ರಾಜ್ಯದಲ್ಲೇ ಅತೀ ಉದ್ದದ ಗಾಜಿನ ಸೇತುವೆ ಇರೋದೆ ಈ ಜಿಲ್ಲೆಯಲ್ಲಿ, ವಿಶೇಷತೆ ಏನು?, ಇಲ್ಲಿದೆ ವಿವರ

ಕೊಡಗು, ಜೂನ್‌, 19: ಮಂಜಿನ ನಗರಿ ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಎಂಥವರೂ ಮಾರುಹೋಗಿಬಿಡುತ್ತಾರೆ. ಇದೀಗ ಮತ್ತೇ ಜಿಲ್ಲೆಯ ಈ ಪ್ರದೇಶದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಗಾಜಿನ ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಅಷ್ಟಕ್ಕೂ ಇದರ ಉದ್ದೇಶ ಏನು ಮತ್ತು ನಿರ್ಮಾಣ ಮಾಡಿದವರು ಯಾರು ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ.. ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ.. ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ.. ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ.. ಇದೇ ರೀತಿಯ ಪ್ರಕೃತಿ ಸೌಂದರ್ಯ ಇರುವುದೇ ಕೊಡಗು ಜಿಲ್ಲೆಯಲ್ಲಿ.

Karnatakas Longest glass bridge inaugurated in Udoth Motte village of Kodagu district

ಅಲ್ಲೆ ಆ ಕಡೆ ನೋಡಲಾ

ಅಲ್ಲೆ ಕೊಡಗರ ನಾಡಲಾ

ಅಲ್ಲೆ ಕೊಡಗರ ಬೀಡಲಾ

ಇದು ಕವಿ ಪಂಜೆ ಮಂಗೇಶರಾವ್ ಅವರು ಕೊಡಗಿನ ನಿಸರ್ಗದ ಸುಂದರತೆಯ ಕುರಿತಂತೆ ಬರೆದ ಕವಿತೆಯಾಗಿದೆ. ಕೊಡಗಿನ ನಿಸರ್ಗ ಸೌಂದರ್ಯವೇ ಹಾಗೆ. ಅದು ಕಣ್ಣು ತಣಿಯದಷ್ಟು ಅಂದವನ್ನು ಚೆಲ್ಲುತ್ತಾ ಹೋಗುತ್ತದೆ. ನಗರದಾಚೆಗೆ ಒಂದಷ್ಟು ದೂರ ಸಾಗಿ ಬಿಟ್ಟರೆ ಬೆಟ್ಟಗುಡ್ಡ, ಭತ್ತದ ಬಯಲು, ಕಾಫಿ ತೋಟಗಳ ನಡುವಿನ ಪ್ರಶಾಂತತೆ ನೋಡುಗರನ್ನು ಮೈಮರೆಸಿ ಬಿಡುತ್ತದೆ.

ಇನ್ನು ಹಾಗೆ ಸುಮ್ಮನೆ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ದೂರದಲ್ಲಿ ಸಾಲು ಸಾಲಾಗಿ ನಿಂತು ಬಾನಿಗೆ ಮುತ್ತಿಕ್ಕುತ್ತಿವೆಯೇನೋ ಎಂಬಂತೆ ಭಾಸವಾಗುವ ಪರ್ವತ ಶ್ರೇಣಿಗಳು. ಅವುಗಳ ಇಳಿಜಾರು ಕಂದಕಗಳಲ್ಲಿ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು. ಕಾಫಿ ತೋಟಗಳ ನಡುವಿನ ಗದ್ದೆ ಬಯಲುಗಳು.. ಮರ ಕಾಡುಗಳ ಮಧ್ಯೆ ತಲೆ ಎತ್ತಿ ನಿಂತ ಮನೆಗಳು.. ಅಂಕುಡೊಂಕಾಗಿ ಹಾದು ಹೋದ ರಸ್ತೆಗಳು ಇವೆಲ್ಲವೂ ನೋಡುಗರ ಕಣ್ಣಿಗೆ ಹಬ್ಬವಾಗಿವೆ.

