Vande Bharat: ಕರ್ನಾಟಕದಲ್ಲಿ ಹೊಸ ಮಾರ್ಗದಲ್ಲಿ ರೈಲು, ಸಮೀಕ್ಷೆ
ಬೆಂಗಳೂರು, ಜೂನ್ 01: ಕರ್ನಾಟಕದಲ್ಲಿ 5ಕ್ಕೂ ಹೆಚ್ಚು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸುತ್ತಿವೆ. ರಾಜ್ಯದಲ್ಲಿ ಇನ್ನೂ 10ಕ್ಕೂ ಹೆಚ್ಚು ಮಾರ್ಗದಲ್ಲಿ ಈ ಮಾದರಿ ರೈಲು ಸೇವೆ ಬೇಕು ಎಂಬ ಬೇಡಿಕೆ ಇದೆ. ಆದರೆ ಯಾವುದೇ ಹೊಸ ರೈಲು ಮಾರ್ಗ ಘೋಷಣೆಯಾಗಿಲ್ಲ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಪ್ರಾಯೋಗಿಕ ಸಂಚಾರವೂ ಮುಗಿದಿದೆ. ಸದ್ಯ ರೈಲು ಸಂಚಾರ ಆರಂಭವಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ ಇಡಲಾಗಿದೆ. ಅದಕ್ಕಾಗಿ ಸಮೀಕ್ಷೆಯೊಂದನ್ನು ನಡೆಸಲಾಗುತ್ತದೆ. ಆಸಕ್ತಿ ಇರುವ ಜನರು ತಮ್ಮ ಮಾರ್ಗದ ಬೇಡಿಕೆಯನ್ನು ಸಹ ಸಲ್ಲಿಸಬಹುದು.
ಯಾವ-ಯಾವ ಮಾರ್ಗಗಳು
* ಬೆಳಗಾವಿ-ಬೆಂಗಳೂರು-ಬೆಳಗಾವಿ
* ಬೆಂಗಳೂರು-ಮಂಗಳೂರು-ಕಾರವಾರ
* ಮೈಸೂರು-ಬೆಂಗಳೂರು-ತಿರುಪತಿ
* ಧಾರವಾಡ-ಹುಬ್ಬಳ್ಳಿ-ಹೈದರಾಬಾದ್
* ಹುಬ್ಬಳ್ಳಿ-ಬೆಳಗಾವಿ-ಪುಣೆ
* ಹುಬ್ಬಳ್ಳಿ-ಹೊಸಪೇಟೆ-ಬೆಂಗಳೂರು
* ಬೆಂಗಳೂರು-ಕಲಬುರಗಿ-ಬೆಂಗಳೂರು
* ಬೆಂಗಳೂರು-ಶಿವಮೊಗ್ಗ-ಬೆಂಗಳೂರು
* ಬೆಂಗಳೂರು-ಶಿವಮೊಗ್ಗ-ಬೆಂಗಳೂರು
* ಧಾರವಾಡ-ವಿಜಯವಾಡ-ಬೆಂಗಳೂರು
* ಧಾರವಾಡ-ವಿಜಯವಾಡ-ಧಾರವಾಡ
ಸದ್ಯ ಕರ್ನಾಟಕದಲ್ಲಿ ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ, ಬೆಂಗಳೂರು-ಹೈದರಾಬಾದ್, ಮಂಗಳೂರು-ಮಡಗಾಂವ್, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.
ಈಗಾಗಲೇ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ 8 ಬೋಗಿಗಳ ಹಲವು ವಂದೇ ಭಾರತ್ ರೈಲುಗಳನ್ನು ತಯಾರು ಮಾಡಲಾಗಿದೆ. ಇವುಗಳಲ್ಲಿ 8 ರೈಲುಗಳನ್ನು ನೈಋತ್ಯ ರೈಲ್ವೆಗೆ ಹಂಚಿಕೆ ಮಾಡಲಾಗಿದೆ. ಈ ರೈಲುಗಳನ್ನು ಯಾವ ಮಾರ್ಗದಲ್ಲಿ ಸಂಚಾರ ನಡೆಸಲಾಗುತ್ತದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಸದ್ಯ ಕರ್ನಾಟಕದಲ್ಲಿ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲುಗಳಲ್ಲಿ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆಯನ್ನು ನೀಡಿದೆ.
