ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಸ್ಥಗಿತ
ಚಾಮರಾಜನಗರ, ಅಕ್ಟೋಬರ್, 16: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ದೊಡ್ಡ ತಿರುವು ಸೇರಿದಂತೆ ಹಲವು ಕಡೆ ರಸ್ತೆ ಕೊರಕಲು ಉಂಟಾಗಿದೆ. ಆದ್ದರಿಂದ ಮುಂಜಾಗ್ರತೆ ಕ್ರಮವಾಗಿ ಬೆಟ್ಟಕ್ಕೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ಮೂರು ದಿನಗಳಿಂದಲೂ ನಿರಂತವಾಗಿ ಮಳೆ ಸುರಿದ ಕಾರಣ, ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮಳೆ ನೀರು ಹರಿದು ರಸ್ತೆಯ ಎರಡು ಬದಿಯಲ್ಲಿ ಕೊರಕಲು ಉಂಟಾಗಿದೆ. ಈ ಹಿನ್ನೆಲೆ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿರ್ಬಂಧಿಸಲಾಗಿದೆ. ಇದರಿಂದ ಸಾವಿರಾರು ಪ್ರವಾಸಿಗರು ಬಂದ ದಾರಿಯಲ್ಲಿ ಸುಂಕವಿಲ್ಲ ಎಂಬಂತೆ ವಾಪಸ್ ತೆರಳಿದ್ದಾರೆ. ಇಂದು ಭಾನುವಾರವಾದ ಹಿನ್ನೆಲೆ ಮೈಸೂರು, ಬೆಂಗಳೂರು ಸೇರಿದಂತೆ ನೆರೆಯ ತಮಿಳುನಾಡು, ಕೇರಳದಿಂದ ಸಾವಿರಾರು ಜನ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಆಗಮಿಸಿದ್ದರು. ಆದರೆ ಬೆಟ್ಟಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿರುವ ಕಾರಣ ಭಕ್ತಾದಿಗಳು ಹಾಗೂ ಪ್ರವಾಸಿಗರು ವಿಧಿಯಿಲ್ಲದೆ ವಾಪಸ್ ತೆರಳುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ, ಜನಾಕ್ರೋಶ
ಇನ್ನು ಹಂಗಳ ಗ್ರಾಮದ ಪ್ರವೇಶ ದ್ವಾರದಲ್ಲಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಂತಿದ್ದು, ಈ ಮಾರ್ಗವಾಗಿ ಬರುವ ಬಸ್‌ಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಗುಂಡಿ ಬಿದ್ದಿತ್ತು. ಇದನ್ನು ದುರಸ್ತಿ ಪಡಿಸದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಈ ಹಿನ್ನೆಲೆ ಇದೀಗ ಅದೇ ಸಣ್ಣ ಗುಂಡಿಗಳು ದೊಡ್ಡದಾಗಿ ಮಾರ್ಪಟ್ಟಿವೆ. ಈ ಕಾರಣದಿಂದ ಬೆಟ್ಟಕ್ಕೆ ಬಸ್ ಸಂಚಾರ ನಿಲ್ಲಿಸಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.











Click it and Unblock the Notifications