ಇನ್ನು ಇಲ್ಲಿನ ಹಕ್ಕಿಗಳ ಚಿಲಿಪಿಲಿ ಇಂಚರ, ಜೇನು ನೊಣಗಳ ಝೇಂಕಾರ ಹೊರತಾಗಿ ನೀರವ ಮೌನ ನಮ್ಮನ್ನು ಸುತ್ತು ಬಳಸಿ ಪ್ರಕೃತಿ ಒಡಲಲ್ಲಿ ಬಂಧಿಯಾಗಿಸಿ ಬಿಡುತ್ತದೆ.

Karnatakas Longest glass bridge inaugurated in Udoth Motte village of Kodagu district

ಪ್ರವಾಸಿಗರ ಆಕರ್ಷಿಸುವ ಹೋಂ ಸ್ಟೇಗಳು

ಹೋಂಸ್ಟೇ, ರೆಸಾರ್ಟ್‍ಗಳು ಆರಂಭವಾದ ಬಳಿಕ ಕೊಡಗಿನ ನಿಸರ್ಗದ ನಡುವೆ ಕಾಲ ಕಳೆಯಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವಾರಪೂರ್ತಿ ಪಟ್ಟಣದ ಗೌಜು ಗದ್ದಲದಲ್ಲಿ ಕಾಲ ಕಳೆದವರು ಒಂದಷ್ಟು ಸಮಯವನ್ನು ಪ್ರಶಾಂತ ವಾತಾವರಣಲ್ಲಿ ಕಳೆಯಬೇಕೆಂಬ ಹಂಬಲದಿಂದ ಬರುತ್ತಿರುತ್ತಾರೆ. ಹೀಗೆ ಬಂದವರು ಬೆಟ್ಟಗುಡ್ಡಗಳ ನಡುವಿನ ಸುಂದರ ಪ್ರದೇಶದಲ್ಲಿರುವ ಹೋಂಸ್ಟೇ, ರೆಸಾರ್ಟ್‍ಗಳಲ್ಲಿ ಬೀಡು ಬಿಡುತ್ತಾರೆ.

ಕೊಡಗಿನಲ್ಲಿ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಲೇ ಇದೆ. ಜತೆಗೆ ಹೋಂಸ್ಟೇ, ರೆಸಾರ್ಟ್‍ಗಳು ಎಲ್ಲೆಂದರಲ್ಲೇ ತಲೆ ಎತ್ತುತ್ತಿವೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ಆದೇಶಗಳಿವೆ. ಈಗಿದ್ದರೂ ಅನಧಿಕೃತ ಹೋಂಸ್ಟೇಗಳಿಗೆ ಬರವಿಲ್ಲ. ಇದೆಲ್ಲದರ ನಡುವೆ ದೂರದಿಂದ ಬರುವ ಪ್ರವಾಸಿಗರನ್ನು ತಮ್ಮೆಡೆಗೆ ಆಕರ್ಷಿಸುವುದು ಕೂಡ ಹೋಂಸ್ಟೇಗಳಿಗೆ ಸುಲಭವಾಗಿ ಉಳಿದಿಲ್ಲ. ಅವರು ಇಷ್ಟಪಡುವ ಆಹಾರಗಳು ಮಾತ್ರವಲ್ಲದೆ, ಅವರ ಮೈಮನಕ್ಕೂ ಖುಷಿಕೊಡುವ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಾಗಿದೆ.

