ಬೂದಿ ಮುಚ್ಚಿದ ಕೆಂಡವಾದ ಮಲ್ಪೆ ಬಂದರು: ನಿಲ್ಲದ ಮೀನುಗಾರರ ಆಕ್ರೋಶ
ಉಡುಪಿ, ಮಾರ್ಚ್ 24: ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದೆ. ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಐದು ಜನ ಮೀನುಗಾರರನ್ನು ಬಂಧಿಸಿ ಜಾತಿ ನಿಂದನೆ ಕೇಸ್ ಕೂಡ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೀನುಗಾರರು ಆಕ್ರೋಶಗೊಂಡಿದ್ದು, ಮೀನುಗಾರಿಕೆ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದ ಹಿನ್ನಲೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅನಗತ್ಯವಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಮಲ್ಪೆ ಬಂದರಿನ ಮೀನುಗಾರರು ಪೊಲೀಸ್ ಇಲಾಖೆ ವಿರುದ್ಧ ಸಿಡಿದೆದ್ದಿದ್ದಾರೆ. ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ತಪ್ಪು ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಅನಗತ್ಯ ಜಾತಿ ನಿಂದನೆ ಕೇಸು ದಾಖಲಿಸಿರುವುದು ಸರಿಯಲ್ಲ. ಜಾತಿ ನಿಂದನೆ ಕೇಸು ಹಾಕಿ ಅಮಾಯಕ ಮೀನುಗಾರ ಮಹಿಳೆಯರನ್ನು ಜೈಲಿನಲ್ಲಿ ಇರಿಸಲಾಗಿದೆ. ಕೂಡಲೇ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಮೀನುಗಾರರು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು.

ಇನ್ನು ಈ ಪ್ರತಿಭಟನೆಯಲ್ಲಿ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್, ಪ್ರಮೋದ್ ಮಧ್ವರಾಜ್ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. 'ಆ ಮಹಿಳೆಯೇ ಏನು ಆಕ್ಷೇಪ ಮಾಡಿಲ್ಲ. ನನಗೆ ಯಾವುದೇ ದ್ವೇಷ ಇಲ್ಲ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ. ಆದರೆ ಈ ಎಸ್‌ಪಿ ಇರುವ ತನಕ ಸರ್ಕಾರ ಮೀನುಗಾರರ ವಿರೋಧಿಯಾಗಿರುತ್ತದೆ. ಈ ಘಟನೆಯನ್ನು ವಿರೋಧಿಸುವ ದಲಿತ ನಾಯಕರ ಕುಟುಂಬಗಳು ಉದ್ಧಾರ ಆಗಿದ್ದು ಕೂಡ ಈ ಮಲ್ಪೆ ಬಂದರಿನಿಂದ' ಎಂದು ಕಿಡಿಕಾರಿದ್ದಾರೆ.

ಇನ್ನು ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ 'ಇದೊಂದು ದುರದೃಷ್ಟಕರ ಘಟನೆ. ಆದರೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಡೆದುಕೊಂಡಿರುವ ರೀತಿ ಒಪ್ಪಲು ಸಾಧ್ಯವಿಲ್ಲ. ಪೋಲಿಸ್ ಅಧಿಕಾರಿಗಳು ಯಾವ ಆದರದಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ? ಕಾನೂನು ಪಾಲನೆ ಮಾಡುತ್ತೇನೆ ಎನ್ನುವ ಎಸ್‌ಪಿ ಕಾನೂನಿಗೆ ಸರಿಯಾಗಿ ನಡೆದುಕೊಳ್ಳಬೇಕು. ಈ ಹಿಂದೆ ಮೀನುಗಾರರನ್ನು ಬಂಧಿಸುವ ಧೈರ್ಯ ಪೊಲೀಸ್ ಇಲಾಖೆಗೆ ಇರಲಿಲ್ಲ. ಮಲ್ಪೆ ಬಂದರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮಾಡಲಾಗಿದೆ. ಶೀಘ್ರವೇ ಜಾತಿ ನಿಂದನೆ ಕೇಸ್ ವಾಪಸ್ ಪಡೆಯಬೇಕು' ಎಂದು ಆಗ್ರಹಿಸಿದರು. ಈ ಪ್ರಕರಣದಿಂದ ಉಡುಪಿಯ ಮಲ್ಪೆ ಬಂದರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications