ಕೊಡಗಿನಲ್ಲಿ ಎಲ್ಲೆಲ್ಲೂ ಟ್ರಾಫಿಕ್ ಜಾಮ್: ಜಿಲ್ಲೆಗೆ ಇಷ್ಟೊಂದು ಪ್ರವಾಸಿಗರ ದಂಡು ಹರಿದು ಬರುತ್ತಿರುವುದೇಕೆ ಗೊತ್ತಾ?
ಮಡಿಕೇರಿ, ಡಿಸೆಂಬರ್ 27: ಕೊಡಗಿಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವುದಕ್ಕಿಂತ ಹೆಚ್ಚಾಗಿ ಇಲ್ಲಿನ ಪರಿಸರದಲ್ಲಿ ಖುಷಿಯಾಗಿ ಕಾಲ ಕಳೆಯಲು ಇಷ್ಟಪಡುತ್ತಿರುವುದರಿಂದ ಜಿಲ್ಲೆಯಲ್ಲಿರುವ ಹೋಟೆಲ್, ಹೋಂಸ್ಟೇ, ರೆಸಾರ್ಟ್ ಭರ್ತಿಯಾಗಿದ್ದು, ಇಡೀ ಜಿಲ್ಲೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಹೆಚ್ಚಿನ ಜನರು ಇತ್ತ ಮುಖ ಮಾಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಪ್ರವಾಸಿಗರ ದಂಡು ಬೀಡು ಬಿಟ್ಟಿದೆ. ಇದೇ ಮೊದಲ ಬಾರಿಗೆ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಿದ್ದು, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರಲ್ಲದೆ, ಎಲ್ಲೆಂದರಲ್ಲಿ ವಾಹನಗಳ ದಟ್ಟಣೆ ಕಂಡು ಬರುತ್ತಿದೆ. ಅದರಲ್ಲೂ ಕ್ರಿಸ್‌ಮಸ್ ಸಮಯದಲ್ಲಿ ಸಾಲು ಸಾಲು ರಜೆಯಿದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ದೌಡಾಯಿಸಿದ್ದು ವಿಶೇಷವಾಗಿತ್ತು.

ಸಾಮಾನ್ಯವಾಗಿ ಇಷ್ಟೊಂದು ಸಂಖ್ಯೆಯಲ್ಲಿ ಪ್ರವಾಸಿಗರನ್ನು ನೋಡದ ಸ್ಥಳೀಯರು ಹೌಹಾರಿದ್ದಂತು ನಿಜ. ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿತು. ಇದರಿಂದ ಪರದಾಡುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಅಲ್ಲದೆ ಹೋಂಸ್ಟೇಗಳನ್ನು ಮೊದಲೇ ಬುಕಿಂಗ್ ಮಾಡಿಕೊಂಡು ಬರುತ್ತಿರುವ ಕಾರಣ ಬಹಳಷ್ಟು ಪ್ರವಾಸಿಗರು ಪ್ರವಾಸಿತಾಣಗಳಿಗೆ ಭೇಟಿ ನೀಡುವ ಬದಲಾಗಿ ಮೋಜು ಮಸ್ತಿಯೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿರುವುದು ಕಾಣಸಿಗುತ್ತಿದೆ.
