G Parameshwara Stone Pelting: ಕೊರಟಗೆರೆಯಲ್ಲಿ ಜಿ ಪರಮೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಲ್ಲೂ ತೂರಾಟ
ಕೊರಟಗೆರೆ, ಏಪ್ರಿಲ್ 19: ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ವೇಳೆ ಪೊಲೀಸರ ಮೇಲೆ ಕಲ್ಲೂ ತೂರಾಟ ಮಾಡಿರುವ ಘಟನೆ ನಡೆದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಬುಧವಾರ ತಾಲೂಕು ಕಚೇರಿಯಲ್ಲಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಕಿಡಿಗೇಡಿಯೊಬ್ಬ ಕಲ್ಲು ತೂರಾಟ ನಡೆಸಿದ್ದಾರೆ.

ಕೊರಟಗೆರೆ ತಾಲೂಕು ಕಚೇರಿ ಮೇಲೆ ತೂರಿದ ಕಲ್ಲು ಬಂದು ಮಹಿಳಾ ಪೊಲೀಸ್ ಪೇದೆಗೆ ತಗುಲಿ ಅವರ ತಲೆಗೆ ಪೆಟ್ಟಾಗಿದೆ. ತಾಲೂಕು ಕಚೇರಿ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ನಾಮಪತ್ರ ಸಲ್ಲಿಸಿ ಹೊರಬಂದು ಮಾತನಾಡಿದ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಕಚೇರಿ ಮೇಲೆ ಯಾರು ಕಲ್ಲು ಎಸೆದರು ಅಂತಾ ನನಗೆ ಗೊತ್ತಿಲ್ಲ. ನಾನು ನಾಮಪತ್ರ ಸಲ್ಲಿಸಲು ಒಳಗೆ ಹೋದಾಗ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರ ಬಳಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.
ಬುಧವಾರ ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳ ಗದ್ದುಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ನೂತನ ಶ್ರೀಗಳನ್ನು ಭೇಟಿ ಮಾಡಿದ ಅವರು ತಮ್ಮನ್ನು ಆಶೀರ್ವದಿಸುವಂತೆ ಕೋರಿದರು. ಬಳಿಕ ಮಠದಿಂದ ಹೊರಟ ಅವರು ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಬಳಿಕ ಮಾತನಾಡಿದ ಪರಮೇಶ್ವರ್ ಅವರು ಕಾನೂನಿನ ಚೌಕಟ್ಟಿನಲ್ಲಿ, ಸಂವಿಧಾನ ಚೌಕಟ್ಟಿನಲ್ಲಿ ಚುನಾವಣೆ ನಡೆಸಲು ಒಪ್ಪಿಕೊಂಡಿದ್ದೇವೆ. ಅದರನ್ವಯ ನಾನು ಇಂದು ನಾಮಪತ್ರ ಸಲ್ಲಿಸಿದ್ದೇನೆ. ಈ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಸೂಚನೆ ಇದೆ. ಮತದಾರರಿಗೆ ಮನವಿ ಮಾಡ್ತೀವಿ ಮೇ 10 ರಂದು ನನಗೆ ಮತಕೊಡಿ ಎಂದು ಕೊರಟಗೆರೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಕೊರಟಗೆರೆಯಿಂದ ಇಂದು ನಾಮಪತ್ರ ಸಲ್ಲಿಸಿದ್ದು ಇದು ಐತಿಹಾಸಿಕ ದಿನ ಆಗಲಿ ಎಂದು ಅಭಿಮಾನಿಗಳು ಬಯಸೋದು ಸ್ವಾಭಾವಿಕ. ನಾನು ಉನ್ನತ ಹುದ್ದೇಗೆ ಏರಲಿ ಎಂದು ಅಭಿಮಾನಿಗಳು ಆಸೆ ಇಟ್ಟುಕೊಂಡಿರುತ್ತಾರೆ ಅದು ಅಹಜ ಹೊಸದೇನಲ್ಲ. ಕೊರಟಗೆರೆ ಕ್ಷೇತ್ರದಿಂದ ನಾನು ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ಇದೆ ಎಂದರು.












Click it and Unblock the Notifications