ಮುಂಗಾರು ಮಳೆ ಮೂನ್ಸೂಚನೆ; ಅಧಿಕಾರಿಗಳ ಜೊತೆ ಡಿಸಿ ಸಭೆ
ಕೊಪ್ಪಳ, ಮೇ 16; ಜೂನ್‌ನಿಂದ ನೈಋತ್ಯ ಮುಂಗಾರು ಆರಂಭಗೊಳ್ಳಲಿದೆ. ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅಧಿಕಾರಿಗಳ ಜೊತೆ ಸಭೆ ನಡೆಸಿ ಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಸೇರಿದಂತೆ ಅಗತ್ಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಮೊದಲನೇ ಪೂರ್ವ ಸಿದ್ಧತಾ ಸಭೆ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆ ಸಹಯೋಯೋಗದಲ್ಲಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿಗಳು ಮಾತನಾಡಿ, "2023ರ ದೀರ್ಘಕಾಲಿನ ಮುಂಗಾರು ಮಳೆ ಮೂನ್ಸೂಚನೆ ಅನ್ವಯ ರಾಜ್ಯದಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ. ಮುಂಗಾರು ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆಯ ಪ್ರಮಾಣ ಶೇ 85.2ರಷ್ಟಿದ್ದು ಕರ್ನಾಟಕ ರಾಜ್ಯವು ಸೇರಿದಂತೆ ದಕ್ಷಿಣ ಭಾಗದ ಭೂಪ್ರದೇಶಗಳಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸಂಬಂಧಿಸಿದ ಇಲಾಖೆಗಳು ಅಗತ್ಯ ಮುಂಜಾಗ್ರತೆ ವಹಿಸಿ ಸಿದ್ಧತೆ ಮಾಡಿಕೊಳ್ಳಬೇಕು"ಎಂದರು.
"ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜಕ್ಕೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬಿತ್ತನೆ ಬೀಜ ವಿತರಣೆ ಮಾಡುವ ಕೇಂದ್ರಗಳು ಹಾಗೂ ಹೆಚ್ಚುವರಿ ಕೇಂದ್ರಗಳ ಪಟ್ಟಿ ಮಾಡಿಕೊಂಡು ಆಯಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು" ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಜಾಗೃತಿ ಮೂಡಿಸಿ; ಬೀಜದಿಂದ ಹರಡುವ ರೋಗಗಳನ್ನು ತಡೆ ಹಿಡಿಯಲು ಪ್ರತಿ ಹೋಬಳಿ ಮಟ್ಟದಲ್ಲಿ ಬಿತ್ತನೆ ಬೀಜಗಳ ಉಪಚಾರ ಮಾಡಿ ಬಿತ್ತನೆ ಮಾಡುವಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಮೇ 22 ರಿಂದ ಬೀಜೋಪಚಾರ ಆಂದೋಲನ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಮಾಹೇವಾರು ರಸಗೊಬ್ಬರ ಬೇಡಿಕೆಯ ಮಾಹಿತಿಯನ್ನು ಸಲ್ಲಿಸಿ, ಯಾವುದೇ ರೀತಿಯ ಕೊರೆತೆಯಾಗದಂತೆ ರಸಗೊಬ್ಬರದ ದಾಸ್ತಾನು ಮಾಡಲು ಒತ್ತು ನೀಡಬೇಕು. ರೈತರಿಗೆ ಸಕಾಲಕ್ಕೆ ಬೀಜ ಮತ್ತು ಗೊಬ್ಬರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ಬೀಜ ಪೂರೈಕೆ ಕಂಪನಿಗಳು, ರಸಗೊಬ್ಬರ ವಿತರಕರು ಸರಿಯಾಗಿ ಸಮನ್ವಯ ವಹಿಸಿ, ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ವಾಡಿಕೆ ಮೇ 15ರಿಂದ ಜೂನ್ 15ರವರೆಗೆ ಇದ್ದು, ಪೂರ್ವ ಮುಂಗಾರಿನಲ್ಲಿ ಹೆಸರು ಹಾಗೂ ಎಳ್ಳು ಬಿತ್ತನೆ ಮಾಡಲಾಗುತ್ತದೆ. ಮುಂಗಾರು ಹಂಗಾಮು ವಾಡಿಕೆ ಜೂನ್ 1ರಿಂದ ಆಗಸ್ಟ್ 15ರವರೆಗೆ ಇದ್ದು ಈ ವೇಳೆಯಲ್ಲಿ ಮೆಕ್ಕೆಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ.
ಈ ಎಲ್ಲಾ ಪ್ರಮುಖ ಬೆಳೆಗಳ ಬೆತ್ತನೆ ಬೀಜಗಳನ್ನು ಜಿಲ್ಲೆಯ 20 ರೈತ ಸಂಸ್ಕರಣಾ ಕೇಂದ್ರಗಳ ಜೊತೆಗೆ 8 ಹೆಚ್ಚುವರಿ ಕೇಂದ್ರಗಳಲ್ಲಿ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ತೊಗರಿ, ಹುರುಳಿ, ಹೆಸರು, ಅಲಸಂದಿ, ಅವರೆ, ಮಡಿಕೆ, ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಔಡಲ, ಹತ್ತಿ ಮತ್ತು ಕಬ್ಬು ಸೇರಿದಂತೆ 3,08,000 ಬಿತ್ತನೆ ಕ್ಷೇತ್ರದ ಗುರಿಯನುಸಾರ ಒಟ್ಟು 41671.74 ಕ್ವಿಂಟಲ್‌ನಷ್ಟು ಬೀಜದ ಬೇಡಿಕೆ ಇರುತ್ತದೆ ಎಂದು ಅಂದಾಜಿಸಲಾಗಿದೆ.
ಮುಂಗಾರು ಹಂಗಾಮು ಪೂರ್ವ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ತಿಳಿಸಲು ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪ್ರತಿ ಹೊಬಳ್ಳಿಯಲ್ಲಿ 3 ದಿನಗಳ ಪ್ರಚಾರ ಕೈಗೊಳ್ಳಲಾಗುತ್ತದೆ. ಕೃಷಿ ಸಂಜೀವಿನಿ ವಾಹನಗಳ ಮೂಲಕ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಇಲಾಖೆಯ ಯೋಜನೆಗಳು, ಬೆಳೆಗಳ ಮಾಹಿತಿ, ರೋಗ ಮತ್ತು ಕೀಟ ಹತೋಟಿ ಕ್ರಮಗಳ ಬಗ್ಗೆ ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ವಿಜ್ಞಾನಿಗಳೊಂದಿಗೆ ಪ್ರಚಾರ ಕಾರ್ಯ ನಡೆಸಲಾಗುತ್ತದೆ.
ಸಭೆಯಲ್ಲಿ ಸಾಗುವಳಿಗೆ ಲಭ್ಯವಿರುವ ಭೂಮಿ, ಕೃಷಿ, ತೋಟಗಾರಿಕಾ, ರೇಷ್ಮೆ ಬೆಳೆಗಳು, ಹಿಂಗಾರು ಹಾಗೂ ಮುಂಗಾರು ಮತ್ತು ಬೇಸಿಗೆ, ನೀರಾವರಿ, ಖುಷ್ಕಿ ಕೃಷಿ ಕ್ಷೇತ್ರ ಹಾಗೂ ಸಣ್ಣ, ಅತಿ ಸಣ್ಣ ಮತ್ತು ದೊಡ್ಡ ಸೇರಿದಂತೆ ಒಟ್ಟು ಹಿಡುವಳಿದಾರರು, ವಾರ್ಷಿಕ ಮಳೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.












Click it and Unblock the Notifications