ಪಕ್ಷಿಪ್ರೇಮಿಗಳೇ ಈ ಹೊಸ ವರ್ಷಕ್ಕೆ ಪಕ್ಷಿಲೋಕದಲ್ಲಿ ವಿಹರಿಸಲು ರಂಗನತಿಟ್ಟಿಗೆ ಬನ್ನಿ: ಇಲ್ಲಿನ ವಿಶೇಷತೆ ಏನು..?
ಮಂಡ್ಯ, ಡಿಸೆಂಬರ್ 16: ದೂರದ ಊರುಗಳಿಂದ ಬರುವ ಪ್ರವಾಸಿಗರನ್ನು ಅದರಲ್ಲೂ ಪಕ್ಷಿಪ್ರೇಮಿಗಳನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಕೈಬೀಸಿ ಕರೆಯುತ್ತದೆ. ಕಾವೇರಿ ನದಿ ಸೃಷ್ಟಿಯ ಈ ದ್ವೀಪ ಪಕ್ಷಿಗಳ ಆವಾಸ ತಾಣವಾಗಿದ್ದು, ಬಗೆ ಬಗೆಯ ಪಕ್ಷಿಗಳ ಚಿಲಿಪಿಲಿ ನಿನಾದ ನಡುವೆ ಕಾವೇರಿ ನದಿಯಲ್ಲಿ ವಿಹರಿಸುತ್ತಾ ಹಸಿರ ಚೆಲುವಲ್ಲಿ ಪ್ರವಾಸಿಗರನ್ನು ಮೈಮರೆಯುವಂತೆ ಮಾಡುತ್ತದೆ.
ರಂಗನತಿಟ್ಟಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಕೆಲವರಷ್ಟೆ ಇಲ್ಲಿನ ಸುಂದರತೆಯನ್ನು ಕಣ್ತುಂಬಿಕೊಂಡಿದ್ದಾರೆ. ಕಾಲಕ್ಕೆ ತಕ್ಕಂತೆ ರಂಗನತಿಟ್ಟಿನ ಪಾಕೃತಿಕ ಸೌಂದರ್ಯ ಮತ್ತು ಪಕ್ಷಿಗಳು ಬದಲಾಗುತ್ತವೆ. ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ಕಾವೇರಿ ನದಿ ನಂತರದ ದಿನಗಳಲ್ಲಿ ಮೌನ ತಾಳುವುದರಿಂದ ಸುಂದರತೆ ರಾರಾಜಿಸುತ್ತದೆ. ಪಾಕೃತಿಕ ಚೆಲುವು ಕೂಡ ಇಲ್ಲಿಗೆ ಆಗಮಿಸುವ ಪಕ್ಷಿ ಪ್ರಿಯರನ್ನು ಮುದಗೊಳಿಸುತ್ತದೆ.

ಸಾಮಾನ್ಯವಾಗಿ ರಂಗನತಿಟ್ಟಿಗೆ ಆಗಮಿಸುವ ಪ್ರತಿಯೊಬ್ಬರನ್ನೂ ಹಕ್ಕಿಗಳ ಚಿಲಿಪಿಲಿ ನಿನಾದ ಸ್ವಾಗತಿಸುತ್ತದೆ. ಅದಾದ ನಂತರ ಝಳು ಝುಳು ಸದ್ದಿನ ಕಾವೇರಿ ನದಿ, ಎಳೆ ಬಿಸಿಲಿಗೆ ಮೈಯೊಡ್ಡಿ ಮಲಗಿರುವ ಮೊಸಳೆಗಳು. ನಡುಗಡ್ಡೆಯಲ್ಲಿ ಬೆಳೆದು ನಿಂತ ಹೆಮ್ಮರಗಳಲ್ಲಿ ಮತ್ತು ಬಂಡೆಗಳ ಮೇಲೆ ಥಕಥೈ ಎನ್ನುವ ಹಕ್ಕಿಗಳು.. ದೋಣಿಯಲ್ಲಿ ಕುಳಿತು ನದಿಯಲ್ಲಿ ಸವಾರಿ ಮಾಡುವ ಪ್ರವಾಸಿಗರು ಹೀಗೆ ಒಂದಾ ಎರಡಾ ಹತ್ತಾರು ಸುಂದರ ದೃಶ್ಯಗಳು ಕಣ್ಮುಂದೆ ಹಾದು ಹೋಗುತ್ತವೆ.
ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಪಕ್ಷಿಧಾಮ
ಕೃಷ್ಣರಾಜಸಾಗರ ಜಲಾಶಯದಿಂದ ಧುಮ್ಮಿಕ್ಕಿ ಹರಿಯುವ ಕಾವೇರಿ ನದಿ ಶ್ರೀರಂಗಪಟ್ಟಣದ ಬಳಿ ದ್ವೀಪ ಸೃಷ್ಟಿಸಿದ್ದು, ಸುಮಾರು 40 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ದ್ವೀಪವೇ ರಂಗನತಿಟ್ಟು. ಇಲ್ಲಿ ಬೆಳೆದು ನಿಂತಿರುವ ಹೆಮ್ಮರಗಳೇ ಪಕ್ಷಿಗಳಿಗೆ ಆಶ್ರಯ ತಾಣಗಳಾಗಿವೆ. ರಂಗನತಿಟ್ಟು ತನ್ನದೇ ಆದ ವೈಶಿಷ್ಟ್ಯದಿಂದಾಗಿ ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಪಕ್ಷಿಧಾಮ ಎಂಬ ಖ್ಯಾತಿ ಪಡೆದಿದೆ. ಇಲ್ಲಿಗೆ ವಿವಿಧ ದೇಶಗಳಿಂದ ಯಾವುದೇ ಗಡಿಪಹರೆಯನ್ನು ಲೆಕ್ಕಿಸದೆ ನೂರಾರು ವರ್ಷಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷಿಗಳು ಬರುತ್ತಿವೆ. ಹಾಗೆ ಬರುವ ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಯ ಬಳಿಕ ಸ್ವಸ್ಥಾನಕ್ಕೆ ಮರಳುತ್ತವೆ.

ಪ್ರತಿವರ್ಷವೂ ರಂಗನತಿಟ್ಟಿಗೆ ದೂರದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಸೈಬೀರಿಯಾ, ರಷ್ಯಾ, ಅಮೇರಿಕಾ, ನೈಜೀರಿಯಾಗಳಿಂದ ವಲಸೆ ಬರುವ ಅಪರೂಪದ ಹಕ್ಕಿಗಳು ಕಾವೇರಿ ನದಿದಂಡೆಯ ಹೆಮ್ಮರಗಳಲ್ಲಿ ಬೀಡುಬಿಡುತ್ತವೆ. ಇವುಗಳೊಂದಿಗೆ ನೀರು ಕಾಗೆ, ಕಾಜಾಣ, ಬೆಳ್ಳಕ್ಕಿ, ಪಲಕಮಣಿ, ಸ್ಪೂನ್‌ಬಿಲ್, ಚಿಲುಮೆ ಹಕ್ಕಿ, ಕೊಕ್ಕರೆ, ಹುಂಡಕೋಳಿ, ಪಿಕಳಾರ, ಮಿಂಚುಳ್ಳಿ, ಗುಳುಮುಳುಕು, ಬಕ, ಚೌಣಾ ಹಕ್ಕಿ, ನಿಶಾಚ, ಕೆಸರು ಹಕ್ಕಿ, ಸಿಳ್ಳಾರ, ನಾಮಗೋಳಿ, ಗೀಜುಗ, ಟಿಟ್ಟಿಭ, ಪಟ್ಟೆಚಿಕ್ಕು, ಎಲೆಹಕ್ಕಿ, ನೀರುಬಾತು, ಕೆರೆಕ್ರೌಂಚ, ರಾಜಹಕ್ಕಿ, ನೀರುಬಾತು ಸೇರಿದಂತೆ ನೂರಾರು ಬಗೆಯ ಸಹಸ್ರಾರು ಪಕ್ಷಿಗಳು ವಾಸ್ತವ್ಯ ಹೂಡಿ ರಂಗನತಿಟ್ಟಿಗೆ ಕಳೆಕಟ್ಟುತ್ತವೆ.