ಉಡೋತ್ ಮೊಟ್ಟೆಯಲ್ಲಿ ಗಾಜಿನ ಸೇತುವೆ

ಇನ್ನು ಕೆಲವು ಹೋಂಸ್ಟೇಗಳು ನಿಸರ್ಗ ತಾಣಗಳ ಬಳಿ ಇರುವುದರಿಂದ ತಮ್ಮಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕರೆದೊಯ್ದು ದೇಗುಲ, ಫಾಲ್ಸ್, ಬೆಟ್ಟಗುಡ್ಡಗಳನ್ನು ತೋರಿಸಿಕೊಂಡು ಬರುತ್ತಾರೆ. ಮತ್ತೆ ಕೆಲವರು ಕೇವಲ ವಾಸ್ತವ್ಯದ ಜವಬ್ದಾರಿಯನ್ನಷ್ಟೆ ವಹಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ತೋಟದ ಮಾಲೀಕರು ತಮ್ಮ ತೋಟಗಳಲ್ಲಿ ಹೋಂಸ್ಟೇಗಳನ್ನು ನಿರ್ಮಿಸಿ ಅಲ್ಲಿಯೇ ಪ್ರವಾಸಿಗರು ಖುಷಿ ಪಡಲು ಏನೇನು ಬೇಕೋ ಅದೆಲ್ಲವನ್ನು ವ್ಯವಸ್ಥೆ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆ ಮಡಿಕೇರಿಗೆ 10 ಕಿಲೋ ಮೀಟರ್‌ ದೂರದ ಭಾಗಮಂಡಲ ರಸ್ತೆಯಲ್ಲಿರುವ ಉಡೋತ್ ಮೊಟ್ಟೆ ಎಂಬ ಗ್ರಾಮದಲ್ಲಿ ಕಾಫಿ ಬೆಳೆಗಾರರೊಬ್ಬರು ಗುಡ್ಡದ ಮೇಲಿಂದ ನಿಂತು ಸುತ್ತಲಿನ ಪ್ರಕೃತಿಯ ವಿಹಂಗಮ ನೋಟವನ್ನು ವೀಕ್ಷಿಸಲು ಅನುಕೂಲವಾಗುವಂತೆ ಗಾಜಿನ ಸೇತುವೆಯ ವೀಕ್ಷಣಾ ತಾಣವನ್ನು ನಿರ್ಮಿಸಿದ್ದಾರೆ. ಇದು ಈಗ ಎಲ್ಲರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ.

ರೋಮಾಂಚನಕಾರಿ ಪ್ರಕೃತಿ ನೋಟ

ಉಡೋತ್ ಮೊಟ್ಟೆ ನಿವಾಸಿ ವಸಂತ್ ಎಂಬುವವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈ ಸೇತುವೆಯನ್ನು ನಿರ್ಮಿಸಿರುವುದು ವಿಶೇಷವಾಗಿದೆ. ಇನ್ನು ಉಡೋತ್ ಮೊಟ್ಟೆ ಎನ್ನುವ ಗ್ರಾಮ ಬೆಟ್ಟಗುಡ್ಡಗಳಿಂದ ಕೂಡಿದ್ದು, ಈ ಬೆಟ್ಟಗಳ ನಡುವೆ ಕಾಫಿ ತೋಟಗಳು, ಗದ್ದೆಗಳು ಅದರಾಚೆಗೆ ಬೆಟ್ಟಗಳ ಸಾಲು ಮತ್ತು ಮಡಿಕೇರಿಯನ್ನಾವರಿಸಿದ ಬೆಟ್ಟಗಳು ಕಾಣಿಸುತ್ತವೆ.

ವಸಂತ್ ಅವರು ಕಾಫಿ ತೋಟ ಹೊಂದಿದ್ದು, ಇದರೊಂದಿಗೆ ಹೋಂಸ್ಟೇ ಕೂಡ ನಡೆಸುತ್ತಿದ್ದಾರೆ. ಹಾಗೆಯೇ ತಮ್ಮ ತೋಟದಿಂದಲೇ ಕಂಡು ಬರುವ ನಿಸರ್ಗ ಸುಂದರ ದೃಶ್ಯಗಳನ್ನು ದೂರದಿಂದ ಬರುವ ಪ್ರವಾಸಿಗರಿಗೆ ಉಣಬಡಿಸುವ ಸಲುವಾಗಿ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಿ ಗಮನ ಸೆಳೆಸಿದ್ದಾರೆ.

