ಕರಾವಳಿ-ತಿರುಪತಿಗೆ ಸಂಚಾರ ಈಗ ಸುಲಭ, ರೈಲು ಸೇವೆ ವಿಸ್ತರಣೆ ಮಾಹಿತಿ
ಉಡುಪಿ, ಅಕ್ಟೋಬರ್ 09: ಕರ್ನಾಟಕದ ಕರಾವಳಿಯಿಂದ ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಸಿಹಿಸುದ್ದಿ. ಭಾರತೀಯ ರೈಲ್ವೆ ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಲೋಕಸಭೆ ಚುನಾವಣೆ 2024ರ ಬಳಿಕ ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಕರಾವಳಿ ಭಾಗದ ಜನರ ಈ ಬಹುದಿನದ ಬೇಡಿಕೆಗೆ ಈಗ ಒಪ್ಪಿಗೆ ಸಿಕ್ಕಿದೆ.
ಈ ಕುರಿತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ಮುರುಡೇಶ್ವರ, ಕುಂದಾಪುರ, ಉಡುಪಿ, ಮೂಲ್ಕಿ ಭಾಗದಿಂದಲೂ ತಿರುಪತಿಗೆ ತೆರಳಲು ಭಕ್ತರು ಈ ರೈಲು ಬಳಸಬಹುದು ಎಂದು ಹೇಳಿದ್ದಾರೆ.

ಸಂಸದರು ಫೇಸ್‌ಬುಕ್ ಪೋಸ್ಟ್ ಹಾಕಿದ್ದು, 'ಈ ವಿಷಯವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಸಂತಸಪಡುತ್ತೇನೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕರಾವಳಿ ಭಾಗದಿಂದ ತಿರುಪತಿಗೆ ಸಂಪರ್ಕಿಸುವ ರೈಲು ಯೋಜನೆಯ ಬಗ್ಗೆ ಬೇಡಿಕೆ ಕೇಳಿ ಬಂದಿತ್ತು.ಸಂಸದನಾದ ನೂರು ದಿನದೊಳಗೆ ಈ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದ್ದೆ. ಈ ಬಗ್ಗೆ ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ.ಸೋಮಣ್ಣರವರ ಬಳಿ ವಿಸ್ತೃತವಾದ ವಿವರಣೆಯೊಂದಿಗೆ ಮನವಿ ಸಲ್ಲಿಸಿದ್ದೆ' ಎಂದು ತಿಳಿಸಿದ್ದಾರೆ.
'ಇದೀಗ ನಮ್ಮ ಬೇಡಿಕೆ ಈಡೇರಿದೆ. ಇನ್ನುಮುಂದೆ ಮುರುಡೇಶ್ವರ, ಕುಂದಾಪುರ, ಉಡುಪಿ, ಮೂಲ್ಕಿ ಭಾಗದಿಂದಲೂ ತಿರುಪತಿಗೆ ತೆರಳಲು ರೈಲು ಬಳಸಬಹುದು. ನಮ್ಮ ಬೇಡಿಕೆಯನ್ನು ಗೌರವಿಸಿ ಆದೇಶ ಹೊರಡಿಸಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀ ವಿ.ಸೋಮಣ್ಣ ಹಾಗೂ ರೈಲ್ವೆ ಇಲಾಖಾ ಅಧಿಕಾರಿಗಳಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.
ಸಚಿವರ ಪತ್ರ: ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿರುವ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಪತ್ರವನ್ನು ಬರೆದಿದ್ದಾರೆ.
ಪತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರೇ ನಿಮ್ಮ ಪತ್ರ ದಿನಾಂಕ 29/8/2024ರಂದು ರೈಲು ನಂಬರ್ 12789/ 12790 ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲು ವಿಸ್ತರಣೆಗೆ ಮನವಿ ಸಲ್ಲಿಸಿದ್ದೀರಿ.
ರೈಲು ನಂಬರ್ 12789/ 12790 ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲುನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಪತ್ರದಲ್ಲಿ ಸಚಿವರು ಹೇಳಿದ್ದಾರೆ.
ಕರಾವಳಿ ತಿರುಪತಿ ನಂಟು: ಸಂಸದ ಕೋಟ ಶ್ರೀನಿವಾಸ ಪೂಜಾರಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದು, 'ಮಂಗಳೂರಿನ ಧರ್ಮಸ್ಥಳ, ಕಟೀಲು, ಪೊಳಲಿ, ಕದ್ರಿ ದೇಗುಲಗಳು, ಉಡುಪಿಯ ಶ್ರೀ ಕೃಷ್ಣ ಮಠ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕುಂದಾಪುರ ಭಾಗದ ಮಹಾಗಣಪತಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹೀಗೆ ಹತ್ತು ಹಲವು ತೀರ್ಥ ಕ್ಷೇತ್ರಗಳನ್ನೊಳಗೊಂಡ ಕರಾವಳಿ ಭಾಗದಿಂದ ಪುಣ್ಯಕ್ಷೇತ್ರ ತಿರುಪತಿಗೆ ರೈಲು ಸಂಪರ್ಕ ಸಾಧ್ಯವಾದರೆ ಅನೇಕ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ' ಎಂದು ಹೇಳಿದ್ದಾರೆ.
'ಸಾಧಾರಣ ದಕ್ಷಿಣ ಭಾರತದ ತೀರ್ಥ ಕ್ಷೇತ್ರದ ದರ್ಶನ ಆದ ಹಾಗೆ ಆಗುತ್ತದೆ. ಅದರಲ್ಲೂ ಕರಾವಳಿ ಭಾಗದ ಪ್ರತೀ ಹಿಂದೂವಿನ ಮನೆಗೂ ತಿರುಪತಿ ತಿಮ್ಮಪ್ಪನ ಭಾವನಾತ್ಮಕ ಸಂಬಂಧವಿದೆ. ಪ್ರತೀ ಮನೆಯಿಂದ ತಿರುಪತಿಗೆ ಕಾಣಿಕೆ ಸಲ್ಲುತ್ತದೆ. ಹೀಗಾಗಿ ಕರಾವಳಿ ಭಾಗದಿಂದ ತಿರುಪತಿಗೆ ರೈಲು ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಸಕಾರಾತ್ಮಕ ಅಧ್ಯಯನ ನಡೆಸಿದ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆದಷ್ಟು ಶೀಘ್ರ ಈ ಬೇಡಿಕೆ ಈಡೇರುವ ವಿಶ್ವಾಸವಿದೆ' ಎಂದು ಹೇಳಿದ್ದರು. ಈಗ ಈ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ.












Click it and Unblock the Notifications