ಪಕ್ಷಿಪ್ರೇಮಿ ಸಲೀಂ ಅಲಿ ಭೇಟಿ ನೀಡಿದ್ದರು
ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆಸುರಿದು ಪ್ರತಿಕೂಲ ಪರಿಣಾಮ ಉಂಟಾದಾಗ ಮಲೆನಾಡು ಸೇರಿದಂತೆ ದೂರದ ಊರುಗಳಿಂದ ಸುರಕ್ಷಿತ ತಾಣವಾದ ರಂಗನತಿಟ್ಟಿಗೆ ಪಕ್ಷಿಗಳು ಬರುತ್ತವೆ. ಪ್ರತಿ ವರ್ಷವೂ ಮಾರ್ಚ್ ನಿಂದ ಆರಂಭವಾಗಿ ನವೆಂಬರ್ ತನಕ ಪಕ್ಷಿಗಳು ವಲಸೆ ಬರುವುದು ಸಾಮಾನ್ಯವಾಗಿರುತ್ತದೆ. ಪಕ್ಷಿಗಳು ವಲಸೆ ಬರುವ ಪ್ರಕ್ರಿಯೆ ನೂರಾರು ವರ್ಷಗಳ ಹಿಂದೆಯೇ ನಡೆಯುತ್ತಿತ್ತು. ದೇಶ ವಿದೇಶಗಳಿಂದ ಬರುವ ಹಕ್ಕಿಗಳು ಸಂತಾನೋತ್ಪತ್ತಿ ಮಾಡಿಕೊಂಡು ಹೋಗುತ್ತಿದ್ದವು.

ರಂಗನತಿಟ್ಟಿನಲ್ಲಿ ಪಕ್ಷಿಗಳು ಬೀಡು ಬಿಟ್ಟು ಪಕ್ಷಿ ಪ್ರಪಂಚವನ್ನು ಸೃಷ್ಟಿ ಮಾಡಿದ್ದರೂ ಆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಮತ್ತು ಪಕ್ಷಿ ಪ್ರೇಮಿ ಸಲೀಂ ಆಲಿಯವರು ಇಲ್ಲಿಗೆ ಬಂದು ಹೋಗುವ ತನಕವೂ ಇದು ಖ್ಯಾತಿ ಪಡೆದಿರಲಿಲ್ಲ. 1938-40ರ ಕಾಲಾವಧಿಯಲ್ಲಿ ಮೈಸೂರಿಗೆ ಬಂದಿದ್ದ ಖ್ಯಾತ ಪಕ್ಷಿಪ್ರೇಮಿ, ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿಯವರು ರಂಗನತಿಟ್ಟಿನಲ್ಲಿ ವಿವಿಧ ಬಗೆಯ ಪಕ್ಷಿಗಳು ವಾಸ್ತವ್ಯ ಹೂಡುತ್ತಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿದ್ದರು. ರಂಗನತಿಟ್ಟಿನ ಪ್ರಾಕೃತಿಕ ಸೌಂದರ್ಯ ಹಾಗೂ ಅಲ್ಲಿನ ಹೆಮ್ಮರಗಳಲ್ಲಿ ಸಾವಿರಾರು ಪಕ್ಷಿಗಳು ನೆಲೆವೂರಿದನ್ನು ಕಂಡ ಸಲೀಂ ಆಲಿಯವರಿಗೆ ಇದನ್ಯಾಕೆ ಪಕ್ಷಿಧಾಮವೆಂದು ಘೋಷಿಸಬಾರದು? ಎಂಬ ಪ್ರಶ್ನೆ ಉದ್ಭವಿಸಿತ್ತು.
ಕಾವೇರಿ ನದಿಯಲ್ಲಿ ಆಕರ್ಷಕ ವಿಹಾರ
ಈ ಬಗ್ಗೆ ಅವರು ತಡಮಾಡದೆ ಮೈಸೂರು ಮಹಾರಾಜನರ ಗಮನಕ್ಕೆ ತಂದು ರಂಗನತಿಟ್ಟನ್ನು ರಕ್ಷಿತ ಪಕ್ಷಿಧಾಮ ಎಂದು ಘೋಷಿಸುವಂತೆ ಸಲಹೆ ನೀಡಿದರು. ಇವರ ಸಲಹೆಯನ್ನು ಪುರಸ್ಕರಿಸಿ ಕೇವಲ ಇಪ್ಪತ್ತೆಂಟು ಗಂಟೆಗಳಲ್ಲಿ ರಂಗನತಿಟ್ಟನ್ನು ಪಕ್ಷಿಧಾಮವನ್ನಾಗಿ ಘೋಷಿಸಲಾಯಿತು. ಆ ನಂತರ ಅರಣ್ಯ ಇಲಾಖೆ ಇದರ ಉಸ್ತುವಾರಿ ವಹಿಸಿಕೊಂಡಿದ್ದು ವರ್ಷದಿಂದ ವರ್ಷಕ್ಕೆ ಹಲವು ರೀತಿಯ ಅಭಿವೃದ್ಧಿ ಕಾರ್ಯವನ್ನು ಮಾಡುವ ಮೂಲಕ ಪ್ರವಾಸಿಗರಿಗೆ ಹಲವು ರೀತಿಯ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದೆ.

