ಕೆ. ಆರ್. ಪುರ ತನಕ ಮೆಮು ರೈಲು ಖಾಯಂ ವಿಸ್ತರಣೆ, ವೇಳಾಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 06; ನೈಋತ್ಯ ರೈಲ್ವೆ ಬೆಂಗಳೂರು ನಗರದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಪ್ರಯಾಣಿಕರ ಬೇಡಿಕೆಯಂತೆ ಮಾರಿಕುಪ್ಪಂ-ಬಂಗಾರಪೇಟೆ ನಡುವಿನ ವಿಶೇಷ ಮೆಮು ರೈಲನ್ನು ಕೃಷ್ಣರಾಜಪುರಂ (ಕೆ. ಆರ್. ಪುರ) ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ. ಮಾರಿಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳ ನಡುವೆ ಈ ಮೊದಲು ಸಂಚಾರ ನಡೆಸುತ್ತಿದ್ದ ವಿಶೇಷ ಮೆಮು (01793/ 01794) ರೈಲನ್ನು ಇನ್ನು ಮುಂದೆ ಮಾರಿಕುಪ್ಪಂ-ಬಂಗಾರಪೇಟೆ-ಕೃಷ್ಣರಾಜಪುರಂ ರೈಲಾಗಿ ಓಡಿಸಲಾಗುತ್ತದೆ ಎಂದು ಹೇಳಿದೆ.

ವಿಶೇಷ ಮೆಮು ರೈಲನ್ನು ಸೆಪ್ಟೆಂಬರ್ 11 ರಿಂದ ಅನ್ವಯವಾಗುವಂತೆ ಕೃಷ್ಣರಾಜಪುರಂ ನಿಲ್ದಾಣದ ತನಕ ಖಾಯಂ ಆಗಿ ವಿಸ್ತರಣೆ ಮಾಡಲು ರೈಲ್ವೆ ಮಂಡಳಿಯೂ ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜನರು ಈ ವಿಶೇಷ ಮೆಮು ರೈಲಿನ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಮಾರಿಕುಪ್ಪಂ-ಕೆ. ಆರ್. ಪುರ ರೈಲು ವೇಳಾಪಟ್ಟಿ; ಮಾರಿಕುಪ್ಪಂ-ಬಂಗಾರಪೇಟೆ ನಡುವಿನ ವಿಶೇಷ ಮೆಮು ರೈಲನ್ನು ಕೆ. ಆರ್. ಪುರ ತನಕ ಖಾಯಂ ವಿಸ್ತರಣೆ ಮಾಡಲಾಗಿದೆ. ಆದರೆ ನೈಋತ್ಯ ರೈಲ್ವೆ ವೇಳಾಪಟ್ಟಿಯ ಬದಲಾವಣೆ ಕುರಿತು ಆದೇಶದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಆದ್ದರಿಂದ ಹಿಂದಿನ ವೇಳಾಪಟ್ಟಿಯ ಅನ್ವಯವೇ ರೈಲು ಸಂಚಾರ ನಡೆಸುವ ನಿರೀಕ್ಷೆ ಇದೆ.
ರೈಲು ನಂಬರ್ 01793 ಮಾರಿಕುಪ್ಪಂ ನಿಲ್ದಾಣದಿಂದ ಬೆಳಗ್ಗೆ 9.20ಕ್ಕೆ ಹೊರಡಲಿದೆ ಮತ್ತು ಕೆ. ಆರ್. ಪುರ ನಿಲ್ದಾಣಕ್ಕೆ 11.25ಕ್ಕೆ ಆಗಮಿಸಲಿದೆ. ವಾಪಸ್ ಸಾಗುವ ಮಾರ್ಗದಲ್ಲಿ ರೈಲು ಸಂಖ್ಯೆ 01794 ಕೆ. ಆರ್. ಪುರ ಮಾರಿಕುಪ್ಪಂ ರೈಲು ಕೆ. ಆರ್. ಪುರದಿಂದ 11.35ಕ್ಕೆ ಹೊರಡಲಿದೆ. ಮಾರಿಕುಪ್ಪಂ ನಿಲ್ದಾಣಕ್ಕೆ ಮಧ್ಯಾಹ್ನ 1.35ಕ್ಕೆ ತಲುಪಲಿದೆ.