ಜಿಲ್ಲೆಯಲ್ಲಿ ವಾಹನ ದಟ್ಟಣೆಯಿಂದ ಪರದಾಟ
ಮುಖ್ಯಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಹೋಂಸ್ಟೇ ಮತ್ತು ರೆಸಾರ್ಟ್ ಗಳು, ಹೋಟೆಲ್ ಗಳು ಸಂಪೂರ್ಣ ಭರ್ತಿಯಾಗಿವೆ. ಕೊರೋನಾ ಭಯದ ನಡುವೆಯೂ ಮುಂದೆ ಸರ್ಕಾರ ಕಠಿಣ ತೀರ್ಮಾನ ಕೈಗೊಂಡರೆ ಪ್ರವಾಸ ತೆರಳಲು ಕಷ್ಟವಾಗಬಹುದೆಂಬ ಹಿನ್ನಲೆಯಲ್ಲಿ ಈಗಲೇ ಹೆಚ್ಚಿನ ಸಂಖ್ಯೆಯಲ್ಲಿ ಅದರಲ್ಲೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಪ್ರವಾಸಿಗರು ಮಾತ್ರವಲ್ಲದೆ, ವಿದೇಶಿಗರು ಕೂಡ ಇಲ್ಲಿಗೆ ಬರುತ್ತಿರುವುದು ಕಂಡು ಬರುತ್ತಿದೆ.

ಕುಶಾಲನಗರ ಮತ್ತು ಮಡಿಕೇರಿ ಪಟ್ಟಣದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಂಜೆಯಾಯಿತೆಂದರೆ ಸೂರ್ಯಾಸ್ತಮಾನವನ್ನು ವೀಕ್ಷಿಸಲೆಂದು ಪ್ರವಾಸಿಗರು ರಾಜಾಸೀಟ್‌ನತ್ತ ಸುಳಿಯುತ್ತಿರುವುದು ಕಾಣಿಸುತ್ತಿದೆ. ಹೀಗಾಗಿ ಪುಟ್ಟ ನಗರ ಮಡಿಕೇರಿಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ರಸ್ತೆಗಳು ಕಿರಿದಾಗಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಯತ್ತಿದೆ. ಜಿಲ್ಲೆಯ ಮಡಿಕೇರಿ ಗೋಣಿಕೊಪ್ಪ ಭಾಗಮಂಡಲ, ವಿರಾಜಪೇಟೆ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಸರದಿ ಸಾಲಿನಲ್ಲಿ ವಾಹನವನ್ನು ಚಲಾಯಿಸುವಂತಾಗಿದೆ.
ಇಷ್ಟೊಂದು ಪ್ರವಾಸಿಗರು ಬರುತ್ತಿರುವುದೇಕೆ?
ಒಂದೆಡೆ ಸ್ವಂತ ಹಾಗೂ ಖಾಸಗಿ ವಾಹನಗಳಲ್ಲಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದರೆ ಉಳಿದಂತೆ ಕೆಎಸ್‌ಆರ್‌ಟಿಸಿಯಲ್ಲೂ ಬರುತ್ತಿರುವುದರಿಂದ ಬಸ್‌ಗಳು ಜನರಿಂದ ತುಂಬಿ ತುಳುಕುತ್ತಿದೆ. ಜಿಲ್ಲೆಯೊಳಗೆ ಖಾಸಗಿ ಬಸ್‌ಗಳು ಹೆಚ್ಚು ಸಂಚಾರವಿದ್ದು ಕೆಲವು ಸ್ಥಳಗಳಿಗೆ ತೆರಳಲು ಖಾಸಗಿ ಬಸ್ ಅವಲಂಬನೆ ಅನಿವಾರ್ಯವಾಗಿದೆ. ಇನ್ನು ಜಿಲ್ಲೆಯಲ್ಲಿರುವ ಕೆಲವೇ ಕೆಲವು ಪ್ರವಾಸಿ ತಾಣಗಳಿಗೆ ಮಾತ್ರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಉಳಿದಂತೆ ಹೆಚ್ಚಿನವರು ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ವಾಸ್ತವ್ಯ ಹೂಡುವುದರೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಪ್ರವಾಸಿಗರು ಜಿಲ್ಲೆಗೆ ನಿರೀಕ್ಷೆ ಮೀರಿ ಬರುತ್ತಿರುವುದು ಖುಷಿಯ ವಿಚಾರವಾದರೂ ಕೊಡಗಿನಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸದಿರುವುದು. ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದಿರುವುದು ಪ್ರವಾಸಿಗರು ಹಿಡಿಶಾಪ ಹಾಕಿಕೊಂಡು ಹಿಂತಿರುಗುವಂತಾಗಿದೆ. ಅದಕ್ಕಿಂತ ಹೆಚ್ಚಾಗಿ ಪ್ರವಾಸಿಗರಿಂದ ಸುಲಿಗೆಯೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಇಷ್ಟಕ್ಕೂ ಇಲ್ಲಿಗೆ ಪ್ರವಾಸಿಗರು ಏಕೆ ಬರುತ್ತಾರೆ ಎಂದರೆ ಇತರೆಡೆಗಳಿಗೆ ಹೋಲಿಸಿದರೆ ಕೊಡಗು ವಿಶಿಷ್ಟ ಮತ್ತು ವಿಭಿನ್ನವಾಗಿದೆ.
