ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ; ಎಫ್‌ಎಲ್‌ಎಸ್ ವರದಿಗೆ ಟೆಂಡರ್
ಹುಬ್ಬಳ್ಳಿ, ಜೂನ್ 05; ಕರ್ನಾಟಕದಲ್ಲಿ ದಶಕಗಳಿಂದ ವಿವಾದಕ್ಕೆ ಕಾರಣವಾಗಿರುವ ರೈಲು ಯೋಜನೆ ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲು ಮಾರ್ಗ. ನೈಋತ್ಯ ರೈಲ್ವೆ ಈ ಯೋಜನೆಯ Final Location Survey ಗಾಗಿ ಟೆಂಡರ್ ಕರೆದಿದೆ. ಪರಿಸರವಾದಿಗಳ ವಿರೋಧದ ನಡುವೆ ಈ ಯೋಜನೆಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಹುಬ್ಬಳ್ಳಿ ಮತ್ತು ಅಂಕೋಲಾ ನಿಲ್ದಾಣಗಳ ನಡುವೆ ಹೊಸ ಬ್ರಾಡ್ ಗೇಜ್ ಎರಡು ಮಾರ್ಗ ನಿರ್ಮಾಣ ಮಾಡುವ ಕುರಿತು ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ವರದಿಯನ್ನು ತಯಾರು ಮಾಡಲು ಟೆಂಡರ್ ಕರೆಯಲಾಗಿದೆ. ಸುಮಾರು 167 ಕಿ. ಮೀ. ಉದ್ದದ ಪ್ರಸ್ತಾವಿತ ಮಾರ್ಗವಿದಾಗಿದೆ.

ಯಾವುದೇ ಯೋಜನೆಗೆ ಸಮಗ್ರ ಯೋಜನಾ ವರದಿಗೆ (ಡಿಪಿಅರ್) ತಯಾರು ಮಾಡುವ ಮೊದಲು ಅಂತಿಮ ಸ್ಥಳ ಸಮೀಕ್ಷೆ ನಡೆಸಲಾಗುತ್ತದೆ. ಆದ್ದರಿಂದ ಇದು ಮಹತ್ವದ್ದಾಗಿದೆ. ಈ ಸಮೀಕ್ಷೆ ಮಣ್ಣು ಪರೀಕ್ಷೆ, ಯಾರ್ಡ್‌ಗಳ ನಿರ್ಮಾಣ, ಬ್ರಿಡ್ಜ್‌ಗಳ ನಿರ್ಮಾಣ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.
6 ತಿಂಗಳ ಗುಡುವು; 6 ತಿಂಗಳುಗಳಲ್ಲಿ ಅಂತಿಮ ಸ್ಥಳ ಸಮೀಕ್ಷೆ ನಡೆಸಬೇಕು ಎಂಬ ಷರತ್ತಿನೊಂದಿಗೆ ಟೆಂಡರ್ ನೀಡಲಾಗುತ್ತದೆ. ಈ ಸಮೀಕ್ಷೆಗಾಗಿ ಅನುದಾನವನ್ನು ಸಹ ನಿಗದಿ ಮಾಡಲಾಗಿದೆ. ಈ ರೈಲು ಮಾರ್ಗ ನಿರ್ಮಾಣಗೊಂಡರೆ ಕರ್ನಾಟಕದ ವಿವಿಧ ಭಾಗಗಳಿಂದ ಕರಾವಳಿಗೆ ನೇರ ಸಂಪರ್ಕ ಸಾಧ್ಯವಾಗಲಿದೆ.

