ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ; ಹೊಸ ಅಪ್‌ಡೇಟ್
ತುಮಕೂರು, ಮೇ 05: ತುಮಕೂರು-ದಾವಣಗೆರೆ-ಚಿತ್ರದುರ್ಗ ನೇರ ರೈಲು ಮಾರ್ಗ ಕರ್ನಾಟಕದ ಬಹು ನಿರೀಕ್ಷಿತ ರೈಲು ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಈ ರೈಲು ಯೋಜನೆ ಭಾಗವಾಗಿ ಹೊಸ ರೈಲು ಮಾರ್ಗವೊಂದು ನಿರ್ಮಾಣವಾಗಲಿದೆ.
ಭಾರತೀಯ ರೈಲ್ವೆ ತಿಮ್ಮರಾಜನಹಳ್ಳಿ-ತಾವರೆಕೆರೆ ನಡುವೆ ನೂತನ ರೈಲು ಮಾರ್ಗವನ್ನು ನಿರ್ಮಾಣ ಮಾಡಲು ಟೆಂಡರ್ ಕರೆದಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಸಂಪರ್ಕಿಸುವ ಪ್ರಮುಖವಾದ ತುಮಕೂರು-ದಾವಣಗೆರೆ-ಚಿತ್ರದುರ್ಗ ನೇರ ರೈಲು ಮಾರ್ಗದ ಭಾಗವಾಗಿ ಈ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.

ತುಮಕೂರು- ದಾವಣಗೆರೆ-ಚಿತ್ರದುರ್ಗ ಬ್ರಾಡ್‌ಗೇಜ್ ನೇರ ರೈಲು ಮಾರ್ಗದ ಭಾಗವಾಗಿ ತಿಮ್ಮರಾಜನಹಳ್ಳಿ-ತಾವರೆಕೆರೆ ಸಂಪರ್ಕಿಸಲು 41 ಕಿ. ಮೀ. ಉದ್ದದ ಹೊಸ ಬ್ರಾಡ್‌ಗೇಜ್ ಮಾರ್ಗ ನಿರ್ಮಾಣವಾಗಲಿದೆ ಎಂದು ಟೆಂಡರ್‌ನಲ್ಲಿ ಮಾಹಿತಿ ಇದೆ.
ಯೋಜನೆ ವಿವರಗಳು: ತಿಮ್ಮರಾಜನಹಳ್ಳಿ-ತಾವರೆಕೆರೆ ನಡುವೆ ಹೊಸ ಬ್ರಾಡ್‌ಗೇಜ್ ಮಾರ್ಗ ನಿರ್ಮಾಣ, ಸೇತುವೆಗಳ ನಿರ್ಮಾಣ ಮುಂತಾದ ಅಂಶಗಳು ಟೆಂಡರ್‌ನಲ್ಲಿವೆ. ಗಂಟೆಗೆ 110 ಕಿ. ಮೀ. ವೇಗದಲ್ಲಿ ರೈಲು ಸಾಗುವಂತೆ ಮಾರ್ಗ ನಿರ್ಮಾಣವಾಗಲಿದೆ.
ಯೋಜನೆ ವ್ಯಾಪ್ತಿಯಲ್ಲಿ 11 ಮುಖ್ಯ ಸೇತುವೆ, 55 ಸಣ್ಣ ಸೇತುವೆ, ರಸ್ತೆ ಮೇಲ್ಸೇತುವೆ 8 ಮತ್ತು ಅಂಡರ್‌ಪಾಸ್ 35 ಬರಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ, ತಾವರೆಕೆರೆ ನಿಲ್ದಾಣಗಳು ಬರಲಿವೆ.
ಈಗಾಗಲೇ ತುಮಕೂರು-ದಾವಣಗೆರೆ-ಚಿತ್ರದುರ್ಗ ನೇರ ರೈಲು ಮಾರ್ಗ ಕಾಮಗಾರಿ ನಡೆಯುತ್ತಿದೆ. 2013ರಲ್ಲಿಯೇ ಈ ಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. 2018ರಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿತು. ತುಮಕೂರು ಮತ್ತು ದಾವಣಗೆರೆ ಎರಡೂ ಜಿಲ್ಲೆಗಳಲ್ಲಿ ಕಾಮಗಾರಿ ಆರಂಭಗೊಂಡಿದೆ.
ಸುಮಾರು 192 ಕಿ. ಮೀ. ನಡುವಿನ ಈ ರೈಲು ಮಾರ್ಗದಿಂದ ದಾವಣಗೆರೆ-ತುಮಕೂರು ನಡುವಿನ ಅಂತರ 53 ಕಿ. ಮೀ. ಕಡಿಮೆಯಾಗಲಿದೆ. ಬೆಂಗಳೂರಿಗೆ ಸಂಚಾರ ನಡೆಸುವವರಿಗೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಕಡೆ ಸಾಗುವ ಪ್ರಯಾಣಿಕರಿಗೆ ಸುಮಾರು 2 ಗಂಟೆ ಸಮಯ ಉಳಿತಾಯವಾಗಲಿದೆ.
ಈ ರೈಲು ಮಾರ್ಗಕ್ಕಾಗಿ ದಾವಣಗೆರೆ ಜಿಲ್ಲೆಯಲ್ಲಿ 236 ಎಕರೆ, ಚಿತ್ರದುರ್ಗ ಜಿಲ್ಲೆಯಲ್ಲಿ 1029 ಎಕರೆ ಮತ್ತು ತುಮಕೂರು ಜಿಲ್ಲೆಯಲ್ಲಿ 1005 ಎಕರೆ ಜಮೀನು ಬಳಕೆಯಾಗುತ್ತಿದೆ. ರೈಲು ಮಾರ್ಗದಿಂದ ಬೆಂಗಳೂರು-ಶಿವಮೊಗ್ಗ ನಡುವಿನ ರೈಲು ಮಾರ್ಗದ ಮೇಲಿರುವ ಒತ್ತಡ ಕಡಿಮೆಯಾಗಲಿದೆ.
ರೈಲು ಮಾರ್ಗ ಪೂರ್ಣಗೊಂಡ ಬಳಿಕ ಆನಗೋಡು, ಹೆಬ್ಬಾಳು, ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ, ಊರಕೇರಿ ಸೇರಿ ಹಲವು ಪಟ್ಟಣ ಮತ್ತು ಗ್ರಾಮಗಳಿಗೆ ರೈಲು ಸಂಪರ್ಕ ದೊರೆಯಲಿದೆ. 2009ರಲ್ಲಿಯೇ ಅಂದು ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಯೋಜನೆಗೆ ಒಪ್ಪಿಗೆ ನೀಡಿದ್ದರು.
1801 ಕೋಟಿ ರೂ. ವೆಚ್ಚದ ನೇರ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿ, ರಾಜ್ಯ ಸರ್ಕಾರದಿಂದ ಶೇ 50ರಷ್ಟು ವೆಚ್ಚ ಭರಿಸಲು ಒಪ್ಪಿಗೆ ನೀಡಿದ್ದರು. ಆದರೆ ಹಲವು ಕಾರಣಗಳಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. 2018ರ ಬಳಿಕ ಯೋಜನೆಗೆ ಚುರುಕು ನೀಡಲಾಗಿದೆ.












Click it and Unblock the Notifications