ಹೆಚ್ಚೆಚ್ಚು ಪ್ರವಾಸಿಗರ ಸೆಳೆಯುವ ತಾಣಗಳಿವು
ಇಲ್ಲಿನ ವಾತಾವರಣ ಕೂಲ್ ಆಗಿದೆ. ಸಂಸ್ಕೃತಿ, ಪರಿಸರ ಎಲ್ಲವೂ ವಿಶಿಷ್ಟವಾಗಿದೆ. ಜತೆಗೆ ಇಲ್ಲಿರುವ ಪ್ರವಾಸಿ ತಾಣಗಳು ನಿಸರ್ಗ ಸೃಷ್ಟಿಯಾಗಿವೆ. ಹೀಗಾಗಿ ಪ್ರವಾಸಿ ತಾಣಗಳು ಅಭಿವೃದ್ಧಿಯಿಲ್ಲದಿದ್ದರೂ ಜನ ಪರಿಸರದಲ್ಲಿ ಕಾಲ ಕಳೆಯುವ ಸಲುವಾಗಿ ಬರುತ್ತಾರೆ. ಅಂದಾಜು ವರ್ಷಕ್ಕೆ 35 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡುತ್ತಾರೆ ಎಂದರೆ ಅಚ್ಚರಿಯಾಗುತ್ತದೆ. ಹಿಂದೆ ಕೊಡಗಿಗೆ ಭೇಟಿ ನೀಡಲು ಭಯಪಡುತ್ತಿದ್ದರು. ಇಲ್ಲಿನ ಮಳೆ, ಚಳಿ ಭಯ ಹುಟ್ಟಿಸುತ್ತಿತ್ತು. ಆದರೆ ಕಾಲ ಬದಲಾದಂತೆಲ್ಲ ಕೊಡಗು ಪ್ರವಾಸಿ ತಾಣವಾಗಿ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿದೆ.
ಕೊಡಗಿನಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ ಜನ ಹೆಚ್ಚಾಗಿ ಕುಶಾಲನಗರ ಬಳಿಯ ಕಾವೇರಿ ನಿಸರ್ಗಧಾಮ. ದುಬಾರೆ, ಮಡಿಕೇರಿಯ ರಾಜಾಸೀಟ್, ಅಬ್ಬಿಫಾಲ್ಸ್, ಮಾಂದಲಪಟ್ಟಿ. ಉಡೋತ್ ಮೊಟ್ಟೆ ಬಳಿಯಿರುವ ಗಾಜಿನ ಸೇತುವೆ, ಭಾಗಮಂಡಲ, ತಲಕಾವೇರಿ, ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್, ಇರ್ಪು ಮೊದಲಾದ ಪ್ರವಾಸಿತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ಕಂಡು ಬರುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ವರ್ಷದ ಕೊನೆಯಲ್ಲಿ ಪ್ರವಾಸಿಗರು ಸಾಗರದಂತೆ ಹರಿದು ಬರುತ್ತಿರುವುದು ನಿಜಕ್ಕೂ ಅಚ್ಚರಿಯೇ.












Click it and Unblock the Notifications