Bengaluru Industrial Hub; ಸರ್ಜಾಪುರ ಕೈಗಾರಿಕಾ ಹಬ್‌ಗೆ ರೈತರ ಭೂಮಿ, ಸಿಎಂಗೆ ಪತ್ರ
ಬೆಂಗಳೂರು, ಡಿಸೆಂಬರ್ 23: ಕರ್ನಾಟಕ ಸರ್ಕಾರ ಬೆಂಗಳೂರು ನಗರ ಜಿಲ್ಲೆಯ ಸರ್ಜಾಪುರದಲ್ಲಿ ಕೈಗಾರಿಕಾ ಹಬ್ ಸ್ಥಾಪನೆಗೆ ಮುಂದಾಗಿದೆ. ಸುಮಾರು 647.69 ಎಕರೆ ಪ್ರದೇಶದಲ್ಲಿ ಈ ಕೈಗಾರಿಕಾ ಪಾರ್ಕ್ ಅನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ನಿರ್ಮಾಣ ಮಾಡಲಾಗುತ್ತದೆ. ಆದರೆ ಈ ಹಬ್‌ಗೆ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆಯಲಾಗಿದೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ. ಎನ್. ಮಂಜುನಾಥ್ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 'ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಅಲ್ಲಿನ ಸ್ಥಳೀಯ ರೈತರ ಆಶಯಗಳಿಗೆ ವಿರುದ್ಧವಾಗಿ ಕೆಐಎಡಿಬಿ ವತಿಯಿಂದ ಕೈಗಾರಿಕಾ ಹಬ್ ನಿರ್ಮಿಸುವ ಸಲುವಾಗಿ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ' ಎಂದು ಹೇಳಿದ್ದಾರೆ.

'ಇದನ್ನು ವಿರೋಧಿಸಿ ಈಗಾಗಲೇ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಹೋರಾಟ ನಡೆಸುತ್ತಿದೆ. ಈ ಪ್ರದೇಶವು ಈಗಾಗಲೇ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ಸರ್ಕಾರದಿಂದ ನಿರ್ಮಾಣಗೊಂಡಿರುವ ಪ್ರತಿಷ್ಠಿತ ಬಡಾವಣೆಗಳು ಹಾಗೂ ಸಾಕಷ್ಟು ಕೆರೆಗಳನ್ನು ಹೊಂದಿದೆ. ಇದಲ್ಲದೇ ಈಗಾಗಲೇ ಸರ್ಕಾರದಿಂದ ಈ ಭಾಗದಲ್ಲಿ ಸರ್ಕಾರದಿಂದ ಅಭಿವೃದ್ಧಿಪಡಿಸಲಾಗಿರುವ 4 ಪ್ರತಿಷ್ಠಿತ ಕೈಗಾರಿಕಾ ಪ್ರದೇಶಗಳಿಂದಾಗಿ ಪರಿಸರದ ಮೇಲೆ ಆಗಿರುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರದ ಗಮನದಲ್ಲಿದೆ ಎಂದು ಭಾವಿಸುತ್ತೇನೆ. ಕೈಗಾರೀಕರಣದಿಂದಾಗಿ ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳು ನಮ್ಮ ಕಣ್ಮುಂದಿದೆ' ಎಂದು ಸಂಸದರು ತಿಳಿಸಿದ್ದಾರೆ.
'ಈ ಎಲ್ಲವನ್ನೂ ಗಮನಿಸಿ ಸರ್ಕಾರ ಪರಿಸರ ಮತ್ತು ಅಲ್ಲಿನ ರೈತರ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಯಾವುದೇ ಭೂಸ್ವಾಧೀನಕ್ಕೆ ಅನುವು ಮಾಡಿಕೊಡದೆ ಈ ಪ್ರದೇಶವನ್ನು ಹಸಿರು ವಲಯವೆಂದು ಘೋಷಿಸಿ ಸದರಿ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳನ್ನು ಅಥವಾ ಕೈಗಾರಿಕೆಗಳನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ವಿನಂತಿಸಿಕೊಳ್ಳುತ್ತೇನೆ' ಎಂದು ಸಂಸದರು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸಂಸದರ ಪತ್ರದ ವಿವರ: ಸಂಸದ ಡಾ. ಸಿ. ಎನ್. ಮಂಜುನಾಥ್ ಅವರ ಪತ್ರ ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿಗೆ ಸೇರಿದ ಗ್ರಾಮಗಳಲ್ಲಿನ ರೈತರ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದವರು ಹೊಸದಾಗಿ ಕೈಗಾರಿಕಾ ಹಬ್ ನಿರ್ಮಾಣ ಮಾಡುವ ಸಲುವಾಗಿ ಕೈಗೊಂಡಿರವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವ ಬಗ್ಗೆ ಎಂಬ ವಿಷಯನ್ನು ಒಳಗೊಂಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿಗೆ ಸೇರಿದ ಗ್ರಾಮಗಳಾದ ಹಾರೋಹಳ್ಳಿ, ಚೊಕ್ಕಸಂದ್ರ, ಕೊಮ್ಮಸಂದ್ರ, ದೊಮ್ಮಸಂದ್ರ, ಚಿಕ್ಕತಿಮ್ಮಸಂದ್ರ, ಕಾಡು ಅಗ್ರಹಾರ, ಯಮರ, ಸುಮನಹಳ್ಳಿ, ಸೂಳ್ಳಪುರ, ಮುತ್ತಾನಲ್ಲೂರು ಹಾಗೂ ಅಮಾನಿಕರೆ, ಬಿಕ್ಕನಹಳ್ಳಿ, ಹಂದೇನಹಳ್ಳಿ, ಬಿ. ಹೊಸಹಳ್ಳಿ, ಅಡಿಗರ ಕಲ್ಲಹಳ್ಳಿ ಮತ್ತು ಮೇಡಹಳ್ಳಿ ಗ್ರಾಮಗಳಲ್ಲಿನ ಫಲವತ್ತಾದ ಕೃಷಿ ಜಮೀನುಗಳನ್ನು ರೈತರ ಆಶಯಗಳ ವಿರುದ್ಧವಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದವರು ಹೊಸದಾಗಿ ಕೈಗಾರಿಕಾ ಹಬ್ ನಿರ್ಮಾಣ ಮಾಡುವ ಸಲುವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯುವ ಬಗ್ಗೆ ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯವರು ನಡೆಸುತ್ತಿರುವ ಹೋರಾಟದ ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಪ್ರಸಕ್ತ ಭೂಸ್ವಾಧೀನ ಪಡೆಯಲು ಪ್ರಕ್ರಿಯೆ ನಡೆಸಿರುವ ಪ್ರದೇಶವು ಈಗಾಗಲೇ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಯೋಗಾ ಕೇಂದ್ರಗಳು, ಸರ್ಕಾರದಿಂದ ನಿರ್ಮಾಣಗೊಂಡಿರುವ ಪ್ರತಿಷ್ಠಿತ ಬಡಾವಣೆಗಳು, ಹಲವಾರು ಬೃಹತ್ ಕೆರೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಈ ಭಾಗದಲ್ಲಿ ಸರ್ಕಾರದಿಂದಲೇ ಅಭಿವೃದ್ಧಿ ಪಡಿಸಿರುವ ಪ್ರತಿಷ್ಠಿತ ನಾಲ್ಕು ಕೈಗಾರಿಕಾ ಪ್ರದೇಶಗಳಿಂದಾಗಿ ಸಮಾಜದ ಮೇಲೆ ಉಂಟಾಗುತ್ತಿರುವ ಹಾನಿಗಳ ಬಗ್ಗೆ ತಮಗೂ ಸಹ ಮನವರಿಕೆ ಆಗಿರುವುದಾಗಿ ಭಾವಿಸಿರುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲಿನ ಈಗಿನ ಪರಿಸ್ಥಿತಿಯನ್ನು ಗಮನಿಸುತ್ತಿರುವ ನಾವೆಲ್ಲರೂ ಮುಂದಿನ ಪೀಳಿಗೆಯ ಏಳಿಗೆಗೆ ಈಗಲಾದರೂ ಜಾಗರೂಕರಾಗಬೇಕಿದೆ. ಇಂದಿನ ಪರಿಸ್ಥಿತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಪ್ರದೇಶವನ್ನು ಹಸಿರು ವಲಯವೆಂದು ಘೋಷಿಸಿ ಸದರಿ ಪ್ರದೇಶದಲ್ಲಿ ಯಾವುದೇ ಅನಧಿಕೃತ ಬಡಾವಣೆಗಳಾಗಲಿ ಅಥವಾ ಕೈಗಾರಿಕೆಗಳಾಗಲಿ ಬಾರದಂತೆ ಕಾಪಾಡುವುದು ಸರ್ಕಾರದ ಕರ್ತವ್ಯವೆಂದು ಭಾವಿಸುತ್ತೇನೆ.
ಆದುದರಿಂದ, ಸರ್ಕಾರವು ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ರೈತರ ಆಶಯಗಳಂತೆ ಸದರಿ ಭೂಸ್ವಾಧೀನ ಪ್ರಸ್ತಾವನೆಯನ್ನು ಕೈಬಿಡಬೇಕಾಗಿ ಒತ್ತಾಯಿಸುತ್ತೇನೆ ಎಂದು ಸಂಸದರು ಹೇಳಿದ್ದಾರೆ.












Click it and Unblock the Notifications