಿ, ರಾಯಚೂರು, ಕೊಡಗು ಭಾಗದಲ್ಲಿ ಒಂದು ಚೀಲ ಗೊಬ್ಬರಕ್ಕೆ ಬೆಲೆ ಮೇಲೆ 250-300ರೂ. ಅಧಿಕ ಪಡೆಯುತ್ತಿರುವುದು ಗೊತ್ತಾಗಿದೆ. ಇದೆಲ್ಲವು ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುತ್ತಿದೆ. ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ರೈತರು ಆಗ್ರಹಿಸಿದ್ದಾರೆ. ಇತ್ತ ಕೃಷಿ ಇಲಾಖೆ ಅಧಿಕಾಯೊಬ್ಬರು, ಗೊಬ್ಬರ ಕೊರತೆ ಇಲ್ಲ ಲಾಜಿಸ್ಟಿಕ್ ಸಮಸ್ಯೆಯಿಂದ ಹೀಗಾಗಿದೆ. ಅಗತ್ಯದಷ್ಟು ಗೊಬ್ಬರ ರೈತರಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪೂರ್ವ ಸಿದ್ಧತೆ ಇಲ್ಲ; ಅಧಿಕ ಬೆಲೆಗೆ ಮಾರಾಟ ಮಾಡುವ ಕಾಳಸಂತೆಯಲ್ಲಿ ಗೊಬ್ಬರಕ್ಕೆ ಕೊರತೆ ಉಂಟಾಗಿಲ್ಲ. ರೈತರು ಖರೀದಿಸುವ ಕೇಂದ್ರಗಳಲ್ಲಿ ಮಾತ್ರ ಅಭಾವ ಸೃಷ್ಟಿಯಾಗಿದೆ. ಕೃಷಿ ಚಟುವಟಿಕೆಗಳು ಆರಂಭವಾಗುವ ಮುನ್ನವೇ ಸರ್ಕಾರ ಗೊಬ್ಬರ ದಾಸ್ತಾನು, ಪೂರೈಕೆ ಮೇಲೆ ನಿಗಾ ವಹಿಸಿ, ರೈತರಿಗೆ ಪೂರೈಸಬೇಕಿತ್ತು. ಈ ಬಗ್ಗೆ ಪೂರ್ವ ಸಿದ್ಧತೆ ಇಲ್ಲದ ಪರಿಣಾಮ ಗೊಬ್ಬರ ಕೊರತೆ ಸಮಸ್ಯೆ ಉಂಟಾಗಿದೆ ಎಂದು ವಿಪಕ್ಷ ನಾಯಕರು ಹಾಗೂ ರೈತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.











Click it and Unblock the Notifications