2023ರ ನವೆಂಬರ್‌ನಲ್ಲಿ ಬೆಂಗಳೂರು-ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರ ಸಹ ಮುಕ್ತಾಯಗೊಂಡಿದೆ. ವಂದೇ ಭಾರತ್ ರೈಲು ನಿರ್ವಹಣೆಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳು ಇಲ್ಲದ ಕಾರಣ ವಂದೇ ಭಾರತ್ ರೈಲುಗಳ ಸಂಚಾರ ಇನ್ನೂ ಸಹ ಆರಂಭವಾಗಿಲ್ಲ.
#Survey: Put your views and preference on following routes for Chair Car Vande Bharat express
— Karnataka Rail Users (@KARailway) May 31, 2024
1. Belagavi - Bengaluru - Belagavi
2. Bengaluru - Mangaluru/Karwar - Bengaluru
3. Mysuru/Bengaluru - Tirupati - Mysuru/Bengaluru
4. Dharwad/Hubballi - Hyderabad - Dharwad/Hubballi
5.…
ಕರ್ನಾಟಕದಲ್ಲಿ ಯಾವ-ಯಾವ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲುಗಳು ಓಡಲಿವೆ ಎಂಬ ಬಗ್ಗೆ ಇನ್ನೂ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಆದರೆ ನೈಋತ್ಯ ರೈಲ್ವೆ 19/7/2023ರಂದು ನಡೆದ ಸಭೆಯಲ್ಲಿ ಚರ್ಚಿಸಿದಂತೆ ಬೆಂಗಳೂರು-ಬೆಳಗಾವಿ, ಬೆಂಗಳೂರು-ಹೊಸಪೇಟೆ, ಬೆಂಗಳೂರು-ತಿರುಪತಿ, ಬೆಂಗಳೂರು-ಮುಧುರೈ, ಬೆಂಗಳೂರು-ಪುದುಚೇರಿ, ಬೆಂಗಳೂರು-ಶಿವಮೊಗ್ಗ ಮತ್ತು ಬೀದರ್-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ.
ಕರ್ನಾಟಕದ ಬಹುತೇಕ ಜಿಲ್ಲೆಗಳು ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಒಳಪಡುತ್ತವೆ. ಸದ್ಯ ಲೋಕಸಭೆ ಚುನಾವಣೆ 2024 ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಹೊಸ ರೈಲುಗಳನ್ನು ಘೋಷಣೆ ಮಾಡಲಾಗುವುದಿಲ್ಲ. ಆದರೆ ಹೊಸ ಸರ್ಕಾರ ಬಂದ ಬಳಿಕ ಹೊಸ ರೈಲುಗಳ ಸಂಚಾರಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡ ಬಳಿಕ ವಂದೇ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತದೆ. ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡಿದೆ. ರೈಲು ಸಂಚಾರವನ್ನು ಆರಂಭಿಸಬಹುದಾಗಿದೆ.
ಈಗಾಗಲೇ ನೈಋತ್ಯ ರೈಲ್ವೆ ಯಾವ-ಯಾವ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಬಹುದು ಎಂದು ಸಮೀಕ್ಷೆಯೊಂದನ್ನು ಮಾಡಿ ರೈಲ್ವೆ ಇಲಾಖೆಗೆ ಕಳಿಸಿದೆ. ಆದರೆ ಯಾವುದೇ ಹೊದ ಮಾರ್ಗದಲ್ಲಿ ರೈಲು ಓಡಿಸಲು ಇನ್ನೂ ಒಪ್ಪಿಗೆ ಸಿಕ್ಕಿಲ್ಲ.












Click it and Unblock the Notifications