Bengaluru 2nd Airport: ಕೇಂದ್ರ ಸಚಿವ ವಿ. ಸೋಮಣ್ಣ ಬೇಡಿಕೆ ಏನು?
ತುಮಕೂರು, ಡಿಸೆಂಬರ್ 23: ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ?. ಈ ಕುರಿತ ಗುಟ್ಟನ್ನು ಕರ್ನಾಟಕ ಸರ್ಕಾರ ಬಿಟ್ಟುಕೊಟ್ಟಿಲ್ಲ. ಹಲವು ಪ್ರದೇಶಗಳ ಹೆಸರುಗಳು ಕೇಳಿ ಬರುತ್ತಿವೆ. ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಯಾವುದೇ ಸ್ಥಳವನ್ನು ಇನ್ನೂ ಸಹ ಅಂತಿಮಗೊಳಿಸಿಲ್ಲ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಶೀಘ್ರವೇ ಈ ಕುರಿತು ವರದಿ ಸಲ್ಲಿಕೆಯಾಗಲಿದೆ.
ಸೋಮವಾರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಕುರಿತು ಮಾತನಾಡಿದ್ದಾರೆ. ತುಮಕೂರಿನಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ ಕೂಗಿಗೆ ವಿ. ಸೋಮಣ್ಣ ಸಹ ಪರೋಕ್ಷವಾಗಿ ಬೆಂಬಲ ಘೋಷಣೆ ಮಾಡಿದ್ದಾರೆ.

ವಿ. ಸೋಮಣ್ಣ ಹೇಳಿದ್ದೇನು?; ತುಮಕೂರಿನಲ್ಲಿ ಮಾತನಾಡಿದ ವಿ. ಸೋಮಣ್ಣ, "2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕುರಿತು ಸಂಬಂಧಪಟ್ಟವರೊಂದಿಗೆ ನಾನು ಎರಡು ಬಾರಿ ಮಾತನಾಡಿದ್ದೇನೆ. ಯಾರೊಂದಿಗೆ ಮಾತನಾಡಿದ್ದೇನೆ ಎಂದು ನಾನು ಹೇಳಲು ಬಯಸುವುದಿಲ್ಲ" ಎಂದು ಹೇಳಿದರು.
"ಹೊಸೂರಿನಲ್ಲಿ ವಿಮಾನ ನಿಲ್ದಾಣ ಮಾಡಬೇಕು ಎಂದು ತಮಿಳುನಾಡು ಸರ್ಕಾರ ಹೇಳಿದೆ. ವಿಮಾನ ನಿಲ್ದಾಣದ ವಿಚಾರದಲ್ಲಿ ನನ್ನ ಮೊದಲ ಆದ್ಯತೆ ತುಮಕೂರು-ಬೆಂಗಳೂರು ನಡುವೆ ಎಲ್ಲಿಯಾದರೂ ಮಾಡಿ. ಇಲ್ಲವಾದಲ್ಲಿ ಹೆಚ್‌ಎಎಲ್‌ನಲ್ಲಿ ಈಗಿರುವ ನಿಲ್ದಾಣವನ್ನು ಪೂರ್ತಿಯಾಗಿ ಪುನರ್ ಅಭಿವೃದ್ಧಿಗೊಳಿಸಬಹುದು, ಖರ್ಚು ಸಹ ಕಡಿಮೆಯಾಗಲಿದೆ" ಎಂದರು.
"ತಾಂತ್ರಿಕವಾಗಿಯೂ ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಲು ಅನುಕೂಲವಾಗಲಿದೆ. ಹತ್ತಾರಯ ಬೈಪಾಸ್‌ಗಳು ಇಲ್ಲಿ ಬರುತ್ತವೆ. ಬೆಂಗಳೂರು ಹೊರತುಪಡಿಸಿದರೆ ನಾಗಾಲೋಟದಲ್ಲಿ ತುಮಕೂರು ಬೆಳೆಯುತ್ತಿದೆ. ತುಮಕೂರಿಗೆ ಹೊಂದಿಕೊಂಡಿರುವ ದಾಬಸ್‌ಪೇಟೆ, ನೆಲಮಂಗಲದಲ್ಲಿಯೂ ಮಾಡಲು ನಮ್ಮ ತರಕಾರಿಲ್ಲ" ಎಂದು ವಿ. ಸೋಮಣ್ಣ ತಿಳಿಸಿದರು.
"ನಾನು ವಿಮಾನ ನಿಲ್ದಾಣದ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಮನವಿ ಮಾಡಿಲ್ಲ. ಇದು ಕೇಂದ್ರದ ಯೋಜನೆಯಲ್ಲ. ರಾಜ್ಯದ ಯೋಜನೆಯಾಗಿದೆ. ಆದ್ದರಿಂದ ಇವತ್ತು ಅಥವ ನಾಳೆ ನಾನು ರಾಜ್ಯಕ್ಕೆ ಪತ್ರವೊಂದನ್ನು ಈ ವಿಚಾರದಲ್ಲಿ ಬರೆಯಲಿದ್ದೇನೆ" ಎಂದರು.
ತಮಿಳುನಾಡು ಸರ್ಕಾರದ ಹೊಸೂರು ವಿಮಾನ ನಿಲ್ದಾಣ ಘೋಷಣೆ ಬಳಿಕ ಕರ್ನಾಟಕ ಸರ್ಕಾರ ಬೆಂಗಳೂರು ಸಮೀಪ ಮತ್ತೊಂದು ವಿಮಾನ ನಿಲ್ದಾಣ ಯೋಜನೆ ಘೋಷಣೆ ಮಾಡಿತು. ಆದರೆ 2ನೇ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ? ಎಂಬುದು ಇನ್ನೂ ಸಹ ಅಂತಿಮಗೊಂಡಿಲ್ಲ.
ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈಗಾಗಲೇ ಬೆಂಗಳೂರು ಹೊರವಲಯದಲ್ಲಿ 2ನೇ ವಿಮಾನ ನಿಲ್ದಾಣದ ಕುರಿತು ಕೆಐಎಡಿಬಿ, ಬಿಎಂಆರ್‌ಸಿಎಲ್, ಬಿಡಿಎ, ಬಿಎಂಆರ್‌ಡಿಎ ಮತ್ತು ಸಂಬಂಧಿಸಿದ ಇನ್ನಿತರೆ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಡಿ. ಕೆ. ಶಿವಕುಮಾರ್ ಕನಕಪುರ, ರಾಮನಗರ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಡಾ. ಜಿ. ಪರಮೇಶ್ವರ ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಇನ್ನೂ ಸಹ ಖಚಿತವಾಗಿಲ್ಲ.
ಈ ಕುರಿತು ಡಿ. ಕೆ. ಶಿವಕುಮಾರ್ ಮಾತನಾಡಿದ್ದು, "ಈಗ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇರುವುದು ಎರಡು ರನ್‌ವೇ, ಮುಂದಕ್ಕೆ ಎರಡು ರನ್ ವೇ ಸಾಲದು. ಅದಕ್ಕೆ ಮುಂಜಾಗ್ರತೆಯಾಗಿ ಎರಡನೇ ಏರ್ ಪೋರ್ಟ್ ಮಾಡಬೇಕು ಎಂದು ಹತ್ತಾರು ಸಭೆಗಳು ಆಗಿವೆ. ಈಗಲೇ ಇದರ ಬಗ್ಗೆ ತಯಾರಿ ಮಾಡಿಕೊಳ್ಳಬೇಕು. ಅದಕ್ಕಾಗಿ ಏಳೆಂಟು ಜಾಗ ಗುರುತಿಸಲಾಗುತ್ತಿದೆ. ನೀರು, ರಸ್ತೆ ಸೇರಿ ಹಲವು ಸೌಕರ್ಯ ನೋಡಿಕೊಂಡು ಏರ್‌ಪೋರ್ಟ್ ನಿರ್ಮಾಣ ಮಾಡಬೇಕು" ಎಂದು ಹೇಳಿದ್ದಾರೆ.
"ಭೂಮಿ, ಗುಡ್ಡ ಗಾಡು ನೋಡಿಕೊಂಡು ಆಯ್ಕೆ ಮಾಡುತ್ತಾರೆ. ನಾವು ಜಾಗ ಅಂತಿಮಗೊಳಿಸಿ ದೆಹಲಿಗೆ ವರದಿ ಕಳಿಸಬೇಕಾಗುತ್ತದೆ. ಅವರು ಬಂದು ಎಲ್ಲ ವರದಿ ನೋಡಿ ಯಾವ ಸ್ಥಳದಲ್ಲಿ ಏರ್‌ಪೋರ್ಟ್ ಮಾಡಲಿದ್ದಾರೆ? ಯಾವಾಗ ಅನುಮತಿ ನೀಡುತ್ತಾರೆಯೋ ಅಂದಿನಿಂದ ಕೆಲಸ ಆಗಬೇಕು. 2034ರೊಳಗೆ ಹೊಸ ಏರ್‌ರ್ಪೋರ್ಟ್ ಕೆಲಸ ನಡೆಯಬೇಕು. ಇದಕ್ಕೆ ಸುಮಾರು ನಾಲ್ಕು ಸಾವಿರ ಎಕರೆ ಜಾಗ ಬೇಕಾಗುತ್ತದೆ" ಎಂದು ತಿಳಿಸಿದರು.
"ದೆಹಲಿ, ಮುಂಬೈ ಬಿಟ್ಟರೆ ಮೂರನೆಯದ್ದೇ ಬೆಂಗಳೂರು ಏರ್‌ಪೋರ್ಟ್. 150 ಕಿಲೋ ಮೀಟರ್ ನಡುವೆ ನಿಲ್ದಾಣ ಮಾಡುವಂತಿಲ್ಲ. ಈಗ ಎರಡು ರನ್ ವೇಗಳಿವೆ. ಇಲ್ಲಿರುವ ಗ್ರೋಥ್‌ಗೆ ಈ ಎರಡು ರನ್ ವೇ ಸಾಕಾಗಲ್ಲ. ಒಪ್ಪಂದ ಮುಗಿಯುವುದೊರಳಗೆ ಮತ್ತೊಂದು ಮಾಡಬೇಕು. ಆ ಒಪ್ಪಂದ 2034ಕ್ಕೆ ಕ್ಲೋಸ್ ಆಗಲಿದೆ" ಎಂದು ಹೇಳಿದ್ದಾರೆ.












Click it and Unblock the Notifications