ಕಾಫಿ ತೋಟದ ನಡುವೆ ಸುಮಾರು ಎಪ್ಪತ್ತೆಂಟು ಅಡಿ ಕಂದಕದ ಕೆಳಗಿನಿಂದ ಕಬ್ಬಿಣದ ಫಿಲ್ಲರ್ ನಿರ್ಮಿಸಿ ಅದರ ಮೇಲೆ 33 ಎಂಎಂ ದಪ್ಪದ ಗಾಜನ್ನು ಬಳಸಿ ಸೇತುವೆ ನಿರ್ಮಿಸಿದ್ದಾರೆ. ಈ ಸೇತುವೆ ನಿರ್ಮಾಣದ ಹಿಂದೆ ಕೇರಳ ತಂತ್ರಜ್ಞರ ಕೈಚಳಕ ಮತ್ತು ಶ್ರಮವಿದೆ. ಸುಮಾರು 33 ಮೀಟರ್ ಉದ್ದದ ಈ ಸೇತುವೆಯ ಅಂಚಿನಲ್ಲಿ ಪ್ರವಾಸಿಗರು ನಿಂತು ಪ್ರಕೃತಿ ಚೆಲುವನ್ನು ಕಣ್ತುಂಬಿಸಿಕೊಳ್ಳಲು ವೃತ್ತಾಕಾರದ ಜಾಗವಿದೆ. ಇಲ್ಲಿ ತಡೆಗೋಡೆಯಿದ್ದು, ಇಲ್ಲಿಂದ ನಿಂತು ಸುಂದರ ದೃಶ್ಯಗಳನ್ನು ಸವಿಯಬಹುದಾಗಿದೆ.

ಇದು ಕರ್ನಾಟಕದಲ್ಲೆ ಅತೀ ಉದ್ದದ ಗಾಜಿನ ಸೇತುವೆ

ಇನ್ನು ಈ ಗಾಜಿನ ಸೇತುವೆ ಮೇಲೆ ಹೆಜ್ಜೆಯಿಡುತ್ತಾ ಸಾಗುವುದು ಕೂಡ ಒಂದು ರೋಮಾಂಚನಕಾರಿ ಅನುಭವ ಎಂದರೆ ತಪ್ಪಾಗಲಾರದು. ಆರಂಭದ ಹೆಜ್ಜೆಯಿಡುವಾಗ ಎದೆ ಬಡಿತ ಕಾಣಿಸಿದರೂ ಮುಂದೆ ಹೋಗುತ್ತಾ ಸುತ್ತಲೂ ಕಂಡು ಬರುವ ಪ್ರಕೃತಿಯ ನೋಟ ನಮ್ಮಲ್ಲಿದ್ದ ಭಯವನ್ನೆಲ್ಲ ದೂರ ಮಾಡಿ ಉಲ್ಲಾಸ ತುಂಬುತ್ತದೆ.

ಈ ಸೇತುವೆ ಮೇಲೆ 40 ಮಂದಿ ನಿಂತು ಇಲ್ಲಿನ ಅಚ್ಚಹಸಿರಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಒಮ್ಮೆಗೆ ಕೇವಲ ಆರು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೆ ಒಬ್ಬರಿಗೆ 200 ರೂಪಾಯಿನಂತೆ ಶುಲ್ಕವನ್ನು ಕೂಡ ನಿಗದಿಪಡಿಸಲಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಗಾಜಿನ ಸೇತುವೆ ಹೆಚ್ಚಿನ ಪ್ರವಾಸಿಗರನ್ನು ತನ್ನ ಸೆಳೆಯುತ್ತಲೇ ಇದೆ. ಇದನ್ನು ನೋಡುವ ಮತ್ತು ಅದರ ಮೇಲೆ ನಿಂತು ನಿಸರ್ಗದ ಸುಂದರ ಚೆಲುವನ್ನು ಸವಿಯುವ ಸಲುವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇತ್ತ ಹೆಜ್ಜೆ ಹಾಕುತ್ತಿದ್ದಾರೆ. ಸದ್ಯಕ್ಕೆ ಇದು ಕರ್ನಾಟಕದ ಮೊದಲ ಉದ್ದದ ಗಾಜಿನ ಸೇತುವೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+