ಕೈಕೊಟ್ಟ ಮಳೆ: ಮೂಡಿಗೆರೆಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ರೈತರ ಒತ್ತಾಯ
ಚಿಕ್ಕಮಗಳೂರು, ಅಕ್ಟೋಬರ್, 03: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯು ಭೌಗೋಳಿಕತೆಯಲ್ಲಿ ಅರ್ಧಕ್ಕಿಂತ ಹೆಚ್ಚು ಬೆಟ್ಟಗುಡ್ಡಗಳಿಂದಲೇ ಕೂಡಿರೋ ತಾಲೂಕು. ವಾರ್ಷಿಕ ದಾಖಲೆ ಮಳೆ ಬೀಳುವ ಮೂಡಿಗೆರೆಯಲ್ಲಿ ಈ ವರ್ಷ ಅರ್ಧಕರ್ಧ ಮಳೆ ಕೊರತೆ ಇದೆ. ಆದ್ದರಿಂದ ಮೂಡಿಗೆರೆಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ರೈತರ ಒತ್ತಾಯವಾಗಿದೆ.
ಸುರಿದಿರುವ ಮಳೆ ಕೂಡ ಕಾಫಿತೋಟಗಳಲ್ಲಿ ಹರಿದು ನದಿ ಸೇರಿ ಹರಿದು ಹೋಗಿದೆ. ಅರ್ಧ ವರ್ಷ ಮಳೆ ನೋಡುವ ಮೂಡಿಗೆರೆಯಲ್ಲಿ ಕೆರೆ-ಕಟ್ಟೆಗಳು ತೀರಾ ಕಡಿಮೆ. ಅದರಲ್ಲೂ ಈ ವರ್ಷ ಮಳೆ ಕೊರತೆ ಮಲೆನಾಡಿಗರು ಇತಿಹಾಸದಲ್ಲಿ ಕಾಣದ ಬರವನ್ನು ಕಂಡಿದ್ದಾರೆ. ಆದರೆ ಸರ್ಕಾರ ಜಿಲ್ಲೆಯ ಬಯಲುಸೀಮೆ ಭಾಗದ ಕಡೂರು ಹಾಗೂ ತರೀಕೆರೆ, ಅಜ್ಜಂಪುರ, ಚಿಕ್ಕಮಗಳೂರು, ಎನ್.ಆರ್.ಪುರ ತಾಲೂಕನ್ನು ಮಾತ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವುದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಅತಿವೃಷ್ಠಿಯಲ್ಲೂ ನಮಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸಲ್ಲ. ಅನಾವೃಷ್ಠಿಯಲ್ಲೂ ಸೂಕ್ತವಾಗಿ ಸ್ಪಂದಿಸಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ವರ್ಷ ಮೂಡಿಗೆರೆ ಹಿಂದೆಂದೂ ಕಾಣದ ಬರವನ್ನು ಕಂಡಿದೆ. ಸರ್ಕಾರ ಕೂಡಲೇ ಮೂಡಿಗೆರೆಯನ್ನೂ ಬರಪಿಡೀತ ತಾಲೂಕು ಎಂದು ಘೋಷಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಈಗಾಗಲೇ ಮೂಡಿಗೆರೆಯಲ್ಲಿ ಮಲೆನಾಡಿಗರು ಹನಿ ನೀರಿಗೂ ಹಾಹಾಕಾರ ಅನುಭವಿಸುವಂತಾಗಿದೆ. ಭತ್ತದ ಮತ್ತೊಂದೆಡೆ ಗದ್ದೆಗಳನ್ನು ಪಾಳುಬಿಟ್ಟಿದ್ದಾರೆ. ಮಳೆಗಾಲದಲ್ಲೇ ಕಾಫಿತೋಟಕ್ಕೆ ಬೋರ್‌ನಲ್ಲಿ ನೀರಾಯಿಸುವಂತಾಗಿದೆ ಎಂದು ಮೂಡಿಗೆರೆ ನಿವಾಸಿ ನಾಗೇಶ್ ಗೌಡ ಅಳಲು ತೋಡಿಕೊಂಡಿದ್ದಾರೆ.
ಮಲೆನಾಡಿನಲ್ಲಿ ಆಗಸ್ಟ್-ಸೆಪ್ಟೆಂಬರ್ ಅಪ್ಪಟ ಮಳೆಗಾಲ. ಈಗಲೇ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಆಗಾಗ್ಗೆ ಅಲ್ಲಲ್ಲೇ ಸುರಿಯುವ ಮಳೆ ಕೂಡ ಮಲೆನಾಡಿಗರನ್ನು ನಾಶ ಮಾಡಲೆಂದೇ ಸುರಿಯುತ್ತಿದೆ. ಭತ್ತ ಕಾಳಾಗೋ ಸೆಪ್ಟೆಂಬರ್‌ನಲ್ಲೇ ನೀರಿಲ್ಲದೆ ಭತ್ತ ಸಂಪೂರ್ಣ ನಾಶವಾಗಿದೆ. ಕಾಫಿ-ಮೆಣಸು-ಅಡಿಕೆ ಈ ವರ್ಷ ಅರ್ಧವೂ ಕೈಸೇರಿಲ್ಲ. ಮಳೆ ಇಲ್ಲದೆ ಎಲ್ಲವೂ ನಾಶವಾಗಿದೆ.
ನಾಡಿಗೆ ನೀರು ನೀಡುವ ನಮಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಬಯಲುಸೀಮೆ ತಾಲೂಕಗಳನ್ನು ಬರದ ತಾಲೂಕು ಎಂದು ಘೋಷಿಸಿದೆ. ಆದರೆ ಮೂಡಿಗೆರೆಯನ್ನು ಬರ ಎಂದು ಘೋಷಿಸಿಲ್ಲ. ಕೂಡಲೇ ಮೂಡಿಗೆರೆಯನ್ನು ಬರಪೀಡಿತ ಎಂದು ತಾಲೂಕು ಎಂದು ಘೋಷಿಸಬೇಕು. ಇಲ್ಲವಾದರೆ, ಜನ ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ ಎಂದು ರೈತ ಧನಂಜಯ್ ಎಚ್ಚರಿಸಿದ್ದಾರೆ.












Click it and Unblock the Notifications