ಈ ಯೋಜನೆಯಿಂದ ಹುಬ್ಬಳ್ಳಿ ಮತ್ತು ಕರ್ನಾಟಕ ಕರಾವಳಿ ಭಾಗದ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಯಾಣಿಕರ ಸಂಚಾರದ ಜೊತೆಗೆ ಸರಕು ಸಾಗಣೆಗೆ ಅನುಕೂಲವಾಗಲಿದ್ದು, ಕೃಷಿ ಚಟುವಟಿಕೆ, ಪ್ರವಾಸೋದ್ಯಮಕ್ಕೆ ಸಹ ಮಾರ್ಗ ಸಹಕಾರಿಯಾಗಿದೆ.
ಯೋಜನೆಗೆ ವಿರೋಧ; ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಭಾರೀ ವಿರೋಧವಿದೆ. ಇದೇ ಕಾರಣಕ್ಕೆ ದಶಕಗಳಿಂದ ಈ ಯೋಜನೆ ಕಾರ್ಯಗತಗೊಂಡಿಲ್ಲ. ಈ ರೈಲು ಮಾರ್ಗ ಅರಣ್ಯ ಪ್ರದೇಶದಲ್ಲಿ ಹಾದು ಹೋಗಲಿದೆ. ಆದ್ದರಿಂದ ಅರಣ್ಯನಾಶವಾಗಲಿದೆ, ವನ್ಯಜೀವಿಗಳಿಗೆ ಅಪತ್ತು ಉಂಟಾಗಲಿದೆ ಎಂಬುದು ವಿರೋಧಕ್ಕೆ ಪ್ರಮುಖ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಈ ರೈಲು ಯೋಜನೆಗೆ ಅನುಮತಿ ನೀಡಲು ರಾಷ್ಟ್ರೀಯ ವನ್ಯಜೀವಿ ಅರಣ್ಯ ಮಂಡಳಿ ನಿರಾಕರಿಸಿದೆ. ಇದರಿಂದಾಗಿ ಸುದೀರ್ಘಕಾಲದಿಂದ ವಿಳಂಬವಾಗಿರುವ ಯೋಜನೆಗೆ ಮತ್ತೆ ಹಿನ್ನಡೆ ಉಂಟಾದಂತೆ ಆಗಿದೆ. ದಟ್ಟ ಅರಣ್ಯದ ನಡುವೆ ಸಾಗುವ ಬ್ರಾಡ್ ಗೇಜ್ ಮಾರ್ಗಕ್ಕೆ ಅನುಮತಿ ನೀಡಲಾಗದು ಎಂದು ವನ್ಯಜೀವಿ ಅರಣ್ಯ ಮಂಡಳಿ ಹೇಳಿದೆ.
ಇತ್ತೀಚೆಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಅರಣ್ಯ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲು ಯೋಜನೆ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಅರಣ್ಯ, ವನ್ಯಜೀವಿಗಳಿಗೆ ತೊಂದರೆಯಾಗದಂತೆ ರೈಲು ಮಾರ್ಗ ನಿರ್ಮಾಣ ಮಾಡಲು ಪ್ರರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಸೂಚನೆ ಕೊಡಲಾಗಿದೆ.
2017ರಲ್ಲಿ ಪ್ರಸ್ತಾವನೆ ಸಲ್ಲಿಕೆ; ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪ್ರಸ್ತಾವನೆ ದಶಕಗಳಷ್ಟು ಹಳೆಯದು. ಆದರೆ ಕರ್ನಾಟಕ ಸರ್ಕಾರ 2017ರಲ್ಲಿ ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತು. 2022ರಲ್ಲಿ ಕೇಂದ್ರದ ತಂಡ ಉತ್ತರ ಕನ್ನಡ, ಧಾರವಾಡ ಜಿಲ್ಲೆಗೆ ಭೇಟಿ ನೀಡಿ ಯೋಜನೆಯ ಕುರಿತ ಅಹವಾಲು ಆಲಿಸಿತ್ತು. ಬಳಿಕ ವರದಿ ನೀಡಿತ್ತು.
ಈ ರೈಲು ಯೋಜನೆಗೆ ಪಶ್ಚಿಮ ಘಟ್ಟದ 595.64 ಎಕರೆ ಅರಣ್ಯ ನಾಶವಾಗಲಿದೆ ಎಂಬುದು ಅಂದಾಜು. ಈ ರೈಲು ಯೋಜನೆಯಿಂದ ಪಶ್ಚಿಮ ಘಟ್ಟ ನಾಶವಾಗಲಿದೆ. ಆದ್ದರಿಂದ ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಪರಿಸರ ಹೋರಾಟಗಾರರು ಹೈಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆ ಮಾಡಿದ್ದಾರೆ.












Click it and Unblock the Notifications