ಮಾರಿಕುಪ್ಪಂ-ಬಂಗಾರಪೇಟೆ ಮೆಮು ರೈಲನ್ನು ಕೆ. ಆರ್. ಪುರ ತನಕ ವಿಸ್ತರಣೆ ಆಗಿರುವುದರಿಂದ ಬೆಂಗಳೂರು ಮತ್ತು ಮಾರಿಕುಪ್ಪಂ ನಡುವೆ ಪ್ರತಿದಿನ ಸಂಚಾರ ನಡೆಸುವ ನೂರಾರು ಜನರಿಗೆ ಅನುಕೂಲವಾಗಲಿದೆ. ಈ ರೈಲಿಗೆ ಮಾಲೂರು ಮತ್ತು ವೈಟ್‌ಫೀಲ್ಡ್‌ನಲ್ಲಿ ನಿಲ್ದಾಣಗಳನ್ನು ನೀಡಲಾಗಿದೆ.
2019ರಲ್ಲಿ ನೈಋತ್ಯ ರೈಲ್ವೆಯು ಬಂಗಾರಪೇಟೆ-ಮಾರಿಕುಪ್ಪಂ ನಡುವೆ ವಿಶೇಷ ಮೆಮು ರೈಲನ್ನು ಪರಿಚಯಿಸಿತ್ತು. ಆಗ ಎರಡೂ ದಿಕ್ಕಿನಲ್ಲಿ ಚಿನ್ನಕೋಟೆ, ಬಿಇಎಂಎಲ್ ನಗರ, ಕೋರಮಂಡಲ್, ಊರ್ಗಾಂ ಮತ್ತು ಚಾಂಪಿಯನ್‌ನಲ್ಲಿ ನಿಲುಗಡೆ ನೀಡಲಾಗಿತ್ತು. ಈ ರೈಲನ್ನು ಕೆ. ಆರ್. ಪುರಂ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇತ್ತು.
ತಾತ್ಕಾಲಿಕ ನಿಲುಗಡೆ; ನೈಋತ್ಯ ರೈಲ್ವೆ ನಾಯಂಡಹಳ್ಳಿ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ ಮಾಡಿ ಆದೇಶ ಹೊರಡಿಸಿದೆ. ರೈಲುಗಳ ಸಂಖ್ಯೆ 06525/ 06526 ಕೆ. ಎಸ್. ಆರ್ ಬೆಂಗಳೂರು-ಮೈಸೂರು-ಕೆ. ಎಸ್. ಆರ್ ಬೆಂಗಳೂರು ಮೆಮು ವಿಶೇಷ ರೈಲುಗಳನ್ನು ನಾಯಂಡಹಳ್ಳಿ ನಿಲ್ದಾಣದಲ್ಲಿ 1 ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಸೆಪ್ಟೆಂಬರ್ 21 ರಿಂದ ಮಾರ್ಚ್ 20, 2024ರ ತನಕ ಮುಂದುವರಿಸಲು ನಿರ್ಧರಿಸಲಾಗಿದೆ.
ಅಲ್ಲದೇ ರೈಲು ಸಂಖ್ಯೆ 12975 ಮೈಸೂರು-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ವಿಕ್ರಮ್ ಗಢ ಅಲೋಟ್ ನಿಲ್ದಾಣದಲ್ಲಿ ಈ ಮೊದಲು ಸೆಪ್ಟೆಂಬರ್ 6 ರವರೆಗೆ ತಾತ್ಕಾಲಿಕ ನಿಲುಗಡೆಗೆ ಸೂಚಿಸಲಾಗಿತ್ತು. ಅದನ್ನು ಮಾರ್ಚ್ 2, 2024ರವರೆಗೆ ವಿಸ್ತರಿಸಲಾಗುತ್ತಿದೆ.
ರೈಲು ಸಂಖ್ಯೆ 12976 ಜೈಪುರ-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ವಿಕ್ರಮ್ ಗಢ ಅಲೋಟ್ ನಿಲ್ದಾಣದಲ್ಲಿ ಈ ಮೊದಲು ಸೆಪ್ಟೆಂಬರ್ 5 ರವರೆಗೆ ತಾತ್ಕಾಲಿಕ ನಿಲುಗಡೆಗೆ ಸೂಚಿಸಲಾಗಿತ್ತು, ಅದನ್ನು ಮಾರ್ಚ್ 4, 2024ರ ವರೆಗೆ ವಿಸ್ತರಿಸಲಾಗಿದೆ.












Click it and Unblock the Notifications