ಮಳೆಗಾಲದಲ್ಲಿ ಕಾವೇರಿ ಕಣಿವೆಯಲ್ಲಿ ಧಾರಾಕಾರ ಮಳೆ ಸುರಿದು ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಬಿಟ್ಟಾಗ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಹ ಉಂಟಾಗಿ ಹಲವಾರು ಪಕ್ಷಿಗಳು ಕೊಚ್ಚಿ ಹೋಗುವುದು ಮಾಮೂಲಿಯಾಗಿದೆ. ಈ ವೇಳೆ ರಂಗನತಿಟ್ಟಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತದೆ. ಮೊದಲಿಗೆ ಹೋಲಿಸಿದರೆ ಇಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ದೋಣಿಯಲ್ಲಿ ಕುಳಿತು ಕಾವೇರಿ ನದಿಯಲ್ಲಿ ವಿಹರಿಸುತ್ತಾ ಪಕ್ಷಿ ವೀಕ್ಷಣೆ ಮಾಡಲು ಇಚ್ಚಿಸುವವರಿಗಾಗಿ ಇಲ್ಲಿ ದೋಣಿ ವಿಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ರಾಕ್ ಗಾರ್ಡನ್ ಆಕರ್ಷಕವಾಗಿದೆ.
ಮೈಸೂರಿಗೆ ಸಮೀಪದಲ್ಲಿರುವ ರಂಗನತಿಟ್ಟು
ರಂಗನತಿಟ್ಟು ಮೈಸೂರು ಮಂಡ್ಯ ಹೆದ್ದಾರಿ ನಡುವೆ ಸಿಗುವ ಶ್ರೀರಂಗಪಟ್ಟಣದಿಂದ 4ಕಿ.ಮೀ., ಮೈಸೂರಿನಿಂದ 19ಕಿ.ಮೀ. ಹಾಗೂ ಬೆಂಗಳೂರಿನಿಂದ 128ಕಿ.ಮೀ ದೂರದಲ್ಲಿದೆ. ಕಾಂಕ್ರಿಟ್ ಕಾಡುಗಳ ನಡುವೆ ಬದುಕು ಸಾಗಿಸುವವರು ಪ್ರಕೃತಿ ನಡುವೆ ಹಕ್ಕಿಗಳ ಚಿಲಿಪಿಲಿಯನ್ನು ಕೇಳಿಸಿಕೊಂಡು ಕಾವೇರಿ ನದಿಯಲ್ಲಿ ವಿಹರಿಸುತ್ತಾ ಮೊಸಳೆಯಂತಹ ಧೈತ್ಯ ಪ್ರಾಣಿಗಳ ದರ್ಶನ ಮಾಡಿಕೊಂಡು ಮರಿಗಳಿಗೆ ಗುಟುಕು ನೀಡುವ, ಗೂಡು ಕಟ್ಟುವ, ಬಿಸಿಲಿಗೆ ಮೈಯೊಡ್ಡಿ ಸಂಭ್ರಮಿಸುವ ಪಕ್ಷಿಲೋಕವನ್ನು ಹತ್ತಿರದಿಂದ ನೋಡಿ ಮೈಮನ ಹಗುರವಾಗಿಸಿಕೊಳ್ಳಬಹುದಾಗಿದೆ. ಈ ಹೊಸ ವರ್ಷದ ಆರಂಭದಲ್ಲಿ ಇಲ್ಲಿಗೆ ಆಗಮಿಸಿ ಹೊಸ ವರ್ಷವನ್ನು ಪಕ್ಷಿಗಳ ಲೋಕದಲ್ಲಿ ಸ್ವಾಗತಿಸಬಹುದಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications