KKRTC Hampi Tour Package : ಕೆಎಸ್‌ಆರ್‌ಟಿಸಿಯಿಂದ ಹಂಪಿ, ಅಂಜನಾದ್ರಿ, ಸಂಡೂರಿಗೆ ವಾರಾಂತ್ಯ ಪ್ರವಾಸದ ವಿಶೇಷ ಪ್ಯಾಕೇಜ್
ವಾರಾಂತ್ಯದ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ನಿಗದಿತ ಟಿಕೆಟ್ ಪಡೆದು ಒಂದೇ ಬಸ್‌ನಲ್ಲಿ ಹೋಗಿ ನೆಚ್ಚಿನ ಸ್ಥಳಗಳನ್ನು ನೋಡಬಹುದು.
ವಿಜಯನಗರ, ಫೆಬ್ರವರಿ. 24: ವೀಕೆಂಡ್‌ನಲ್ಲಿ ಕುಟುಂಬದ ಜೊತೆಗೆ, ಸ್ನೇಹಿತರ ಜೊತೆಗೆ ಪ್ರವಾಸ ಹೋಗುವುದು ಯಾರಿಗೆ ತಾನೇ ಇಷ್ಟ ಆಗಲ್ಲ. ಆದರೆ, ಹೋಗುವ ಜಾಗಗಳಿಗೆ ಮತ್ತೆ ಮತ್ತೆ ಆಟೋ, ಬಸ್ ಹಿಡಿದು ಓಡಾಡೋಕೆ ಕಷ್ಟ ಆಗುತ್ತದೆ ಅನ್ನೋ ಕಾರಣಕ್ಕೆ ಕೆಲವರು ಟೂರ್ ಹೋಗಲು ಹಿಂದೆ ಮುಂದೆ ನೊಡುತ್ತಾರೆ. ಇದೇ ಕಾರಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಹಂಪಿಯಲ್ಲಿ ವಾರಾಂತ್ಯದ ಪ್ರವಾಸಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಈಗ ಪಕ್ಕದ ಅಂಜನಾದ್ರಿಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರವಾಸಿಗರಿಗಾಗಿ ವಿಶೇಷ ವಾರಾಂತ್ಯದ ಪ್ಯಾಕೇಜ್ ಘೋಷಿಸಿದೆ. ಹಂಪಿ - ಅಂಜನಾದ್ರಿ - ಸಂಡೂರು ಮಾರ್ಗದಲ್ಲಿ ಈ ಪ್ಯಾಕೇಜ್ ಘೋಷಿಸಲಾಗಿದ್ದು, ಪ್ರವಾಸಿಗರು ನೆಮ್ಮದಿಯಾಗಿ ವಾರಾಂತ್ಯದ ದಿನಗಳನ್ನು ಎಂಜಾಯ್ ಮಾಡಬಹುದಾಗಿದೆ.

ಈ ವಿಶೇಷ ಪ್ಯಾಕೇಜ್ ಅಡಿಯಲ್ಲಿ ವಿಶ್ವ ಪ್ರಸಿದ್ಧ ಹಂಪಿ ಜೊತೆಗೆ ಅಕ್ಕಪಕ್ಕದ ಪ್ರವಾಸಿ ಸ್ಥಳಗಳನ್ನು ಒಂದೇ ದಿನ ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ದೂರದ ಸ್ಥಳಗಳಿಂದ ಬಂಧವರಿಗೆ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಸರಿಯಾದ ಮಾಹಿತಿಯಿರುವುದಿಲ್ಲ. ಪ್ರವಾಸಿಗರಿಗೂ ಹೆಚ್ಚು ತೊಂದರೆಯಾಗುತ್ತದೆ ಮತ್ತು ಖರ್ಚು ಕೂಡ ಅಧಿಕ. ಹೀಗಾಗಿ ಪ್ರವಾಸಿಗರ ತೊಂದರೆ ಮತ್ತು ಖರ್ಚು ತಗ್ಗಿಸಲು ಕೆಕೆಆರ್‌ಟಿಸಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಹಂಪಿ ಉತ್ಸವದಿಂದ ಆರಂಭವಾಗಿರುವ ಈ ವಿಶೇಷ ಬಸ್ ಪ್ಯಾಕೇಜ್‌ಜ್‌ನಲ್ಲಿ ವಾರಾಂತ್ಯದಲ್ಲಿ ಹತ್ತಕ್ಕೂ ಹೆಚ್ಚು ಬಸ್‌ಗಳು ಓಡಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಾರಾಂತ್ಯದ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ನಿಗದಿತ ಟಿಕೆಟ್ ಪಡೆದು ಒಂದೇ ಬಸ್‌ನಲ್ಲಿ ಹೋಗಿ ನೆಚ್ಚಿನ ಸ್ಥಳಗಳನ್ನು ನೋಡಬಹುದು. ಈಗಾಗಲೇ ಪ್ಯಾಕೇಜ್ ಆರಂಭಿಸಲಾಗಿದ್ದು, ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗಿದೆ. ಹಂಪಿ ನೋಡಲು ಬಂದವರು ಬೇರೆ ಸ್ಥಳಗಳಿಗೆ ಹೋಗಲು ಆಗದೇ ವಾಪಸ್ ತೆರಳುತ್ತಾರೆ. ಆದರೆ, ಕೆಕೆಆರ್‌ಟಿಸಿ ವಿಶೇಷ ಪ್ಯಾಕೇಜ್ ಕಾರಣದಿಂದ ಹಂಪಿ ಜೊತೆಗೆ ಪ್ರವಾಸಿಗರು ಸುತ್ತಮುತ್ತಲಿನ ಹಲವು ಸ್ಥಳಗಳನ್ನು ನೋಡಬಹುದು ಎಂಬುದು ಕೆಕೆಆರ್‌ಟಿಸಿ ವಿಶ್ವಾಸ.

ಈ ವಿಶೇಷ ಪ್ಯಾಕೇಜ್ ಮೂರು ರೀತಿಯಲ್ಲಿ ಪ್ರವಾಸಿಗರಿಗೆ ಲಭ್ಯವಿದ್ದು, ಮೂರಕ್ಕೂ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.
1. ಮೊದಲ ಪ್ಯಾಕೇಜ್‌ನಲ್ಲಿ ಹಂಪಿ, ವಿಜಯ ವಿಠ್ಠಲ ದೇವಸ್ಥಾನ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ಕೊಪ್ಪಳ ತಾಲೂಕಿನ ಹುಲಗಿ ಮತ್ತು ತುಂಗಭದ್ರಾ ಜಲಾಶಯ ವೀಕ್ಷಿಸಬಹುದು.
2. ಎರಡನೇ ಪ್ಯಾಕೇಜ್‌ನಲ್ಲಿ ಹಂಪಿ, ವಿಜಯ ವಿಠ್ಠಲ ದೇವಸ್ಥಾನ, ಕಮಲಾಪುರ ವಸ್ತು ಸಂಗ್ರಹಾಲಯ, ಪ್ರಾಣಿ ಸಂಗ್ರಹಾಲಯ, ದರೋಜಿ ಕರಡಿಧಾಮ ಮತ್ತು ಟಿ.ಬಿ.ಡ್ಯಾಮ್ ವೀಕ್ಷಿಸಬಹುದು
3. ಮೂರನೇ ಪ್ಯಾಕೇಜ್‌ನಲ್ಲಿ ಸಂಡೂರು ಕುಮಾರಸ್ವಾಮಿ ದೇವಸ್ಥಾನ, ಗಂಡಿನರಸಿಂಹ ದೇವಸ್ಥಾನ, ಶಿಖರ ವೀಕ್ಷಣೆ, ಅರಮನೆ ವೀಕ್ಷಣೆ, ನಾರಿಹಳ್ಳ ಜಲಾಶಯ ಮತ್ತು ತುಂಗಭದ್ರಾ ಜಲಾಶಯ ವೀಕ್ಷಿಸಬಹುದು.
*ವಿಶೇಷ ಟೂರ್ ಪ್ಯಾಕೇಜ್ ದರ*
ಈ ವಾರಾಂತ್ಯದ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ ಒಂದು ದಿನದ ಪ್ರಯಾಣಕ್ಕೆ 350 ರೂಪಾಯಿ ಮತ್ತು ಮಕ್ಕಳಿಗೆ 200 ರೂಪಾಯಿ ನಿಗದಿಪಡಿಸಲಾಗಿದೆ. ಶನಿವಾರ ಮತ್ತು ಭಾನುವಾರ ಬೆಳಗ್ಗೆ 8 ರಿಂದ ಆರಂಭವಾಗುವ ಪ್ರವಾಸ, ರಾತ್ರಿ 8 ಗಂಟೆಯವರೆಗೂ ಇರಲಿದೆ. ಈ ಬಸ್‌ಗಳಲ್ಲಿ ಪ್ರವಾಸಿ ಮಾರ್ಗದರ್ಶಿ ಸೇವೆಯನ್ನೂ ಪ್ರವಾಸೋದ್ಯಮ ಇಲಾಖೆ ಒದಗಿಸಿದೆ. ಒಂದು ಬಸ್‌ನಲ್ಲಿ 15 ಮಂದಿ ಪ್ರವಾಸಿಗರು ಇದ್ದರೇ ತುಂಬಿದರೆ ಬಸ್ ಸಂಚಾರ ಆರಂಭಿಸಲಾಗುತ್ತದೆ.












Click it and Unblock the Notifications