ಹವಾಮಾನ ಬದಲಾವಣೆ; ತೊಗರಿ ಬೆಳೆದ ರೈತರಿಗೆ ಸಲಹೆಗಳು
ಕಲಬುರಗಿ, ಅಕ್ಟೋಬರ್ 29 : ಕಲಬುರಗಿ ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದಾಗಿ ತೊಗರಿ ಬೆಳೆದ ರೈತರು ಆತಂಕಕ್ಕೆ ಸಿಲುಕಿದ್ದಾರೆ. ತೊಗರಿ ಹೊಲಗಳಲ್ಲಿ ನೀರು ನಿಂತಿತ್ತು. ಹವಮಾನ ಬದಲಾದ ಕಾರಣ ಕೃಷಿ ಇಲಾಖೆ ರೈತರಿಗೆ ಹಲವು ಸಲಹೆಗಳನ್ನು ನೀಡಿದೆ.
ತೊಗರಿ ಬೆಳೆದ ರೈತರು ಮುಂಜಾವಿನ ಮಂಜಿನಿಂದಾಗಿ ತೊಗರಿ ಹೂವು, ಮೊಗ್ಗು ಕಪ್ಪಾಗಿ ಸುಡದಂತೆ ಹಾಗೂ ಉದರದಂತೆ ಜಾಗೃತೆ ವಹಿಸಬೇಕು ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೊಗರಿ ಬೆಳೆಯು ಮೊಗ್ಗು ಹಾಗೂ ಹೂವಾಡುವ ಹಂತದಲ್ಲಿದ್ದು, ಮುಂಜಾನೆಯ ಮಂಜಿನ ವಾತಾವರಣದಿಂದ ಎಲೆ ದೇಟು ಹಾಗೂ ಹೂವಿನ ಮೇಲೆ ಸಣ್ಣ ದುಂಡಾಕಾರದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಮೊಗ್ಗು ಮತ್ತು ಹೂವು ಉದುರುವಿಕೆ ಅಲ್ಲಲ್ಲಿ ಸ್ಥಳೀಯವಾಗಿ ಕಂಡು ಬರುತ್ತಿದೆ. ವಾತಾವರಣದ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಿಸ್‍ಗಿಂತ ಕಡಿಮೆ ಇದ್ದು. ಮೋಡ ಕವಿದ ವಾತಾವರಣ ಮತ್ತು ಇವುಗಳಿಗೆ ಪೂರಕವಾಗಿ ತುಂತುರು ಮಳೆಯಿಂದಾಗಿ ರೋಗ ಭಾದೆ ಉಲ್ಬಣವಾಗಲಿದೆ.
ಈ ತರಹದ ರೋಗದ ಚಿಹ್ನೆಗಳು ಕಂಡು ಬಂದಾಗ ರೈತರು ಪ್ರತಿ ಲೀಟರ್ ನೀರಿನಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಬೆರೆಸಿ ಸಿಂಪಡಿಸಿಬೇಕು. ತೊಗರಿಯಲ್ಲಿ ಹೂ ಉದುರುವಿಕೆ ನಿಲ್ಲಿಸಲು ರೈತರು ಪ್ರತಿ ಎಕರೆಗೆ ಪಲ್ಸಮ್ಯಾಜಿಕ್ 2 ಕೆ.ಜಿ.ಯನ್ನು 200 ಲೀ. ನೀರಿನ ಬ್ಯಾರಲ್‍ನಲ್ಲಿ ಕಲಿಸಿ ಸಿಂಪಡಿಸಬೇಕು.
ಭೂಮಿಯ ತೇವಾಂಶ ರೋಗದ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ. ಚಳಿಯ ಅಂಶ ಹೆಚ್ಚಾದಲ್ಲಿ ಮಾತ್ರ ಹೊಸ ಮೊಗ್ಗು ಮತ್ತು ಹೂಗಳು ಹುಟ್ಟುವ ಪ್ರಕ್ರಿಯೆ ಉತ್ತಮವಾಗಬಹುದೆಂದು ಕೃಷಿ ವಿಜ್ಞಾನಿಗಳು ಹೇಳಿದ್ದಾರೆ.












Click it and Unblock the Notifications