ಕರ್ನಾಟಕ ಬಜೆಟ್, ಪ್ರವಾಸೋದ್ಯಮಕ್ಕೆ ಬಂಪರ್ ಕೊಡುಗೆ
ಬೆಂಗಳೂರು, ಮಾರ್ಚ್ 07: ಕರ್ನಾಟಕದ ಮುಖ್ಯಮಂತ್ರಿ, ಹಣಕಾಸು ಸಚಿವ ಸಿದ್ದರಾಮಯ್ಯ ಮಾರ್ಚ್ 7ರ ಸಿದ್ದರಾಮಯ್ಯ ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ 4,09,549 ಲಕ್ಷ ಕೋಟಿ ರೂ.ಗಳು. 16ನೇ ಬಾರಿಗೆ ಬಜೆಟ್ ಮಂಡನೆ ಮಾಡುವ ಮೂಲಕ ಸಿದ್ದರಾಮಯ್ಯ ಹೊಸ ದಾಖಲೆ ಬರೆದಿದ್ದಾರೆ.
ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಲವು ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ನೂತನ ಪ್ರವಾಸೋದ್ಯಮ ನೀತಿ 2024-29 ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ವಿವರಗಳನ್ನು ನೀಡಿದ್ದಾರೆ.

ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರವಾಸೋದ್ಯಮ ವಲಯದ ವಿಪುಲ ಅವಕಾಶ ಮತ್ತು ಸಾಮರ್ಥ್ಯದ ಸದ್ಭಳಕೆ ಮಾಡಿಕೊಳ್ಳಲು ನೂತನ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೊಳಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಆಶಾದಾಯಕ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಆದ್ಯತೆಯ ವಲಯವಾಗಿಸುವ ಉದ್ದೇಶ ಹೊಂದಿರುವ ಈ ನೀತಿಯಿಂದ ರಾಜ್ಯದಲ್ಲಿ 8000 ಕೋಟಿ ರೂ. ಹೂಡಿಕೆಯ ನಿರೀಕ್ಷೆ ಹಾಗೂ 1.5 ಲಕ್ಷ ಉದ್ಯೋಗ ಸೃಜನೆಯ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರದ ಘೋಷಣೆಗಳು
* ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳವಾದ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಹಾಗೂ ಬೆಂಗಳೂರಿನಲ್ಲಿರುವ ದೇವಿಕಾರಾಣಿ ರೋರಿಚ್ ಎಸ್ಟೇಟ್ ಅನ್ನು ವಿಶೇಷ ಬಂಡವಾಳ ಯೋಜನೆಯಡಿ ಒಟ್ಟಾರೆ 199 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
* ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು 2025-26ನೇ ಸಾಲಿನಲ್ಲಿ 50 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
* ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು (Highway Hubs) ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು.
* UNESCO ಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವ ಬೇಲೂರು-ಹಳೇಬೀಡು-
ಸೋಮನಾಥಪುರ ಪ್ರವಾಸಿ ತಾಣಗಳಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
* ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸಿ ತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರಿಗೆ ತರಬೇತಿ ನೀಡಿ ಅವರ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸಲಾಗುವುದು ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡಲು 24X7 ಪ್ರವಾಸಿ ಸಹಾಯವಾಣಿ ತೆರೆಯಲಾಗುವುದು.
* ರಾಜ್ಯದ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಸೃಷ್ಟಿಸಲು 25 ಸ್ಮಾರಕಗಳನ್ನು ದತ್ತು ನೀಡಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಸ್ಮಾರಕಗಳನ್ನು 'ನಮ್ಮ ಸ್ಮಾರಕ' ಡಿಜಿಟಲ್ ವೇದಿಕೆಯ ಮುಖಾಂತರ ದತ್ತು ನೀಡಲು ಉದ್ದೇಶಿಸಲಾಗಿದೆ.
* ರಾಜ್ಯದ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ONE-TAC Digital Grid ಅನ್ನು ಉಪಯೋಗಿಸಲಾಗುವುದು.
* ಐತಿಹಾಸಿಕ ಲಕ್ಕುಂಡಿಯಲ್ಲಿನ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಹಾಗೂ ಪ್ರಾಚ್ಯಾವಶೇಷಗಳ ಸಂರಕ್ಷಣೆಗಾಗಿ ಬಯಲು ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಲಾಗುವುದು.
* ರಾಜ್ಯದ ಸಂಸ್ಕೃತಿ, ನಾಗರಿಕತೆಯ ಉಗಮ, ವಿಕಾಸಗಳೂ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಸಂಗತಿಗಳನ್ನು ಬಿಂಬಿಸುವ ರಾಜ್ಯ ಮಟ್ಟದ ವಸ್ತು ಸಂಗ್ರಹಾಲಯವನ್ನು ಮೈಸೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗುತ್ತದೆ.












Click it and Unblock the Notifications