ಧರ್ಮಸ್ಥಳದ ಭಕ್ತರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಮಂಗಳೂರು, ಜನವರಿ 07: ಕೇಂದ್ರ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ವರೆಗಿನ ರಸ್ತೆಯ ಅಭಿವೃದ್ಧಿಗೆ ಹಸಿರು ನಿಶಾನೆ ತೋರಿಸಿದೆ.
ಧಾರವಾಡದ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಫೇಸ್‌ಬುಕ್ ಪೋಸ್ಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ಸಚಿವರು 'ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರೂ. 613.65 ಕೋಟಿ ವೆಚ್ಚದಲ್ಲಿ NH-73ಯ ಉಜಿರೆ- ಧರ್ಮಸ್ಥಳ-ಪೆರಿಯಶಾಂತಿ ವರೆಗಿನ 28.49 ಕಿ. ಮೀ. ಉದ್ದದ ರಸ್ತೆಯನ್ನು ಸುಸಜ್ಜಿತ ಎರಡು ಲೇನ್‌ಗಳಾಗಿ ವಿಸ್ತರಣೆ ಮಾಡಲು ಅನುಮೋದಿಸಿದೆ" ಎಂದು ಹೇಳಿದ್ದಾರೆ.

"ಈ ವಿಸ್ತರಣೆಯು ದಕ್ಷಿಣ ಕನ್ನಡ ಜಿಲ್ಲೆಯ NH-73 ಮತ್ತು NH-75 ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಇದು ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನ ಮತ್ತು ಬಾಹುಬಲಿ ಪ್ರತಿಮೆಯಂತಹ ಹಲವಾರು ಮಹತ್ವದ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುತ್ತದೆ" ಎಂದು ತಿಳಿಸಿದ್ದಾರೆ.
"ಹೆಚ್ಚುವರಿಯಾಗಿ, ಮಳೆಗಾಲದಲ್ಲಿ ಘಾಟ್ ವಿಭಾಗದಲ್ಲಿ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ನೀಡುತ್ತದೆ. ಕರ್ನಾಟಕದ ರಸ್ತೆ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳು" ಎಂದು ಪ್ರಹ್ಲಾದ್ ಜೋಶಿ ಪೋಸ್ಟ್ ಹಾಕಿದ್ದಾರೆ.
2022ರಲ್ಲಿಯೇ ಪ್ರಸ್ತಾವನೆ; ಉಜಿರೆ-ಧರ್ಮಸ್ಥಳ-ಪೆರಿಯಶಾಂತಿವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ, ಅಭಿವೃದ್ಧಿಗೊಳಿಸಬೇಕು ಎಂದು 2022ರಲ್ಲಿಯೇ ಪ್ರಸ್ತಾವನೆ ಸಿದ್ಧಗೊಳಿಸಲಾಗಿತ್ತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ನೇತ್ರಾವತಿ ತನಕದ ಚತುಷ್ಪಥ ರಸ್ತೆಯ ಉದ್ಘಾಟನೆ ವೇಳೆ ಉಜಿರೆ-ಪೆರಿಯಶಾಂತಿ ರಸ್ತೆಯನ್ನು ಮೇಲ್ದೆರ್ಜೆಗೆ ಏರಿಸಿ, ಅಭಿವೃದ್ಧಿಗೊಳಿಸುವ ಕುರಿತು ಸರ್ಕಾರದ ಗಮನ ಸೆಳೆದಿದ್ದರು.
ಬಳಿಕ ರಾಷ್ಟ್ರೀಯ ಹೆದ್ದಾರಿ-75 ಸಂಪರ್ಕಿಸುವ ಉಜಿರೆ-ಪೆರಿಯಶಾಂತಿ ರಸ್ತೆಯನ್ನು ಸ್ಪರ್ ರಸ್ತೆಯಾಗಿ ಘೋಷಣೆ ಮಾಡಲಾಗಿತ್ತು. ಬಳಿಕ ರಾಜ್ಯ ಹೆದ್ದಾರಿ ಇಲಾಖೆಯಿಂದ ಈ ರಸ್ತೆಯನ್ನು ರಾಷ್ಟ್ರೀ ಹೆದ್ದಾರಿ ಇಲಾಖೆಗೆ ಹಸ್ತಾಂತರ ಮಾಡಲಾಗಿತ್ತು.
ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಸಂಪರ್ಕಿಸುವ, ಐತಿಹಾಸಿಕ & ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ರಸ್ತೆಯನ್ನು ಸ್ಪರ್ ಯೋಜನೆಯಡಿ ಅನುದಾನ ಒದಗಿಸಿ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ.
ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ವರೆಗಿನ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿತ್ತು. ಈಗ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸಲಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಧರ್ಮಸ್ಥಳ-ಸುಬ್ರಮಣ್ಯ-ಮಂಗಳೂರು-ಬೆಂಗಳೂರು ಪ್ರದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಹಲವು ರಸ್ತೆಗಳ ಅಭಿವೃದ್ಧಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 957.39 ಕೋಟಿ ರೂ. ವೆಚ್ಚದ ಎರಡು ಬೃಹತ್ ಯೋಜನೆಗೆ ಅನುಮತಿ ಸಿಕ್ಕಿದೆ ಎಂದು ಕಳೆದ ವಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದರು.
ಇವುಗಳಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ 28.490 ಕಿ. ಮೀ. ದ್ವಿಪಥ ಅಭಿವೃದ್ಧಿ ಯೋಜನೆಯೂ ಸೇರಿತ್ತು. ಚಾರ್ಮಾಡಿ ಘಾಟ್‌ನಲ್ಲಿ ಮಂಗಳೂರು-ಮೂಡಿಗೆರೆ-ತುಮಕೂರು ಸೆಕ್ಷನ್‌ನಲ್ಲಿ 11.20 ಕಿ. ಮೀ. ಅಭಿವೃದ್ಧಿಯೂ ಸೇರಿದೆ.












Click it and Unblock the Notifications