ಕಾರವಾರ: ನಮ್ಗೂ "ಶಕ್ತಿ ಯೋಜನೆ"ಯ ಸೌಲಭ್ಯ ಕೊಡಿ ಸಾರ್: ಗಡಿ ಜಿಲ್ಲೆ ಮಹಿಳೆಯರ ಆಗ್ರಹ
ಕಾರವಾರ, ಜೂನ್, 12: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಯೋಜನೆಯಡಿ ವಿಧಿಸಿದ ಷರತ್ತಿನಿಂದಾಗಿ ಗಡಿ ಜಿಲ್ಲೆಯ ಮಹಿಳೆಯರು ಉಚಿತ ಬಸ್ ಪ್ರಯಾಣದಿಂದ ವಂಚಿತರಾಗುವಂತಾಗಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೆ 5 ಗ್ಯಾರಂಟಿಗಳ ಪೈಕಿ ಮೊದಲು ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ನೀಡಲಾಗಿದೆ. ಈ ಮೂಲಕ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿದೆ. ಆದರೆ ಸರ್ಕಾರ ಅಂತರ್ ರಾಜ್ಯಗಳಿಗೆ ತೆರಳುವ ಬಸ್‌ಗಳಿಗೆ ಉಚಿತ ಪ್ರಯಾಣ ನಿರ್ಬಂಧಿಸಿದ್ದು, ಇದೀಗ ಯೋಜನೆ ಲಾಭದಿಂದ ಗಡಿ ಜಿಲ್ಲೆಯ ಮಹಿಳೆಯರು ವಂಚಿತರಾಗುವಂತಾಗಿದೆ.

ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಸೆಮಿ ಡಿಲಕ್ಸ್ ಮತ್ತು ಡಿಲಕ್ಸ್ ಬಸ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಮಿರಜ್ ಮತ್ತು ಕೊಲ್ಲಾಪುರ ಸಾರಿಗೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಂತರರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿಲ್ಲ. ಇದರಿಂದ ಗಡಿ ಜಿಲ್ಲೆಗಲ್ಲಿರುವ ಮಹಿಳೆಯರಿಗೆ ಯೋಜನೆ ಜಾರಿಯಾದರೂ ಸಮರ್ಪಕವಾಗಿ ಲಾಭ ದೊರೆಯದಂತಾಗಿದೆ.
ಉತ್ತರಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳು ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿವೆ. ಹೀಗಾಗಿ ಗಡಿ ಜಿಲ್ಲೆಗಳಿಗೆ ಬರುವ ಬಹುತೇಕ ಬಸ್‌ಗಳು ಗಡಿ ರಾಜ್ಯಗಳ ಪ್ರಮುಖ ನಿಲ್ದಾಣಗಳಲ್ಲಿ ಕೊನೆಯ ನಿಲುಗಡೆಯನ್ನು ಹೊಂದಿವೆ. ಹೀಗಾಗಿ 'ಶಕ್ತಿ ಯೋಜನೆ'ಯ ಪ್ರಕಾರ ಇಂತಹ ಬಸ್‌ಗಳನ್ನು ಅಂತರರಾಜ್ಯ ಬಸ್‌ಗಳೆಂದು ಪರಿಗಣಿಸಿದ್ದು, ಈ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ನಿರ್ಬಂಧಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಾರಿಗೆ ಬಸ್‌ಗಳಲ್ಲಿ ಸ್ಟಿಕರ್‌ಗಳನ್ನೂ ಅಂಟಿಸಲಾಗಿದೆ.
ಇನ್ನು ಉತ್ತರಕನ್ನಡ, ಬೆಳಗಾವಿ ಭಾಗದಿಂದ ಹೆಚ್ಚಿನ ಜನ ಉದ್ಯೋಗಕ್ಕಾಗಿ ಗಡಿ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಆದರೆ ಹೀಗೆ ತೆರಳುವವರು ಇದೀಗ 'ಶಕ್ತಿ ಯೋಜನೆ'ಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಹೊರ ರಾಜ್ಯದಲ್ಲಿ ಟಿಕೆಟ್ ಹಣ ಪಡೆಯಲಿ. ಆದರೆ ರಾಜ್ಯದ ಗಡಿಯವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಅದರಲ್ಲಿಯೂ ಗಡಿ ಭಾಗದ ಜಿಲ್ಲೆಗಳಲ್ಲಿ ಬಹುತೇಕ ಬಸ್‌ಗಳು ಅಂತಾರಾಜ್ಯಕ್ಕೆ ಹೋಗಿ ಬರುವುತ್ತವೆ. ಆದ್ದರಿಂದ ಗಡಿಭಾಗದ ಬಹುತೇಕ ಮಹಿಳೆಯರಿಗೆ ಯೋಜನೆ ಲಾಭವೇ ಸಿಗದಂತಾಗುತ್ತದೆ.
ಅದರಲ್ಲಿಯೂ ಜಿಲ್ಲೆಯಿಂದ ಸಾಕಷ್ಟು ಮಹಿಳೆಯರು ಗೋವಾಗೆ ಕೆಲಸಗಳಿಗೆ ತೆರಳುವುದರಿಂದ ಅಂತವರಿಗೆ ಇದರ ಲಾಭ ಸಿಗಬೇಕಾಗಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಿ, ಷರತ್ತು ಸಡಿಲಿಕೆಗೆ ಪ್ರಯತ್ನಿಸಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನು ಕೇಳಿದರೆ, ಅವರು ಮಾಧ್ಯಮದವರನ್ನೇ ಪ್ರಶ್ನಿಸಿ ಹಾರಿಕೆ ಉತ್ತರ ನೀಡಿದ್ದಾರೆ. ನೀವು ಮೋದಿಯವರಿಗೆ ಒತ್ತಡ ತನ್ನಿ ಎಂದು ಹೇಳುವ ಮೂಲಕ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ "ಶಕ್ತಿ ಯೋಜನೆ" ಕೇವಲ ಪ್ರಚಾರಕ್ಕೆ ಮಾತ್ರ ಎಂಬಂತಾಗಿದ್ದು, ಸರ್ಕಾರ ಮಹಿಳಾ ಸಬಲೀಕರಣದ ಹೆಸರಿನಲ್ಲಿ ತಂದಿರುವ ಈ ಯೋಜನೆಯನ್ನು ರಾಜ್ಯದ ಎಲ್ಲಾ ಮಹಿಳೆಯರಿಗೆ ಅನುಕೂಲವಾಗುವಂತೆ ಷರತ್ತುಗಳನ್ನು ಸಡಿಲಿಕೆ ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.












Click it and Unblock the Notifications